CONNECT WITH US  

ವಿತರಕರ ಮೇಲೆ ಗರಂ ಆದ ನಿರ್ಮಾಪಕಿ

ರಘುವೀರನಿಗೆ ಚಿತ್ರಮಂದಿರ ಸಮಸ್ಯೆ

"ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡ್ತೀವಿ ಅಂದ್ರು. ಮಾಡ್ಲಿಲ್ಲ. ಕೊನೆಗೆ 48 ಚಿತ್ರಮಂದಿರಗಳಷ್ಟೇ ಸಿಕ್ಕಿವೆ, ಅಲ್ಲಿ ಬಿಡುಗಡೆ ಮಾಡ್ತೀವಿ ಅಂದ್ರು, ಆದರೆ, ಬಿಡುಗಡೆ ಮಾಡಿದ್ದು ಮಾತ್ರ 37 ಚಿತ್ರಮಂದಿರಗಳಲ್ಲಿ. ಅಷ್ಟೇ ಅಲ್ಲ, 50 ಸಾವಿರ ರೂಹಣ ಪಡೆದರೂ, ಮಂಡ್ಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿಲ್ಲ. ಜನ ಬರಲಿ, ಬರದೇ ಇರಲಿ, ಚಿತ್ರ ಪ್ರದರ್ಶಿಸಬೇಕಿತ್ತು. ಆದರೆ, ನನಗೆ ಮೋಸ ಮಾಡಿದ್ದಾರೆ. ಹಣ ಪಡೆದು ಅನ್ಯಾಯ ಮಾಡಿದ್ದಾರೆ...'

ಹೀಗೆ ಒಂದೇ ಉಸಿರಲ್ಲಿ ಆರೋಪಗಳ ಸುರಿಮಳೆಗೈದರು. ನಿರ್ಮಾಪಕಿ ಕಮ್‌ ನಟಿ ಧೇನು ಅಚ್ಚಪ್ಪ. ಅವರು ಹೇಳಿಕೊಂಡಿದ್ದು "ರಘುವೀರ' ಚಿತ್ರಕ್ಕೆ ಆಗಿರುವ ಅನ್ಯಾಯದ ಕುರಿತು. ಆರೋಪಿಸಿದ್ದು, ವಿತರಕ ರಾಜು ಅವರ ಮೇಲೆ. ಬೇರೆ ಚಿತ್ರವೊಂದರ ಪತ್ರಿಕಾಗೋಷ್ಠಿ ನಡೆಯುತ್ತಿರುವ ಗ್ಯಾಪಲ್ಲಿ ಬಂದು ಪತ್ರಕರ್ತರ ಮುಂದೆ ಅಳಲು ತೋಡಿಕೊಂಡರು ಧೇನು ಅಚ್ಚಪ್ಪ.

ಪಕ್ಕದಲ್ಲೇ ವಿತರಕ ರಾಜು ಅವರನ್ನು ಕೂರಿಸಿಕೊಂಡಿದ್ದ ಧೇನು ಅಚ್ಚಪ್ಪ, "ವಿತರಕರು ಇಂತಿಷ್ಟು ಚಿತ್ರಮಂದಿರ ಮಾಡಿಕೊಡ್ತೀನಿ ಅಂತ ಹೇಳಿದ್ದರು. ಆದರೆ, ಮಾತು ತಪ್ಪಿದರು. 50 ಸಾವಿರ ರೂ ಪಡೆದು, ಮಂಡ್ಯದಲ್ಲಿ ಯಾವ ಚಿತ್ರಮಂದಿರದಲ್ಲೂ ಚಿತ್ರವನ್ನೇ ಹಾಕಿಲ್ಲ. ಸರಿಯಾಗಿ ಚಿತ್ರಮಂದಿರ ವ್ಯವಸ್ಥೆ ಮಾಡಿಲ್ಲ. ಪೋಸ್ಟರ್‌ ಮತ್ತು ಪೇಸ್ಟ್‌ಗೆ ಹಣ ಕೊಟ್ಟರೂ, ಸರಿಯಾಗಿ ಪೋಸ್ಟರ್ ಹಾಕಿಸಿಲ್ಲ.

ಕಮಿಷನ್‌ ಹಣ 2 ಲಕ್ಷ ಕೊಟ್ಟರೂ, ಸರಿಯಾಗಿ ಕೆಲಸ ಮಾಡಿಲ್ಲ. ಹೇಳಿದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಂಡಿಲ್ಲ. ಮಾಲ್‌ಗ‌ಳಲ್ಲೂ ರಾತ್ರಿ ಲೇಟ್‌ ಶೋ ಹಾಕಿದರೆ ಯಾರು ನೋಡ್ತಾರೆ? ಒಂದುವರೆ ವರ್ಷದಿಂದ ನಾನು ಸರಿಯಾಗಿ ಊಟ ಮಾಡದೆ, ಹಗಲಿರುಳು ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇನೆ. ಹೇಳಿದ ಮಾತು ತಪ್ಪಿರುವ ವಿತರಕರು ನನಗೆ ಆಗಿರುವ ಅನ್ಯಾಯ ಸರಿಪಡಿಸಬೇಕು' ಅಂತ ಪಟ್ಟು ಹಿಡಿದರು.

ಪಕ್ಕದಲ್ಲೇ ಸುಮ್ಮನೆ ಕೂತಿದ್ದ ರಾಜು ಮೈಕ್‌ ಹಿಡಿದುಕೊಂಡು ಮಾತಿಗಿಳಿದರು. "ನಾನು ನನ್ನ ಕೆಲಸ ಸರಿಯಾಗಿ ಮಾಡಿದ್ದೇನೆ. ಪೋಸ್ಟರ್ ಹಾಕಿಸಿಲ್ಲ ಅಂತ ಆರೋಪಿಸುತ್ತಾರೆ. ನಿರ್ಮಾಪಕರ ಎದುರಲ್ಲೇ ನಾನು ಪೋಸ್ಟರ್ ಹಾಕಿಸುವವರಿಂದ ಸಹಿ ಮಾಡಿಸಿ ಕಳುಹಿಸಿದ್ದೇನೆ. ಇವತ್ತಿನಿಂದ ಚಕ್ಕಿಂಗ್‌ ಮಾಡಬೇಕು. ಮೂವಿಲ್ಯಾಂಡ್‌ ಥಿಯೇಟರ್‌ಗೆ ಅಗ್ರಿಮೆಂಟ್‌ ಕೂಡ ನಿರ್ಮಾಪಕರೇ ಹಾಕಿಸಿಕೊಂಡಿದ್ದಾರೆ.

ಬಾಡಿಗೆ ಕೊಡದೆ ಹೇಗೆ ಚಿತ್ರಮಂದಿರಗಳಲ್ಲಿ ಹಾಕಲಿ? ಶೇಕಡವಾರುವಿನಂತೆ ಪ್ರದರ್ಶನ ಮಾತಾಡಿದ್ದೆ. ಕೆಲವು ಕಡೆ ಪ್ರದರ್ಶನವೊಂದಕ್ಕೆ 900 ರೂ ಗಳಿಕೆ ಆಗಿದೆ. ಅಲ್ಲಿ ಚಿತ್ರ ಕಿತ್ತು ಹಾಕಿದ್ದಾರೆ. ಮಂಡ್ಯದ ಮಹೇಶ್‌ 50 ಸಾವಿರ ಪಡೆದಿದ್ದಾರೆ. ಅವರು ಚಿತ್ರಮಂದಿರದಲ್ಲಿ ಸಿನಿಮಾ ಹಾಕಿಲ್ಲ. ಈ ವಾರ ನಾನು ಹಾಕಬೇಕು ಅಂತ ಪಟ್ಟು ಹಿಡಿದು ಕೂರುತ್ತೇನೆ. ನಾನು ಯಾರಿಗೂ ಮೊಸ ಮಾಡಿಲ್ಲ. ಇದುವರೆಗೆ 90 ಚಿತ್ರ ವಿತರಣೆ ಮಾಡಿದ್ದೇನೆ.

ಹಾಗೆ ಮೋಸ ಮಾಡಿದ್ದರೆ, ಇಂದಿಗೂ ಬಾಡಿಗೆ ಮನೆಯಲ್ಲಿರುತ್ತಿರಲಿಲ್ಲ. ನಿರ್ಮಾಪಕರಿಗೆ ಆಗಿರುವ ತೊಂದರೆ ಸರಿಪಡಿಸಲು ಪ್ರಯತ್ನಿಸುತ್ತೇನೆ' ಅಂದರು ರಾಜು. ನಿರ್ದೇಶಕ ಸೂರ್ಯಸತೀಶ್‌, "ವಿತರಕರು ಹೇಳಿದ್ದೊಂದು ಮಾಡಿದ್ದೊಂದು. ಕೂಡಲೇ ಆಗಿರುವ ತಪ್ಪು ಸರಿಪಡಿಸಬೇಕು ಎಂದರು. ನಟ ಮೂರ್ತಿ ಕೂಡ "ಹೊಸಬರು ಬಂದಾಗ, ಅವರಲ್ಲಿ ಸರಿಯಾಗಿ ನಡೆದುಕೊಳ್ಳಿ. ವಾಣಿಜ್ಯ ಮಂಡಳಿ ಈ ಕೂಡಲೇ ವಿತರಕರು ಮಾಡಿರುವ ತಪ್ಪಿನ ಬಗ್ಗೆ ಕ್ರಮ ಕೈಗೊಂಡು ನಿರ್ಮಾಪಕರ ಸಮಸ್ಯೆ ಬಗೆಹರಿಸಬೇಕು' ಎಂದರು.

Trending videos

Back to Top