CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೆಂಗಳೂರಲ್ಲಿ ಮಲಯಾಳಂ ಚಿತ್ರೋತ್ಸವ!

ಒಂದೆರೆಡು ತಿಂಗಳಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಅಕಾಡೆಮಿಯ ವತಿಯಿಂದ ಬೆಂಗಳೂರಿನಲ್ಲಿ ಬಂಗಾಲಿ ಚಿತ್ರೋತ್ಸವವನ್ನು ಆಯೋಜಿಸಲಾಗಿತ್ತು. ಈಗ ಇನ್ನೊಂದು ಭಾಷೆಯ ಜನಪ್ರಿಯ ಚಿತ್ರಗಳನ್ನು ಅಕಾಡೆಮಿ, ಬೆಂಗಳೂರಿಗರಿಗೆ ತೋರಿಸುವುದಕ್ಕೆ ಸಜ್ಜಾಗಿದೆ. ನಾಳೆಯಿಂದ ಮೂರು ದಿನಗಳ ಕಾಲ ಅಕಾಡೆಮಿಯು ಮಲಯಾಳಂ ಚಿತ್ರೋತ್ಸವವನ್ನು ಆಯೋಜಿಸಿದ್ದು, ಈ ಚಿತ್ರೋತ್ಸವದಲ್ಲಿ ಒಟ್ಟು ಎಂಟು ಚಿತ್ರಗಳು ಪ್ರದರ್ಶನವಾಗಲಿವೆ.

ಈ ಚಿತ್ರೋತ್ಸವ ನಾಳೆ (ಆಗಸ್ಟ್‌ 11) ಪ್ರಾರಂಭವಾಗಲಿದೆ. ಚಿತ್ರೋವವನ್ನು ಉದ್ಘಾಟಿಸಲಿಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಬರಲಿದ್ದಾರೆ. ಜೊತೆಗೆ ವಾರ್ತಾ ಇಲಾಖೆಯ ನಿರ್ದೇಶಕ ಡಾ.ಪಿ.ಎಸ್‌. ಹರ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.
ಗೋವಿಂದು ಹಾಜರಿದ್ದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರು ಈ ಚಿತ್ರೋತ್ಸವದ ಬಗ್ಗೆ ಮಾತನಾಡಲಿದ್ದಾರೆ. 

ಇನ್ನು ಮಲಯಾಳಂ ನಿರ್ದೇಶಕರಾದ ದಿಲೀಶ್‌ ಪೋತನ್‌, ವಿಧು ವಿನ್ಸೆಂಟ್‌, ನಟರಾದ ವಿನಯ್‌ ಫೋರ್ಟ್‌ ಮುಂತಾದವರು ಅಂದು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಉದ್ಘಾ ಟನಾ ಚಿತ್ರವಾಗಿ "ಮ್ಯಾನ್‌ ಹೋಲ್‌' ಪ್ರದರ್ಶನವಾಗಲಿದೆ. ನಂತರ ಎರಡು ದಿನಗಳ ಕಾಲ ಫ‌ಹಾದ್‌ ಫಾಸಿಲ್‌ ಅಭಿನಯದ "ಮಹೇಶಂಟೆ ಪ್ರತೀಕಾರಂ', "ಆರಡಿ', "ಕಿಸ್ಮತ್‌', "ಗಾಡ್‌ ಸೇ', "ಕಮ್ಮಾಟಿ ಪಾದಂ' ಮುಂತಾದ ಚಿತ್ರಗಳು ಪ್ರದರ್ಶನವಾಗಲಿದೆ.

ಆಗಸ್ಟ್‌ 11-13ರವರೆಗೂ ಬೆಂಗಳೂರಿನಲ್ಲಿ ಬಂಗಾಲಿ ಚಿತ್ರೋತ್ಸವವು ನಡೆದರೆ, ಅದಕ್ಕೆ ಪ್ರತಿಯಾಗಿ ತಿರುವನಂತಪುರದಲ್ಲಿ ಆಗಸ್ಟ್‌ 26ರಿಂದ 28ರವರೆಗೂ ಮೂರು ದಿನಗಳ ಕಾಲ ಕನ್ನಡ ಚಿತ್ರೋತ್ಸವ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಇತ್ತೀಚಿನ ಕೆಲವು ಜನಪ್ರಿಯ ಚಿತ್ರಗಳಾದ "ಯೂ ಟರ್ನ್', "ತಿಥಿ', "ಕಿರಿಕ್‌ ಪಾರ್ಟಿ', "ಹರಿಕಥಾ ಪ್ರಸಂಗ', "ಮಾರಿಕೊಂಡವರು', "ನಾನು ಅವನಲ್ಲ ಅವಳು' ಮತ್ತು "ರಾಮ ರಾಮಾ ರೇ' ಚಿತ್ರಗಳು ಪ್ರದರ್ಶನವಾಗಲಿವೆ. 

Back to Top