CONNECT WITH US  

ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

ಬಂಟ್ವಾಳದಲ್ಲಿ ನಡೆದಿದ್ದ ಘಟನೆ

ಸಾಂದರ್ಭಿಕ ಚಿತ್ರ

ಬಂಟ್ವಾಳ: ಮೂರು ದಿನಗಳ ಹಿಂದೆ ಜೂ. 11ರಂದು ಬಂಟ್ವಾಳ ಬಡ್ಡಕಟ್ಟೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ತಲವಾರು ಬೀಸಿ ಹಲ್ಲೆ ನಡೆಸಿ ಭಯಭೀತ ವಾತಾವರಣ ಸೃಷ್ಟಿಸಿದ ಪ್ರಕರಣದ ಆರೋಪಿಗಳಿಗೆ ಸಹಕರಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಂಜಿಕಲ್ಲು ಕಜೆಬೈಲು ನಿವಾಸಿ ದೀಪಕ್‌( 27),  ಬಿ.ಸಿ.ರೋಡ್‌ ಅಗ್ರಬೈಲಿನ  ಪವನ್‌(26),  ಬಂಟ್ವಾಳ ನಿವಾಸಿಗಳಾದ   ಶೈಲೇಶ್‌( 26) ಹಾಗೂ ರಂಜಿತ್‌ (25) ಬಂಧಿತರು. ಪ್ರಮುಖ ಆರೋಪಿ ಸುರೇಂದ್ರ ಬಂಟ್ವಾಳ ಮತ್ತು ಸಹಚರರಾದ ತಿಲಕ್‌,  ಮನೋಹರ, ಪ್ರದೀಪ್‌,  ಸತೀಶ ತಲೆಮರೆಸಿಕೊಂಡಿದ್ದಾರೆ. ಬಂಧಿತರು ಪ್ರಮುಖ ಆರೋಪಿಗಳಿಗೆ ಹಣಕಾಸು ನೆರವು ಮತ್ತು ತಲೆಮರೆಸಿಕೊಳ್ಳಲು ಅವಕಾಶ ಕಲ್ಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಜೂ. 10ರಂದು ರಾತ್ರಿ ಬಂಟ್ವಾಳ ಕಾಲೇಜು ರಸ್ತೆಯಲ್ಲಿ ಇದ್ದಂತಹ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ದೀಕ್ಷಿತ್‌ ಅವರಿಗೆ ಭುವಿತ್‌ ಶೆಟ್ಟಿ ಮತ್ತು ತಂಡ ಹಲ್ಲೆ ನಡೆಸಿದ್ದಲ್ಲದೆ ಅಂಗಡಿಗೆ ಹಾನಿ ಆಗುವಂತೆ ದಾಂಧಲೆ ಮಾಡಿದ್ದರು. ಅದಕ್ಕೆ ಪ್ರತೀಕಾರವಾಗಿ ಜೂ. 11ರಂದು  ಮಧ್ಯಾಹ್ನ  ಬಡ್ಡಕಟ್ಟೆಯಲ್ಲಿ ಊಟಕ್ಕೆ ಹೋಗಿದ್ದ ಬಿಜೆಪಿ ಕಾರ್ಯಕರ್ತರಿಗೆ  ಸುರೇಂದ್ರ ಬಂಟ್ವಾಳ ತಲವಾರು ಝಳಪಿಸಿ ಹಲ್ಲೆ ಮಾಡಿದ್ದು,  ಗಣೇಶ್‌ ರೈ ಮಾಣಿ ಮತ್ತು ಪುಷ್ಪರಾಜ ಅಲೆತ್ತೂರು ಅವರಿಗೆ ಗಾಯಗಳಾಗಿತ್ತು. ಪೊಲೀಸರು ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 

Trending videos

Back to Top