CONNECT WITH US  

ಕನ್ನಡ ಸಿನ್ಮಾ ಅಂದ್ರೆ ಹೊಟ್ಟೆ ಕಿಚ್ಚಾಗತ್ತೆ!

ಪ್ರೀತಿಯಿಂದ ಹೇಳಿಕೊಂಡ "ಅರ್ಜುನ್‌ ರೆಡ್ಡಿ'

"ಈಗಿನ ಕನ್ನಡ ಸಿನಿಮಾಗಳನ್ನು ನೋಡಿದರೆ ನನಗೆ ಒಂಥರಾ ಹೊಟ್ಟೆಕಿಚ್ಚಾಗತ್ತೆ...'  ಹೀಗೆ ಹೇಳಿದ್ದು ತೆಲುಗು ನಟ ವಿಜಯ್‌ ದೇವರಕೊಂಡ. "ಅರ್ಜುನ್‌ ರೆಡ್ಡಿ' ಖ್ಯಾತಿಯ ವಿಜಯ್‌ ದೇವರಕೊಂಡ ಯಾಕೆ ಈ ರೀತಿ ಹೇಳಿದರು ಎಂಬ ಪ್ರಶ್ನೆ ಮೂಡುವುದು ಸಹಜ. ಅವರು ಬೇರೆ ಯಾವುದೋ ಅರ್ಥದಲ್ಲಿ ಈ ಮಾತನ್ನು ಹೇಳಲಿಲ್ಲ. ಈಗೀಗ ಮೂಡಿ ಬರುತ್ತಿರುವ ಕನ್ನಡ ಚಿತ್ರಗಳ ಗಟ್ಟಿತನ ಮತ್ತು ಮೇಕಿಂಗ್‌ ಕುರಿತು ಪ್ರೀತಿಯಿಂದ ಹೇಳಿಕೊಂಡರು.

ಅಂದಹಾಗೆ, ವಿಜಯ್‌ ದೇವರಕೊಂಡ ಈ ರೀತಿ ಹೇಳಿದ್ದು, "ಚಮಕ್‌' ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಂದರ್ಭದಲ್ಲಿ. ವಿಶೇಷ ಅತಿಥಿಯಾಗಿ ಆಗಮಿಸಿದ್ದ ವಿಜಯ್‌ ದೇವರಕೊಂಡ, ಅಂದು ಮಾತಾಡಿದ್ದಿಷ್ಟು. "ಕನ್ನಡದಲ್ಲೀಗ ಹೊಸಬಗೆಯ ಚಿತ್ರಗಳು ಬರುತ್ತಿವೆ. ಈಗಿನ ಸಿನಿಮಾಗಳನ್ನು ನೋಡಿದರೆ ನನಗೆ ಜಲಸ್‌ ಆಗುತ್ತೆ. ಯಾಕೆಂದರೆ, ಇಲ್ಲಿ ಒಳ್ಳೆಯ ಸ್ಕ್ರಿಪ್ಟ್ ತಯಾರಾಗುತ್ತಿದೆ. ಇತ್ತೀಚೆಗಂತೂ ಬರುವ ಚಿತ್ರಗಳಲ್ಲಿ ಸಾಕಷ್ಟು ವಿಶೇಷತೆಗಳಿರುತ್ತವೆ.

ಶಿವರಾಜಕುಮಾರ್‌ ಅವರ "ಮಫ್ತಿ' ಟ್ರೇಲರ್‌ ಸೇರಿದಂತೆ ಇತರೆ ಚಿತ್ರಗಳು ಕುತೂಹಲ ಮೂಡಿಸಿವೆ. ಇನ್ನು, ಕರ್ನಾಟಕವು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ತಮಿಳಿನ ಸೂಪರ್‌ಸ್ಟಾರ್‌ ರಜನಿಕಾಂತ್‌, ಬಾಲಿವುಡ್‌ ನಟಿ ಐಶ್ವರ್ಯಾ ರೈ, ತೆಲುಗಿನ ನಟಿ ಅನುಷ್ಕಾ ಶೆಟ್ಟಿ, ಅರ್ಜುನ್‌ ಸರ್ಜಾ ಹೀಗೆ ಅನೇಕ ಪ್ರತಿಭಾವಂತ ನಟರನ್ನು ಕೊಟ್ಟಿದೆ. ಕರ್ನಾಟಕ ಅಂದಾಗ ನನಗೆ ತಕ್ಷಣ ನೆನಪಾಗೋದು ಭಾರತ ಕ್ರಿಕೆಟ್‌ ತಂಡದಲ್ಲಿದ್ದ ವೇಗದ ಬೌಲರ್‌ಗಳಾದ ವೆಂಕಟೇಶ್‌ ಪ್ರಸಾದ್‌ ಮತ್ತು ಜಾವಗಲ್‌ ಶ್ರೀನಾಥ್‌.

ಇನ್ನೊಂದು ವಿಷಯ ಹೇಳುವುದಾದರೆ, ಭಾರತದ ಭೂಪಟದಲ್ಲಿ ಕರ್ನಾಟಕ ಮ್ಯಾಪ್‌ ಶೇ.40 ರಷ್ಟಿದೆ. ಕರ್ನಾಟಕ ಮ್ಯಾಪ್‌ ತೆಗೆದರೆ ಭಾರತ ಭೂಪಟ ಪರಿಪೂರ್ಣ ಎನಿಸೋದಿಲ್ಲ' ಎಂದು ಕರ್ನಾಟಕದ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದರು ವಿಜಯ್‌ ದೇವರಕೊಂಡ. "ಗಣೇಶ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ "ಚಮಕ್‌' ಶತದಿನ ಕಾಣಲಿ. ನಾನು ಮತ್ತು ನನ್ನ ಫ್ರೆಂಡ್ಸ್‌, "ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ' ಚಿತ್ರ ಬಂದಾಗ,

ಕನ್ನಡದಲ್ಲಿ ಕಡಿಮೆ ಬಜೆಟ್‌ ಹಾಕಿ ಮಾಡಿದ "ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ' ಚಿತ್ರ ದೊಡ್ಡ ಯಶಸ್ಸು ಪಡೆಯಿತು ಅಂತ ಮಾತಾಡಿಕೊಂಡಿದ್ದೆವು. ಆದರೆ, ಈ ಕಾರ್ಯಕ್ರಮಕ್ಕೆ ಬಂದಾಗಲಷ್ಟೇ ಸುನಿ ಅವರೇ ಆ ಚಿತ್ರದ ನಿರ್ದೇಶಕರು ಅಂತ ಗೊತ್ತಾಗಿದ್ದು ಎಂದು ಹೇಳಿದ ವಿಜಯ್‌ ದೇವರಕೊಂಡ, "ಅರ್ಜುನ್‌ ರೆಡ್ಡಿ' ಚಿತ್ರದ ಡೈಲಾಗ್‌ ಹೇಳಿ ರಂಜಿಸಿದರು. "ಕಿರಿಕ್‌ ಪಾರ್ಟಿ' ಚಿತ್ರದ "ಬೆಳಗೆದ್ದು ಯಾರ ಮುಖವಾ ನಾನೂ ನೋಡಿದೆ ...' ಹಾಡಿನ ಸಾಲು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

Trending videos

Back to Top