CONNECT WITH US  

ವಾಗ್ಮಿಯ ಮಾತಂದ್ರೆ ಬಳ್ಳಾರಿಗರಿಗೆ ಬಲು ಇಷ್ಟ

ವೆಂಕೋಬಿ ಸಂಗನಕಲ್ಲು ಬಳ್ಳಾರಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೂ, ಬಳ್ಳಾರಿಗರಿಗೂ ಅವಿನಾಭಾವ ಸಂಬಂಧವಿದೆ. ಅಜಾತಶತ್ರುವಿನ ಮಾತು ಎಂದರೆ ಬಳ್ಳಾರಿಗರಿಗೆ ಬಲುಯಿಷ್ಟ. ಹಾಗಾಗಿ ಬಳ್ಳಾರಿಯ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಎರಡು ಬಾರಿ ಏರ್ಪಡಿಸಿದ್ದ ಬಹಿರಂಗಸಭೆಯಲ್ಲಿ ಅವರ ಭಾಷಣ ಕೇಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಜನರು ಸೇರುತ್ತಿದ್ದರು.

ಹೌದು, ಅದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಉತ್ತುಂಗದಲ್ಲಿದ್ದ 1980ರ ದಶಕದ ಸಂದರ್ಭ. ಕಾಂಗ್ರೆಸ್‌ ವಿರುದ್ಧ ಪಕ್ಷ ಸಂಘಟನೆ ಎಂದರೆ ಜಿಲ್ಲೆಯಲ್ಲಿ ಸಾಹಸವೇ ಸರಿ. ಅಂತಹ ಸಂದರ್ಭದಲ್ಲಿ ಬಳ್ಳಾರಿಯ ಕಾಕರ್ಲತೋಟ ತಿಮ್ಮಪ್ಪ ಎನ್ನುವವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆ ಒಂದಷ್ಟು ಕಷ್ಟವಾಗಲಿದೆ ಎಂದು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ತಿಳಿಸಿದಾಗ, 1980-81ರಲ್ಲಿ ವಾಜಪೇಯಿ ಅವರು ದೆಹಲಿಯಿಂದ ಬಳ್ಳಾರಿಗೆ ಆಗಮಿಸಿದ್ದರು.

ನಗರದ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಮೈದಾನದಲ್ಲಿ ವಾಜಪೇಯಿ ಅವರಿಗಾಗಿ ಒಂದು ಚಿಕ್ಕ ವೇದಿಕೆಯನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ನಿಂತು ವಾಜಪೇಯಿಯವರು ಸುಮಾರು ಒಂದು ಗಂಟೆಗಳ ಕಾಲ ಭಾಷಣ ಮಾಡಿದ್ದರು. ಉತ್ತಮ ವಾಗ್ಮಿಗಳೆಂದು 1980ರ ದಶಕದಲ್ಲೇ ಪ್ರಸಿದ್ಧರಾಗಿದ್ದ ವಾಜಪೇಯಿಯವರ ಭಾಷಣವನ್ನು ಆಲಿಸಲು ಬಳ್ಳಾರಿ ನಗರ ಸೇರಿ ಜಿಲ್ಲೆಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಜನರು ಮೈದಾನದಲ್ಲಿ ಸೇರಿದ್ದರು. ಮೈದಾನದಲ್ಲಿದ್ದ ಜನರನ್ನು
ಕಂಡು ಆಶ್ಚರ್ಯಚಕಿತರಾದ ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರು ಪಕ್ಷ ಸಂಘಟನೆಗಾಗಿ 375000 ಸಾವಿರ ರೂ. ದೇಣಿಗೆಯಾಗಿ ನೀಡಿದ್ದರು ಎಂದು ಅಂದಿನ ಘಟನೆಗಳನ್ನು ಮೆಲುಕು ಹಾಕುತ್ತಾರೆ ದಿ. ಕನುಗೋಲು ತಿಮ್ಮಪ್ಪ ಅವರ ಪುತ್ರ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಕೆ.ಚನ್ನಪ್ಪ. ಈ ಸಭೆಯಲ್ಲಿ ಅಂದಿನ ಬಳ್ಳಾರಿ ನಗರಸಭೆ ಸದಸ್ಯರಾಗಿದ್ದ ಗಾಳಿ ಪಾರ್ವತಮ್ಮ ಎನ್ನುವವರನ್ನು ಸನ್ಮಾನಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಇದಕ್ಕೂ ಮುನ್ನ 1979-80ರ ದಶಕದಲ್ಲೂ ಜನಸಂಘದಲ್ಲಿದ್ದಾಗ ಒಮ್ಮೆ ಬಳ್ಳಾರಿಗೆ ಭೇಟಿ ನೀಡಿದ್ದರು. ಸಂಘದ ಕಾರ್ಯಕ್ರಮ ನಿಮಿತ್ತ ಬಳ್ಳಾರಿಗೆ ಆಗಮಿಸಿದ್ದ ವಾಜಪೇಯಿಯವರು ನಗರದ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು ಅಲ್ಲೇ ವೇಟಿಂಗ್‌ ಹಾಲ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರೊಂದಿಗೆ ಚಹಾ ಸೇವಿಸಿದರು. ಅವರ ಕುಶಲೋಪರಿ ವಿಚಾರಿಸಿದ ಬಳಿಕ ಅಲ್ಲಿಂದ ರಸ್ತೆ ಮೂಲಕ ಬೇರೆಡೆಗೆ ತೆರಳಿದ್ದರು.

ಇದಾದ ಬಳಿಕ 1999ರಲ್ಲಿ ಮೂರನೇ ಬಾರಿಗೆ ಬಳ್ಳಾರಿಗೆ ಆಗಮಿಸಿದ್ದರು. 1999ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರಿಗೆ ವಿರುದ್ಧವಾಗಿ ಬಿಜೆಪಿಯಿಂದ ಹಾಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆಗ ಆಗಸ್ಟ್‌ ತಿಂಗಳಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ಸುಷ್ಮಾ ಸ್ವರಾಜ್‌ ಪರ ಚುನಾವಣಾ ಪ್ರಚಾರಕ್ಕಾಗಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬಳ್ಳಾರಿಗೆ ಆಗಮಿಸಿ, ಪುನಃ ಅದೇ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಸುಮಾರು 45 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಈ ಬಹಿರಂಗ ಸಭೆಯಲ್ಲಿ ಆಂಧ್ರ ಪ್ರದೇಶದ ಹಿಂದಿನ, ಇಂದಿನ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಬಿಜೆಪಿ ಮುಖಂಡ ಡಿ.ಎಚ್‌. ಶಂಕರಮೂರ್ತಿ ಅವರು ಸಹ ಸುಷ್ಮಾ ಸ್ವರಾಜ್‌ ಪರ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್‌ ಸೋತರೂ, ಆ ಚುನಾವಣೆ ಬಳ್ಳಾರಿಯ ರಾಜಕೀಯ ಇತಿಹಾಸದ ಪುಟ ಸೇರಿಸಿದರೆ, ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಯಿತು.

Trending videos

Back to Top