CONNECT WITH US  

ತ್ವರಿತಗೊಳ್ಳಲಿ ಪರಿಹಾರ ಕಾರ್ಯ

ಜಟಾಪಟಿಯಲ್ಲೇ ನಿರತರಾಗಿದ್ದಾರೆ ನಾಯಕರು

ಕೆಲವು ದಿನಗಳ ಹಿಂದೆ ಕೊಡಗು ಮತ್ತು ಕೇರಳ ಮಳೆ, ನೆರೆಯ ಹೊಡೆತಕ್ಕೆ ಸಿಕ್ಕು ತತ್ತರಿಸಿ ಹೋಗಿತ್ತು. ಈಗ ಎರಡೂ ಕಡೆ ಬದುಕನ್ನು ಮತ್ತೆ ಕಟ್ಟುವ ಪ್ರಕ್ರಿಯೆ ಆರಂಭವಾಗಿದೆ. ನಿಧಾನವಾಗಿಯಾದರೂ ಜನಜೀವನ ಸಹಜ ಸ್ಥಿತಿಗೆ ಬರುತ್ತಿರುವುದು ಸಮಾಧಾನದ ಸಂಗತಿ. ಆದರೆ, ಈ ಸಂದರ್ಭದಲ್ಲಿ ಆಡಳಿತಗಾರರ ಹೊಣೆ ಹೆಚ್ಚಿನದು. ಸಂತ್ರಸ್ತ ಪ್ರದೇಶವನ್ನು ಪುನಾ ಕಟ್ಟುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ, ಸರಕಾರ, ಸಮುದಾಯದ ಪಾತ್ರ ಪ್ರಮುಖವಾದುದು. ಸಂತ್ರಸ್ತರಿಗೆ ಆರಂಭದಲ್ಲಿ ಎದುರಾಗುವುದೇ ವಸತಿ ಮತ್ತು ಸಂಪಾದನೆಯ ಸಮಸ್ಯೆ. ಸದ್ಯಕ್ಕೇನೋ ಪರಿಹಾರ ಸಾಮಗ್ರಿಗಳು ಸಾಕಷ್ಟು ಹರಿದು ಬರುತ್ತಿವೆ. ಅವುಗಳ ವಿತರಣೆಯೂ ಸಮರ್ಪಕವಾಗಿ ನಡೆಯುತ್ತಿದೆ. ಆದರೆ ಇದು ಎಷ್ಟೆಂದರೂ ಸೀಮಿತ ಅವಧಿಗೆ ಮಾತ್ರ. 

ದೀರ್ಘ‌ಕಾಲೀನವಾಗಿ ಜನರ ಬದುಕನ್ನು ಹಳಿಗೆ ತರಬೇಕಾದ ಮಹತ್ವದ ಹೊಣೆಯಿರುವುದು ಆಡಳಿತದ ಕೈಯಲ್ಲಿ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, ಅಂಗಡಿಮುಂಗಟ್ಟು, ಫ್ಯಾಕ್ಟರಿ ಮುಂತಾದ ಜೀವನೋಪಾಯಗಳನ್ನು ಕಳೆದುಕೊಂಡವರಿಗೆ ಪರ್ಯಾಯ ಸಂಪಾದನೆಯ ವ್ಯವಸ್ಥೆ ಹೀಗೆ ಆಗಬೇಕಾದ ಕಾರ್ಯಗಳ ಪಟ್ಟಿ ದೊಡ್ಡದಿದೆ. ಜತೆಗೆ ಮೂಲ ಸೌಕರ್ಯ ವ್ಯವಸ್ಥೆಯನ್ನೂ ಕ್ಷಿಪ್ರವಾಗಿ ಒದಗಿಸಬೇಕು. ಮುಖ್ಯವಾಗಿ ರಸ್ತೆ , ಕುಡಿಯುವ ನೀರು ಇವೆಲ್ಲ ತುರ್ತಾಗಿ ಆಗಲೇ ಬೇಕಾದ ಕೆಲಸಗಳು. ಎಲ್ಲವೂ ಒಂದೇ ಹಂತದಲ್ಲಿ ಸಾಧ್ಯವಿಲ್ಲವೆನ್ನುವುದಾದರೂ ಆದ್ಯತೆವಾರು ಸೌಲಭ್ಯಗಳನ್ನು ನಿಗದಿತ ಕಾಲ ಮಿತಿಯೊಳಗೆ ಒದಗಿಸಬೇಕು. ಇದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ಆದ್ಯ ಕರ್ತವ್ಯವೂ ಹೌದು.ಈ ನಿಟ್ಟಿನಲ್ಲಿ ಕೇರಳ ಸರಕಾರ ಸಮರೋಪಾದಿಯಲ್ಲಿ ಕಾರ್ಯ ನಿರತವಾಗಿದೆ. 

ಆದರೆ ಕರ್ನಾಟಕ ಸರಕಾರದ ಕಾರ್ಯಶೈಲಿಯನ್ನು ನೋಡುವಾಗ ಆ ಧಾವಂತ ಅಷ್ಟೇನೂ ಕಾಣಿಸುತ್ತಿಲ್ಲ. ಅತ್ತ ಕೊಡಗಿನ ಜನಜೀವನ ಜರ್ಜರಿತ ವಾಗಿದ್ದರೂ ಇತ್ತ ಸಮ್ಮಿಶ್ರ ಸರಕಾರ ರಾಜಕೀಯ ಜಟಾಪಟಿಯಲ್ಲಿ ನಿರತವಾಗಿದೆ. ಮಿತ್ರಪಕ್ಷಗಳ ನಾಯಕರು ದಿನಕ್ಕೊಬ್ಬರಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಅದನ್ನು ಬಗೆಹರಿಸಿಕೊಳ್ಳುವುದರಲ್ಲೇ ಮುಳುಗಿದ್ದಂತೆ ತೋರುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಹಲವು ಸಚಿವರೂ ಸಮಯದ ಗಂಭೀರತೆಯನ್ನು ಮರೆತು ರಾಜಕೀಯ ಹೇಳಿಕೆಗಳಲ್ಲಿ ಮುಳುಗಿದ್ದಾರೆ. ಜಿಲ್ಲೆಯಲ್ಲಿನ ವ್ಯವಸ್ಥೆಯ ಮರುಸ್ಥಾಪನೆ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಕಂದಾಯ ಸಚಿವರ ಹೊಣೆಗಾರಿಕೆಯಲ್ಲ. ಇಡೀ ಸರಕಾರದ ಹೊಣೆಗಾರಿಕೆ ಎಂಬುದನ್ನು ಎಲ್ಲರೂ ಅರಿಯಬೇಕು.

ಇದರೊಂದಿಗೆ ಸರಕಾರ ಪರಿಹಾರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಾನಾ ರೀತಿಯ ಯೋಜನೆಗಳನ್ನು ಘೋಷಿಸುತ್ತಿದೆ. ಇದೇನೂ ಹೊಸದಲ್ಲ. ಆದರೆ ಸಮರ್ಪಕ ಅನುಷ್ಠಾನಕ್ಕೆ ಕ್ರಿಯಾ ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪರಿಹಾರ ಕೇಂದ್ರಗಳಿಗೆ ಭೇಟಿ ಕೊಟ್ಟು ಸಂತ್ರಸ್ತರ ಅಹವಾಲು ಆಲಿಸಿದ್ದು ಮೆಚ್ಚುಗೆ ಅರ್ಹವಾದ ಕ್ರಮ. ಅದು ಆ ಹೊತ್ತಿಗೆ ಸಂತ್ರಸ್ತರಲ್ಲಿ ಧೈರ್ಯ ತುಂಬುವ ಮಾನವೀಯ ಕ್ರಮ. ಆ ಕ್ಷಣದ ನಿರ್ವಹಣೆ ಸೂಕ್ತ. ಅನಂತರದ ಪರಿಸ್ಥಿತಿಗೆ ಸ್ಪಂದಿಸಬೇಕಾದ ರೀತಿಯೇ ಬೇರೆ. 

ಕನಿಷ್ಠ ಕೇಂದ್ರ ಸರಕಾರಕ್ಕೆ ಅನಾಹುತದ ಭೀಕರತೆಯನ್ನು ಮನವರಿಕೆ ಮಾಡಿಕೊಟ್ಟು ಸಾಧ್ಯವಾದಷ್ಟು ಹೆಚ್ಚು ನೆರವು ಪಡೆದುಕೊಳ್ಳುವ ಪ್ರಯತ್ನವನ್ನು ಸರಕಾರ ಮಾಡಿಲ್ಲ. ಮುಖ್ಯಮಂತ್ರಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಪ್ರಧಾನಿಯನ್ನು ಭೇಟಿಯಾಗಿ ಪರಿಸ್ಥಿತಿಯನ್ನು ವಿವರಿಸಿ ನೆರವಿಗಾಗಿ ಮನವಿ ಮಾಡಬೇಕಿತ್ತು. ಇದರಲ್ಲಿ ವಿಪಕ್ಷದ್ದೂ ಪಾಲಿದೆ. ಜವಾಬ್ದಾರಿಯುತ ವಿಪಕ್ಷವಾಗಿ ಈ ಹಂತದಲ್ಲಿ ಸರಕಾರಕ್ಕೆ ಬೆಂಬಲವಾಗಿ ನಿಂತು ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟು ನೆರವು ಪಡೆಯಲು ಯತ್ನಿಸಬಹುದಿತ್ತು. ಪರಿಹಾರಕ್ಕಾಗಿ ಆಗ್ರಹಿಸುವುದು ನಮ್ಮ ಹಕ್ಕೂ ಸಹ. ಈಗಲೂ ಕಾಲ ಮಿಂಚಿಲ್ಲ. . ಅಷ್ಟೇ ಸಾಲದು, ಅಗತ್ಯವಿದ್ದಲ್ಲಿ ಸಂಸದರನ್ನೂ ಕೂಡಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸುವುದು ಸೂಕ್ತ. 

ಪರಿಹಾರ ಕೇಂದ್ರಗಳ ಬದುಕಿನ ಬಳಿಕ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೊರಡುವವರಿಗೆ ಬರೀ ಮಾತಿನಿಂದ ಧೈರ್ಯ ತುಂಬಿದರೆ ಸಾಲದು, ಯೋಜನೆಗಳ ಲೆಕ್ಕ ಕೊಟ್ಟರೆ ಸಾಲದು. ಪ್ರಾಮಾಣಿಕ ಅನುಷ್ಠಾನದ ಮೂಲಕ ಬೆಂಬಲವಾಗಿ ನಿಲ್ಲಬೇಕು. ಪ್ರವಾಹ, ಮುಳುಗಡೆ ಮತ್ತಿತರ ದುರಂತಗಳ ಸಂತ್ರಸ್ತರಿಗೆ ರೂಪಿಸುವ ಯೋಜನೆಗಳ ಅನುಷ್ಠಾನ ಕುಂಟುತ್ತಾ ಸಾಗುವುದು ಸಾಮಾನ್ಯ ವಿಚಾರ. ಅಣೆಕಟ್ಟೆ ಮತ್ತಿತರ ಯೋಜನೆಗಳಿಂದ ನಿರ್ವಸಿತರಾದವರಿಗೆ ಪುನರ್‌ವಸತಿ ಕಲ್ಪಿಸುವ ಯೋಜನೆ ವರ್ಷಾನುಗಟ್ಟಲೆ ನನೆಗುದಿಗೆ ಬಿದ್ದಿರುವ ಸಾಕಷ್ಟು ಉದಾಹರಣೆಗಳಿವೆ. ನರ್ಮದಾ ಯೋಜನೆ, ಆಲಮಟ್ಟಿ ಯೋಜನೆಯಂಥ ಬೃಹತ್‌ ಯೋಜನೆಗಳ ಸಂತ್ರಸ್ತರಿಗೆ ಇನ್ನೂ ಸೂಕ್ತವಾದ ನೆಲೆ ಕಲ್ಪಿಸಲಾಗಿಲ್ಲ. ಕೊಡಗು ಕೂಡಾ ಈ ಸಾಲಿಗೆ ಸೇರಬಾರದು ಎನ್ನುವ ಎಚ್ಚರ ಆಡಳಿತ ನಡೆಸುವವರಲ್ಲಿ ಇರಬೇಕು. ಒಂದು ಮಳೆಗಾಲ ಮುಗಿದ ಬಳಿಕ ಇನ್ನೊಂದು ಮಳೆಗಾಲ ಶುರು ವಾಗುವುದರ ಮಧ್ಯೆ ಸರಕಾರಕ್ಕೆ ಸಿಗುವುದು ಬರೀ ಎಂಟು ತಿಂಗಳ ಸಮಯ. ಅಷ್ಟೂ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸರಕಾರ ಸಮರೋಪಾದಿಯಲ್ಲಿ ಮರು ಕಟ್ಟುವ ಪ್ರಕ್ರಿಯೆ ನಡೆಸಬೇಕು. ಜತೆಗೆ ಭವಿಷ್ಯದಲ್ಲಿ ಈ ಮಾದರಿಯ ದುರಂತಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. 


Trending videos

Back to Top