CONNECT WITH US  

"ಲಂಕೆ'ಗೆ ಹೊರಟ ಯೋಗಿ

ಇಂದಿನಿಂದ ಚಿತ್ರೀಕರಣ ಶುರು

ಯೋಗೇಶ್‌ ನಾಯಕರಾಗಿ ನಟಿಸಿದ್ದ "ಲಂಬೋದರ' ಚಿತ್ರ ಕಳೆದ ತಿಂಗಳು ತೆರೆಕಂಡಿತ್ತು. ಒಂದು ಯೂತ್‌ಫ‌ುಲ್‌ ಸಿನಿಮಾವಾಗಿ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದರ ಬೆನ್ನಲ್ಲೇ ಯೋಗಿ ಹೊಸ ಸಿನಿಮಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಯೋಗೇಶ್‌ ಯಾವ ಸಿನಿಮಾ ಮಾಡುತ್ತಾರೆಂಬ ಪ್ರಶ್ನೆ ಅನೇಕರನ್ನು ಕಾಡಿರಬಹುದು. ಅದಕ್ಕೆ ಸಿಗುವ ಉತ್ತರ "ಲಂಕೆ'. ಯೋಗೇಶ್‌ "ಲಂಕೆ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ರಾಮ್‌ಪ್ರಸಾದ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ "ಬಣ್ಣ ಬಣ್ಣದ ಲೋಕ' ಎಂಬ ಸಿನಿಮಾ ಮಾಡಿದ್ದ ರಾಮ್‌ಪ್ರಸಾದ್‌ ಈಗ ಔಟ್‌ ಅಂಡ್‌ ಔಟ್‌ ಮಾಸ್‌ ಎಂಟರ್‌ಟೈನರ್‌ ಕಟ್ಟಿಕೊಡಲು ಮುಂದಾಗಿದ್ದಾರೆ. ಎಲ್ಲಾ ಓಕೆ "ಲಂಕೆ' ಮೂಲಕ ಏನು ಹೇಳಲು ಹೊರಟಿದ್ದಾರೆ ಎಂದು ನೀವು ಕೇಳಬಹುದು. ಆದರೆ, ನಿರ್ದೇಶಕರು ಸಿನಿಮಾ ಬಗ್ಗೆ ಈಗಲೇ ಹೆಚ್ಚೇನು ವಿವರ ಕೊಡಲು ಸಿದ್ಧರಿಲ್ಲ.

"ಚಿತ್ರದಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಹೇಳಲು ಹೊರಟಿದ್ದೇನೆ. ಹಾಗಾಗಿ, ಈಗಲೇ ಏನು ಹೇಳ್ಳೋದು ಕಷ್ಟ. "ಲಂಕೆ' ಒಂದು ಮಾಡರ್ನ್ ರಾಮಾಯಣ ಎಂದಷ್ಟೇ ಹೇಳಬಹುದು' ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ಯೋಗಿಗೆ ನಾಯಕಿಯರಾಗಿ ಕ್ರಿಷಿ ತಪಂಡಾ ಹಾಗೂ ಕಾವ್ಯ ಶೆಟ್ಟಿ ನಟಿಸುತ್ತಿದ್ದಾರೆ. ಸಂಚಾರಿ ವಿಜಯ್‌ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಉಳಿದಂತೆ ಶರತ್‌ ಲೋಹಿತಾಶ್ವ, ಸುಚೇಂದ್ರ ಪ್ರಸಾದ್‌, ಶೋಭ್‌ರಾಜ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರವನ್ನು ಶ್ರೀನಿವಾಸ್‌ ಹಾಗೂ ರಾಮ್‌ಪ್ರಸಾದ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಮೇಶ್‌ ಬಾಬು ಛಾಯಾಗ್ರಹಣ, ಕಾರ್ತಿಕ್‌ ಶರ್ಮಾ ಸಂಗೀತವಿದೆ. ಬೆಂಗಳೂರು ಹಾಗೂ ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. 


Trending videos

Back to Top