CONNECT WITH US  

ಲಂಬೋದರದಲ್ಲಿ ಯುನಿಫಾರಂ ತೊಟ್ಟ ಯೋಗಿ

ಸ್ಕೂಲ್‌ ಹುಡುಗ ಆಗೋದು ಹೊಸ ಟ್ರೆಂಡ್‌

ನಾಯಕ ನಟರು ತಮ್ಮ ಪಾತ್ರಕ್ಕಾಗಿ ದೇಹವನ್ನು ಹಿಗ್ಗಿಸೋದು, ಕುಗ್ಗಿಸೋದು ಹೊಸದಲ್ಲ. ಪಾತ್ರಕ್ಕೆ ಹೊಂದಿಕೆಯಾಗಬೇಕೆಂಬ ಕಾರಣಕ್ಕೆ ಗೆಟಪ್‌ ಬದಲಾಯಿಸುತ್ತಲೇ ಇರುತ್ತಾರೆ. ಅನೇಕ ನಟರು ಸ್ಕೂಲ್‌ ಡೇಸ್‌ ಪಾತ್ರಕ್ಕೆ ತಕ್ಕಂತೆ ರೆಡಿಯಾಗಿದ್ದಾರೆ. ಕನ್ನಡದಲ್ಲೇ ಸಾಕಷ್ಟು ನಟರು ಶಾಲಾ ದಿನಗಳಲ್ಲಿನ ಪಾತ್ರಕ್ಕಾಗಿ ಗೆಟಪ್‌ ಬದಲಿಸಿ, ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

ಇತ್ತೀಚೆಗೆ "ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಗುರುನಂದನ್‌ ಕೂಡಾ ಸ್ಕೂಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದರು. ಕಳೆದ ವಾರ ಬಿಡುಗಡೆಯಾದ "ಕನ್ನಕ್ಕಾಗಿ ಒಂದನ್ನು ಒತ್ತಿ' ಚಿತ್ರದಲ್ಲಿ ಚಿಕ್ಕಣ್ಣ ಹೈಸ್ಕೂಲ್‌ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, "ಪೊಗರು' ಚಿತ್ರದಲ್ಲಿ ಧ್ರುವ ಸರ್ಜಾ ಕೂಡಾ ಸ್ಕೂಲ್‌ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗ ಯೋಗಿ ಸರದಿ. 

ಹೌದು, "ಲೂಸ್‌ಮಾದ' ಯೋಗೇಶ್‌ ತಮ್ಮ ಹೊಸ ಚಿತ್ರದಲ್ಲಿ ಹೈಸ್ಕೂಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಗಡ್ಡಮೀಸೆ ಬೋಳಿಸಿ ಪಾತ್ರಕ್ಕೆ ತಯಾರಾಗಿದ್ದಾರೆ. ಈಗಾಗಲೇ ಅದರ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಯಾವ ಚಿತ್ರದಲ್ಲಿ ಯೋಗಿ ಸ್ಕೂಲ್‌ ಹುಡುಗ ಎಂದು ನೀವು ಕೇಳಿದರೆ ಅದಕ್ಕೆ ಉತ್ತರ "ಲಂಬೋದರ'. ಇನ್ನು, ಯೋಗಿ, ಈ ಪಾತ್ರಕ್ಕಾಗಿ ಯೋಗಿ ಗಡ್ಡ-ಮೀಸೆ ಬೋಳಿಸಿ, ಯುನಿಫಾರಂ ಹಾಕಿ ನಿಂತಿದ್ದನ್ನು ನೋಡಿದ ಯೋಗಿ ಪತ್ನಿಗೆ ಅಚ್ಚರಿಯಾಗಿದೆ.

ಪಕ್ಕಾ ಸ್ಕೂಲ್‌ ಹುಡುಗನಂತೆ ಕಂಡ ಅವರನ್ನು ನೋಡಿ ಒಂದು ವಾರ ಸರಿಯಾಗಿ ಮಾತನಾಡಿಸಲೇ ಇಲ್ಲವಂತೆ. ಇನ್ನು, ಯೋಗಿ ಅಮ್ಮ ಕೂಡಾ ಮಗನನ್ನು ಬೇಜಾನ್‌ ರೇಗಿಸಿದ್ದಾರಂತೆ. ಕೃಷ್ಣರಾಜ್‌ ಈ ಸಿನಿಮಾದ ನಿರ್ದೇಶಕರು. ಪೋಲಿ ಬಿದ್ದಿರುವ ಮಧ್ಯಮ ವರ್ಗದ ಹುಡುಗನ ಸುತ್ತ ಈ ಕಥೆ ಸಾಗುತ್ತದೆ. ಜವಾಬ್ದಾರಿ ಇಲ್ಲದ ಆತನ ಜೀವನದಲ್ಲಿ ಬರುವ ಹುಡುಗಿ, ಹೇಗೆ ಆತನ ಬದಲಾವಣೆಗೆ ಕಾರಣಳಾಗುತ್ತಾಳೆಂಬ ಅಂಶವನ್ನು ಇಲ್ಲಿ ಹೇಳಲಾಗಿದೆಯಂತೆ.


Trending videos

Back to Top