CONNECT WITH US  

ಉದಯವಾಣಿ ಜನಪರ ಕಾಳಜಿ : 8 ವರ್ಷಗಳಿಂದ ಮರು ಡಾಮರು ಕಾಮಗಾರಿಯೇ ಆಗಿಲ್ಲ

ಉದಯವಾಣಿ ಜನಪರ ಕಾಳಜಿ: ಸಂಪೂರ್ಣ ಹದಗೆಟ್ಟ ಮೂಡುಬಗೆ - ಮಾರ್ಡಿ ರಸ್ತೆ ; 2 ಕಿ.ಮೀ. ದೂರದ ರಸ್ತೆಯಲ್ಲಿ ಸಂಚಾರ ಕಷ್ಟಕರ

ಮೂಡುಬಗೆ - ಮಾರ್ಡಿ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿ ಹೊಂಡ ಬಿದ್ದಿರುವುದು.

ಅಂಪಾರು: ಮಾರ್ಡಿಯಿಂದ ಮೂಡುಬಗೆಗೆ ಸಂಚರಿಸುವ ಸುಮಾರು 2 ಕಿ.ಮೀ. ದೂರದ ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಈ ಮಾರ್ಗದ ಮೂಲಕ ವಾಹನ ಸಂಚಾರವೇ ಕಷ್ಟಕರವೆನಿಸಿದೆ. ರಸ್ತೆಯ ಡಾಮರೆಲ್ಲ ಕಿತ್ತುಹೋಗಿದ್ದರೂ, ಕಳೆದ 8 ವರ್ಷಗಳಿಂದ ಮರು ಡಾಮರೀಕರಣವೇ ಆಗಿಲ್ಲ. 2010ರಲ್ಲಿ ಮಾರ್ಡಿ- ಮೂಡುಬಗೆ ರಸ್ತೆಗೆ ಅಂದರೆ ಸುಮಾರು 8 ವರ್ಷಗಳ ಹಿಂದೆ ಡಾಮರೀಕರಣವಾಗಿತ್ತು. ಅದರ ನಂತರ 2012 ರಲ್ಲಿ ಒಂದು ಬಾರಿ ಅಲ್ಲಲ್ಲಿ ಹೊಂಡ- ಗುಂಡಿ ಬಿದ್ದ ಕಡೆಗೆ ಪ್ಯಾಚ್‌ವರ್ಕ್‌ ಮಾಡಲಾಗಿತ್ತು. ಆ ಬಳಿಕ ಇತ್ತ ಯಾರೂ ಗಮನವೇ ಹರಿಸಿಲ್ಲ.

ಸಂಪರ್ಕ ರಸ್ತೆ
ಅಂಪಾರು - ಮೂಡುಬಗೆಯಿಂದ ಮಾರ್ಡಿ ಆಜ್ರಿಗೆ ತೆರಳಲು ಇದು ಹತ್ತಿರದ ಮಾರ್ಗವಾಗಿದೆ. ಅಂಪಾರು - ಸಿದ್ದಾಪುರ ಮೂಲಕ 16 ಕಿ.ಮೀ. ದೂರವಾದರೆ ಮೂಡುಬಗೆಯಿಂದ ಮಾರ್ಡಿ ಮೂಲಕವಾಗಿ ಕೇವಲ 6 ಕಿ.ಮೀ. ದೂರ ಅಷ್ಟೇ ಆಗಿದೆ. ಮೂಡುಬಗೆ- ಕೊಡ್ಲಾಡಿ ಮಾರ್ಗವಾಗಿ ನೇರಳಕಟ್ಟೆಗೂ ಹತ್ತಿರದ ಮಾರ್ಗವಾಗಿದೆ. ಇದು ಆಜ್ರಿ, ಬೆಳ್ಳಾಲ, ನಂದ್ರೋಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.

ಅಂಪಾರು ಬದಿ ಹಾಳಾದ ರಸ್ತೆ
ಕೊಡ್ಲಾಡಿ - ಮಾರ್ಡಿ ಸೇತುವೆಯ ಆಚೆ ಬದಿ ರಸ್ತೆ ಆಜ್ರಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು, ಆ ರಸ್ತೆ ಈಗಾಗಲೇ ಎರಡೆರಡು ಬಾರಿ ದುರಸ್ತಿಯಾಗಿ ಚೆನ್ನಾಗಿದೆ. ಆದರೆ ಸೇತುವೆಯ ಈ ಬದಿ ರಸ್ತೆ ಅಂಪಾರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ಈ ರಸ್ತೆಯ ದುರಸ್ತಿಗೆ ಜಿ.ಪಂ. ಮುಂದಾಗಿಲ್ಲ. ಈ ಮಾರ್ಗವಾಗಿ ದಿನನಿತ್ಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಸಂಚರಿಸುತ್ತಾರೆ. ಅದರಲ್ಲೂ ನಿತ್ಯ 4-5 ಶಾಲಾ ಮಕ್ಕಳ ವಾಹನಗಳೇ ಹೆಚ್ಚಾಗಿ ಸಂಚರಿಸುತ್ತಿವೆ. ರಸ್ತೆ ಹಾಳಾಗಿದ್ದರಿಂದ ಸರಿಯಾದ ಸಮಯಕ್ಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವುದು ಕಷ್ಟವಾಗುತ್ತಿದೆ ಎನ್ನುವುದು ಶಾಲಾ ಮಕ್ಕಳ ವಾಹನ ಚಾಲಕರ ಆರೋಪವಾಗಿದೆ.

ಚರಂಡಿಯೇ ಇಲ್ಲ
ಈ ರಸ್ತೆ ಇಷ್ಟೊಂದು ಹದಗೆಟ್ಟು ಹೋಗಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿಯೂ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಪ್ರತಿ ವರ್ಷ ಹೊಂಡ - ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ದುರಸ್ತಿಗೆ ಈಗ ಸಕಾಲ
ಮಳೆಗಾಲಕ್ಕೆ ಮುನ್ನವೇ ಈ ರಸ್ತೆಯ ಅಲ್ಲಲ್ಲಿ ಹೊಂಡ-ಗುಂಡಿಗಳು ಕಾಣಿಸಿಕೊಂಡಿದ್ದು, ಮಳೆಗಾಲದಲ್ಲಿ ಮತ್ತಷ್ಟು ಹದಗೆಟ್ಟು ಹೋಗಿದೆ. ಈಗ ಮಳೆ ಕಡಿಮೆಯಿದ್ದು, ಇನ್ನು ಈ ರಸ್ತೆಯ ದುರಸ್ತಿಗೆ ಸಕಾಲವಾಗಿದ್ದು, ಸಂಬಂಧಪಟ್ಟವರು ಇತ್ತ ಗಮನಹರಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ದೂರಿತ್ತರೂ ಪ್ರಯೋಜನವಿಲ್ಲ
ಮಾರ್ಡಿ ಸೇತುವೆಯ ಆ ಕಡೆ ರಸ್ತೆ 2 ಸಲ ದುರಸ್ತಿ ಆಗಿದೆ. ಆದರೆ ಸೇತುವೆ ಈಚೆ ಬದಿ ಮಾತ್ರ ರಸ್ತೆಯ ದುರಸ್ತಿಯೇ ಆಗಿಲ್ಲ. ಕೇಳಿದರೆ ಅನುದಾನವಿಲ್ಲ ಅನ್ನುತ್ತಾರೆ. ದುರವಸ್ಥೆಯ ಬಗ್ಗೆ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಮರು ಡಾಮರೀಕರಣ ಮಾಡಲಿ.  ಶಾಸಕ ಬಿ.ಎಂ. ಸುಕುಮಾರ ಶೆಟ್ಟರ ಗಮನಕ್ಕೂ ತರಲಾಗುವುದು.
- ಉದಯ ಬೋವಿ, ಮಾರ್ಡಿ 

ಅನುದಾನ ಮಂಜೂರು
ಜಿ.ಪಂ.ನಿಂದ 3 ಲಕ್ಷ ರೂ. ಅನುದಾನ ಮಂಜೂರಾಗಿದೆ. ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ಹಿಂದಿನ ಬಾರಿ ಅನುದಾನ ಕೊರತೆಯಿಂದ ರಸ್ತೆ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಚರಂಡಿ ನಿರ್ಮಾಣಕ್ಕೂ ಗಮನಕೊಡಲಾಗುವುದು. 
- ಜ್ಯೋತಿ ಎಂ. ಕಾವ್ರಾಡಿ, ಜಿ.ಪಂ. ಸದಸ್ಯರು

-- ಪ್ರಶಾಂತ್‌ ಪಾದೆ


Trending videos

Back to Top