ಬೆಲೆ ಏರಿಕೆ: ಕ್ರಮಕ್ಕೆ ಸಿದ್ದು ಆಗ್ರಹ
Team Udayavani, Apr 11, 2020, 5:34 AM IST
ಬೆಂಗಳೂರು: ಲಾಕ್ಡೌನ್ ಸನ್ನಿವೇಶ ದುರ್ಬಳಕೆ ಮಾಡಿಕೊಂಡು ಕೆಲ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿದ್ದಾರೆ. ಸರಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆಯನ್ನು ಶೇ. 20-30ರಷ್ಟು ಹೆಚ್ಚಿಸಿದರೆ ಈಗಾಗಲೇ ಕಷ್ಟದಲ್ಲಿರುವ ಬಡವರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಅಕ್ಕಿ, ಬೇಳೆ ಬೆಲೆ ಹೆಚ್ಚಾದರೆ ಖರೀದಿ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಅವರು, ಈಗಲೇ ಅವರಿಗೆ ದುಡಿಮೆ ಇಲ್ಲ, ಹಣವೂ ಇಲ್ಲ. ಈ ಕುರಿತು ಗಮನ ಹರಿಸಿ, ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಆಹಾರ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಹೇಳಿದ್ದಾರೆ.
ಹಣ್ಣು, ತರಕಾರಿ ಸಹಿತ ತಾವು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವವರೇ ಇಲ್ಲ ಎಂದು ಅನೇಕ ರೈತರು ದೂರವಾಣಿ ಕರೆ ಮಾಡಿ ಹೇಳುತ್ತಿದ್ದಾರೆ. ಅದೇ ರೀತಿ ಭತ್ತ, ರಾಗಿಯನ್ನೂ ಖರೀದಿಸುತ್ತಿಲ್ಲ ಎನ್ನುತ್ತಿದ್ದಾರೆ. ಈ ಕುರಿತೂ ಸರಕಾರ ಗಮನ ಹರಿಸಬೇಕು ಎಂದವರು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.