CONNECT WITH US  

ಹರಿಪ್ರಿಯಾಗೆ ಕನ್ನಡ್‌ ಗೊತ್ತಿಲ್ಲ: 26ನೇ ಚಿತ್ರ ಇಂದಿನಿಂದ ಶುರು

"ಬೆಲ್‌ ಬಾಟಮ್‌' ಹಾಗೂ "ಡಾಟರ್‌ ಆಫ್ ಪಾರ್ವತಮ್ಮ' ಚಿತ್ರಗಳು ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆಯೇ, ಹರಿಪ್ರಿಯಾ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದು ಅವರ 26ನೇ ಚಿತ್ರವಾಗಿದ್ದು, ಇಂದಿನಿಂದ ಪ್ರಾರಂಭವಾಗಲಿದೆ.

ಹರಿಪ್ರಿಯಾ ಒಪ್ಪಿರುವ ಚಿತ್ರದ ಹೆಸರೇನು ಗೊತ್ತಾ? "ಕನ್ನಡ್‌ ಗೊತ್ತಿಲ್ಲ' ಅಂತ. ಅದು ಕನ್ನಡ್‌ ಅಲ್ಲ, ಕನ್ನಡ ಅಂತ ನೀವು ತಿದ್ದಬಹುದು. ಆದರೆ, ಚಿತ್ರದ ಹೆಸರೇ "ಕನ್ನಡ್‌ ಗೊತ್ತಿಲ್ಲ' ಅಂತ. ಇಷ್ಟು ಹೇಳಿದ ಮೇಲೆ, ಚಿತ್ರದ ಕಥಾವಸ್ತುವೇನು ಎಂದು ಅಂದಾಜಿಗೆ ಬರಬಹುದು. ಇತ್ತೀಚಿನ ದಿನಗಳಲ್ಲಿ "ಕನ್ನಡ್‌ ಗೊತ್ತಿಲ್ಲ' ಎಂಬ ಮಾತುಗಳನ್ನು ಬಹಳಷ್ಟು ಕಡೆ ಕೇಳಿರಬಹುದು. ಅದರಲ್ಲೂ ಉತ್ತರ ಭಾರತೀಯರು ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಅವರ ಬಾಯಲ್ಲಿ ಈ ಮಾತುಗಳು ಸರ್ವೇ ಸಾಮಾನ್ಯ. ಹೀಗೆ ಕನ್ನಡ ಕಲಿಯದೆ "ಕನ್ನಡ್‌ ಗೊತ್ತಿಲ್ಲ' ಎನ್ನುವವರ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಚಿತ್ರದ ಕಥೆ ಮತ್ತು ಹೆಸರೇ ಹೀರೋ ಎನ್ನುವ ಹರಿಪ್ರಿಯಾ, "ಇದುವರೆಗೂ ಯಾವುದೋ ಒಂದು ಪಾತ್ರವನ್ನು ಪ್ರತಿನಿಧಿಸುತ್ತಿದ್ದೆ. ಈಗ ಮೊದಲ ಬಾರಿಗೆ ಕನ್ನಡಿಗರನ್ನು ಪ್ರತಿನಿಧಿಸುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಕಥೆ ಮತ್ತು ಹೆಸರು ಕೇಳಿದ ತಕ್ಷಣ ಒಪ್ಪಿಕೊಂಡೆ' ಎನ್ನುತ್ತಾರೆ ಹರಿಪ್ರಿಯಾ. ಈ ಚಿತ್ರದಲ್ಲಿ ಅವರು ಶ್ರುತಿ ಚಕ್ರವರ್ತಿ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.

ಈ ಚಿತ್ರವನ್ನು ಮಯೂರ್‌ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಮೂಲತಃ ರೇಡಿಯೋ ಜಾಕಿ ಆಗಿರುವ ಮಯೂರ್‌, ಇದಕ್ಕೂ ಮುನ್ನ "ರಿಷಭ್‌ ಪ್ರಿಯ' ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದರು. ಈಗ "ಕನ್ನಡ್‌ ಗೊತ್ತಿಲ್ಲ' ನಿರ್ದೇಶಿಸುವ ಸಾಹಸಕ್ಕೆ ಕೈ ಹಾಕಿರುವ ಅವರು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಸಹ ರಚಿಸಿದ್ದಾರೆ. ಕುಮಾರ ಕಂಠೀರವ ಎನ್ನುವವರು ಈ ಚಿತ್ರದ ನಿರ್ಮಾಪಕರು. ಗಿರಿಧರ್‌ ದಿವಾನ್‌ ಅವರ ಛಾಯಾಗ್ರಹಣ ಮತ್ತು ನಕುಲ್‌ ಅಭಯಂಕರ್‌ ಅವರ ಸಂಗೀತ ಈ ಚಿತ್ರಕ್ಕಿದೆ.

Trending videos

Back to Top