ತನಗೆ ಬಂದ ಉಡುಗೊರೆಯನ್ನು ಮೆಂಟರ್ಗೆ ನೀಡಿದ ನಟರಾಜನ್
Team Udayavani, Apr 2, 2021, 11:30 PM IST
ಚೆನ್ನೈ: ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಯಶಸ್ಸಿಗೆ ಕಾರಣರಾದ ಟೀಮ್ ಇಂಡಿಯಾ ವೇಗಿ ಟಿ. ನಟರಾಜನ್ ತಮಗೆ ಉಡುಗೊರೆಯಾಗಿ ದೊರೆತ “ಮಹೀಂದ್ರ ಥಾರ್ ಎಸ್ಯುವಿ ಜೀಪ್’ ಅನ್ನು ತಮ್ಮ ಮೆಂಟರ್ ಜಯಪ್ರಕಾಶ್ ಅವರಿಗೆ ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
“ನನ್ನ ಈ ಸಾಧನೆಯ ಹಿಂದೆ ಜಯಪ್ರಕಾಶ್ ಅವರ ಕೊಡುಗೆ ಅಪಾರ. ನಾನು ಇಂದು ಈ ಮಟ್ಟಕ್ಕೆ ಬೆಳೆಯ ಬೇಕಾದರೆ ಅವರೇ ಕಾರಣ. ಬಡತನದಿಂದ ಬೆಳೆದು ಬಂದ ನನ್ನನ್ನು ಪೂರ್ಣ ಪ್ರಮಾಣದ ಕ್ರಿಕೆಟಿಗನನ್ನಾಗಿ ರೂಪಿಸಿದ್ದಲ್ಲಿ ಜಯಪ್ರಕಾಶ್ ಅವರ ಶ್ರಮ ಅಪಾರ. ಆದ್ದರಿಂದ ಈ ಉಡುಗೊರೆ ಅವರಿಗೆ ಸಲ್ಲಬೇಕು’ ಎಂದು ನಟರಾಜನ್ ತಿಳಿಸಿದರು.
ಜಯಪ್ರಕಾಶ್ ಅವರ ಪ್ರೀತಿಗೆ ನಟರಾಜನ್ ತಮ್ಮ ಜೆರ್ಸಿಯ ಹೆಸರಿನ ಮುಂದೆ “ಜೆಕೆ’ ಎಂದು ಬರೆದು ಗೌರವವನ್ನು ಸಲ್ಲಿಸುತ್ತಿದ್ದಾರೆ. ಅಲ್ಲದೆ ನಟರಾಜನ್ ಅವರ ಎಡ ಮೊಣಕೈಯಲ್ಲಿ “ಜೆಕೆ’ ಎಂಬ ಟ್ಯಾಟೂ ಕೂಡ ಹಾಕಿಕೊಂಡು ತಮ್ಮ ಮೆಂಟರ್ಗೆ ವಿಶೇಷ ಸ್ಥಾನ ನೀಡಿದ್ದಾರೆ.
ಜೀಪ್ ಪಡೆದ ಠಾಕೂರ್
ಭಾರತದ ಮತ್ತೋರ್ವ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ಕೂಡ ಮಹೀಂದ್ರ ಕಂಪೆನಿ ಗಿಫ್ಟ್ ಆಗಿ ನೀಡಿದ ಜೀಪ್ ಲಭಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೀಪ್ ಜತೆಗೆ ನಿಂತ ಫೋಟೊವನ್ನೂ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯ ಪ್ರವಾಸದಲ್ಲಿ ಅತ್ಯುತ್ತಮ ಸಾಧನೆಗೈದ ಭಾರತದ 6 ಯುವ ಕ್ರಿಕೆಟಿಗರಿಗೆ ಮಹೀಂದ್ರ ಸಂಸ್ಥೆಯ ಆನಂದ ಮಹೀಂದ್ರ ಅವರು ಈ ಉಡುಗೊರೆ ಘೋಷಿಸಿದ್ದರು.