ಗೋವಾ ಸಚಿವ ಮೈಕಲ್ ಲೋಬೊ ಬಿಜೆಪಿಗೆ ಗುಡ್ ಬೈ:ತೀವ್ರ ವಾಗ್ದಾಳಿ
Team Udayavani, Jan 10, 2022, 2:16 PM IST
ಪಣಜಿ: ಕಲಂಗುಟ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಚಿವ ಮೈಕಲ್ ಲೋಬೊ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆಯುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷದಲ್ಲಿ ಸ್ಥಾನವಿಲ್ಲದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಕಾರ್ಯಕರ್ತರು ಕೂಡ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದೆ. ಪಕ್ಷ ಬೆಳೆದಿದೆ ಆದರೆ ಇದು ಸಾಮಾನ್ಯ ಕಾರ್ಯಕರ್ತರ ಕೆಲಸವಲ್ಲ ಎಂದು ಮೈಕಲ್ ಲೋಬೊ ಬಿಜೆಪಿ ವಿರುದ್ಧ ಠೀಕಾಪ್ರಹಾರ ನಡೆಸಿದರು.
ಬಿಜೆಪಿ ನಾಯಕರು ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ನಿರಂತರವಾಗಿ ದೂರು ನೀಡಿದರೂ ಮುಖಂಡರು ನಮ್ಮ ಮಾತು ಕೇಳುತ್ತಿಲ್ಲ. ಸದ್ಯ ಇತರ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಯುತ್ತಿದೆ ಎಂದ ಮೈಕಲ್ ಲೋಬೊ, ನೀವು ಕಾಂಗ್ರೆ ಸ್ ಪಕ್ಷ ಪ್ರವೇಶಿಸುವಿರೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.