CONNECT WITH US  

ಫ‌ಸ್ಟ್‌ಹಾಫ್ ಆಟ, ಸೆಕೆಂಡ್‌ಹಾಫ್ ನೋಟ

ಚಿತ್ರ ವಿಮರ್ಶೆ

ತನ್ನ ಸುತ್ತ ಏನೋ ನಡೆಯುತ್ತಿದೆ ಎಂಬುದು ಆತನಿಗೆ ಸ್ಪಷ್ಟವಾಗುತ್ತದೆ. ಆದರೆ, ಇದು ಭ್ರಮೆಯೋ ಅಥವಾ ನಿಜವೋ ಎಂಬ ಗೊಂದಲದಲ್ಲೇ ಆತ ಇರುತ್ತಾನೆ. ಆದರೆ, ಆತನಿಗಾದ ಅನುಭವವೇ ಆತನ ತಾಯಿಗೂ ಆಗುತ್ತದೆ. ಅಲ್ಲಿಗೆ ಒಂದು ಸ್ಪಷ್ಟವಾಗುತ್ತದೆ. ಯಾವುದೋ ಒಂದು ಆತ್ಮ ತನ್ನ ಸುತ್ತ, ತನ್ನ ಮನೆಯ ಸುತ್ತ ಓಡಾಡುತ್ತಿದೆ ಎಂದು. ಹಾಗಾದರೆ, ಅದರ ಕಾಟದಿಂದ ಮುಕ್ತವಾಗಲು ಏನು ಮಾಡಬೇಕು, ಯಾರ ಮೊರೆ ಹೋಗಬೇಕು ಎಂದು ಯೋಚಿಸುತ್ತಿದ್ದ ಆತ ನೇರವಾಗಿ "ಗೋಸ್ಟ್‌ ಹಂಟರ್' (ಆತ್ಮದ ಇರುವಿಕೆಯನ್ನು ಪತ್ತೆ ಹಚ್ಚುವ ತಂಡ) ಮೊರೆ ಹೋಗುತ್ತಾನೆ.

ಅಲ್ಲಿಂದ ಆತ್ಮದ ಹುಡುಕಾಟ ಶುರುವಾಗುತ್ತದೆ. ಆತ್ಮದ ಕಾಟ, ಅದರಿಂದ ಮುಕ್ತಿ ಪಡೆಯಲು ಮೊರೆ ಹೋಗುವ ವಿಧಾನಗಳ ಕುರಿತು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. "ಟ್ರಂಕ್‌' ಕೂಡಾ ಅದೇ ಕೆಟಗರಿಗೆ ಸೇರುವ ಮತ್ತೂಂದು ಸಿನಿಮಾ. ಆದರೆ, ಇಲ್ಲಿನ ಸಂದರ್ಭ ಹಾಗೂ ಸುತ್ತಲ ಪರಿಸರವಷ್ಟೇ ಬದಲಾಗಿದೆ. ಅದು ಬಿಟ್ಟರೆ ಆತ್ಮದ ಉಪಟಳ, ಬಯಕೆ, ಆತ್ಮ ಮೈ ಮೇಲೆ ಬಂದ ವ್ಯಕ್ತಿಯ ವರ್ತನೆ ... ಎಲ್ಲವೂ ಈ ಹಿಂದಿನ ಹಾರರ್‌ ಸಿನಿಮಾಗಳನ್ನೇ ನೆನಪಿಸುತ್ತವೆ. ಸಿನಿಮಾ ಆರಂಭವಾಗಿ ಒಂದಷ್ಟು ಹೊತ್ತು ಏನು ನಡೆಯುತ್ತಿದೆ ಎಂಬ ಸಹಜವಾದ ಗೊಂದಲ ನಿಮ್ಮನ್ನು ಕಾಡದೇ ಇರದು.

ಆ ನಂತರ ನಿಮಗೆ ಇದೊಂದು ಹಾರರ್‌ ಸಿನಿಮಾ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. ಇತ್ತೀಚೆಗೆ ಬರುತ್ತಿರುವ ಒಂದಷ್ಟು ಹಾರರ್‌ ಸಿನಿಮಾಗಳು ಕಥೆಯನ್ನು ದ್ವಿತೀಯಾರ್ಧದಲ್ಲಿ ಅಡಗಿಸಿಟ್ಟು, ಮೊದಲರ್ಧ ಪ್ರೇಕ್ಷಕನ ಜೊತೆ ಕಣ್ಣಾಮುಚ್ಚಾಲೆಯಾಡುತ್ತವೆ. "ಟ್ರಂಕ್‌' ಕೂಡಾ ಅದೇ ಮಾದರಿಯ ಸಿನಿಮಾ. ಹಿನ್ನೆಲೆ ಸಂಗೀತ, ನೆರಳು-ಬೆಳಕಿನ ಆಟ, ಆಕೃತಿಯೊಂದು ಅತ್ತಿಂದಿತ್ತ ಓಡಾಡಿ ಭಯ ಬೀಳಿಸೋದು, ಅಡುಗೆ ಮನೆಯ ಪಾತ್ರಗಳು ಸದ್ದು ಮಾಡೋದು, ಚಲಿಸುವುದು ... ಇವೆಲ್ಲವೂ ಹಾರರ್‌ ಸಿನಿಮಾಗಳ "ಬೈಲಾ'ದಲ್ಲಿದ್ದಂತಿದೆ. ಅದೇ ಕಾರಣದಿಂದ "ಟ್ರಂಕ್‌'ನಲ್ಲೂ ಅದು ಮುಂದುವರಿದಿದೆ.

ಹಾಗಾಗಿ, ಇಲ್ಲಿ ನೀವು ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಹಿನ್ನೆಲೆ ಸಂಗೀತ, ಲೈಟಿಂಗ್‌ ಎಂಜಾಯ್‌ ಮಾಡಬಹುದು. ಹಾಗೆ ನೋಡಿದರೆ "ಟ್ರಂಕ್‌'ನ ಒನ್‌ಲೈನ್‌ ಚೆನ್ನಾಗಿದೆ. ಇಲ್ಲಿ ಸಹೋದರ-ಸಹೋದರಿಯ ಬಾಂಧವ್ಯದ ಕಥೆಯೂ ಇದೆ. ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಕಥೆಯನ್ನು ಇನ್ನಷ್ಟು ಬೆಳೆಸಿಕೊಂಡು ಸಿನಿಮಾ ಮಾಡಬಹುದಿತ್ತು. ಆದರೆ, ಕಥೆ ಒಂದು ಒಂದು ಜಾಗ ಬಿಟ್ಟು ಕದಲುವುದಿಲ್ಲ. ಇನ್ನು, ಚಿತ್ರದಲ್ಲಿ ನಿಮಗೆ ಇಷ್ಟವಾಗೋದು ಫ್ಲ್ಯಾಶ್‌ಬ್ಯಾಕ್‌. ಸಿನಿಮಾದ ನಿಜವಾದ ಕಥೆ ತೆರೆದುಕೊಳ್ಳೋದು ಕೂಡಾ ಇಲ್ಲೇ. ಈ ಟ್ರ್ಯಾಕ್‌ ಮೂಲಕ ಸಿನಿಮಾ ಗಂಭೀರವಾಗುತ್ತಾ ಹೋಗುತ್ತದೆ.

ಹಾರರ್‌ ಕಥೆಯಲ್ಲೂ ಸೆಂಟಿಮೆಂಟ್‌ ಬೆರೆಸಿ, ಒಂದಷ್ಟು ಹೊತ್ತು ಮನಮಿಡಿಯುವಂತೆ ಮಾಡಲಾಗಿದೆ. ಆದರೆ, ಕ್ಲೈಮ್ಯಾಕ್ಸ್‌ ವೇಳೆಗೆ ನಿರ್ದೇಶಕರು ಮತ್ತೆ ಒಂದಷ್ಟು ಸನ್ನಿವೇಶಗಳನ್ನು ತುರುಕಿಸಿದ ಪರಿಣಾಮ ಪೇಲವವಾಗಿ ಕಾಣುತ್ತದೆ. ಅದು ಬಿಟ್ಟರೆ ತಾಂತ್ರಿಕವಾಗಿ "ಟ್ರಂಕ್‌' ನಿಮಗೆ ಇಷ್ಟವಾಗುತ್ತದೆ. ಹಾರರ್‌ ಸಿನಿಮಾದ ವಾತಾವರಣವನ್ನು ಕಟ್ಟಿಕೊಡುವಲ್ಲಿ ಚಿತ್ರತಂಡ ಹಿಂದೆ ಬಿದ್ದಿಲ್ಲ. ಚಿತ್ರದಲ್ಲಿ ನಟಿಸಿದ ನಿಹಾಲ್‌, ವೈಶಾಲಿ ದೀಪಕ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಅರುಣಾ ಬಾಲರಾಜ್‌, ಸುಂದರಶ್ರೀ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಚಿತ್ರದ ರೀರೆಕಾರ್ಡಿಂಗ್‌ ಪೂರಕವಾಗಿದೆ. ಆದರೆ, ಕೆಲವು ಸನ್ನಿವೇಶಗಳಲ್ಲಿ ಸಂಭಾಷಣೆಯನ್ನು ರೀರೆಕಾರ್ಡಿಂಗ್‌ "ನುಂಗಿ'ದೆ. 

ಚಿತ್ರ: ಟ್ರಂಕ್‌
ನಿರ್ಮಾಣ: ರಾಜೇಶ್‌ ಭಟ್‌
ನಿರ್ದೇಶನ: ರಿಷಿಕಾ ಶರ್ಮಾ
ತಾರಾಗಣ: ನಿಹಾಲ್‌, ವೈಶಾಲಿ, ಅರುಣಾ ಬಾಲರಾಜ್‌, ಸುಂದರಶ್ರೀ ಮತ್ತಿತರರು.

* ರವಿ ರೈ

Trending videos

Back to Top