CONNECT WITH US  

5 ಕೋಟಿ ಮನೆಗಳಲ್ಲಿ ಹಾರಾಡಲಿದೆ ಬಿ.ಜೆ.ಪಿ. ಬಾವುಟ

‘ಮೇರಾ ಪರಿವಾರ್ ಭಾಜಪ ಪರಿವಾರ್’ ಅಭಿಯಾನಕ್ಕೆ ಚಾಲನೆ

ನವದೆಹಲಿ: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ದೃಢ ಸಂಕಲ್ಪದೊಂದಿಗೆ ಭಾರತೀಯ ಜನತಾ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪಕ್ಷದ ಹೊಸ ಘೋಷ ವಾಕ್ಯವನ್ನು ಬಿಡುಗಡೆಗೊಳಿಸಿ ಚುನಾವಣಾ ಕಣಕ್ಕೆ ಅಧಿಕೃತವಾಗಿ ಬಿ.ಜೆ.ಪಿ. ಚಾಲನೆ ನೀಡಿತ್ತು. ಇದೀಗ ಕಮಲ ಪಕ್ಷವು ಅದರ ಮುಂದುವರಿದ ಭಾಗವಾಗಿ ಮಂಗಳವಾರದಂದು ‘ಮೇರಾ ಪರಿವಾರ್ ಭಾಜಪ ಪರಿವಾರ್’ ಎಂಬ ಹೊಸ ಅಭಿಯಾನಕ್ಕೆ ಚಾಲನೆ ನೀಡಿದೆ. ಸರಿಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನದಲ್ಲಿ ದೇಶಾದ್ಯಂತ ಸುಮಾರು 5 ಕೋಟಿ ಮನೆಗಳಲ್ಲಿ ಪಕ್ಷದ ಬಾವುಟವನ್ನು ಹಾರಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ..

ಭಾ.ಜ.ಪ.ದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಅಹಮದಾಬಾದ್ ನಲ್ಲಿರುವ ತನ್ನ ಮನೆಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಮತ್ತು ಸ್ಟಿಕ್ಕರ್ ಅನ್ನು ಅಂಟಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಆಡಿಟೋರಿಯಂನಲ್ಲಿ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆಯಲಿದೆ, ಈ ಸಂದರ್ಭದಲ್ಲಿ ಅಮಿತ್ ಶಾ ಅವರು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನರೇಂದ್ರ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪಕ್ಷದ ಬಾವುಟಗಳನ್ನು ಹಾರಿಸಿ ಬಳಿಕ ಅವುಗಳ ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅಮಿತ್ ಶಾ ಅವರು ಮನವಿ ಮಾಡಿಕೊಂಡಿರುವ ಧ್ವನಿ ಮುದ್ರಿಕೆಯನ್ನು ಇದೇ ಸಂದರ್ಭದಲ್ಲಿ ಪಕ್ಷ ಬಿಡುಗಡೆಗೊಳಿಸಿದೆ. ಈ ರಾಷ್ಟ್ರವ್ಯಾಪಿ ಅಭಿಯಾನವು ನಾಲ್ಕು ಹಂತಗಳಲ್ಲಿ ನಡೆಯಲಿದ್ದು ಮಾರ್ಚ್ 2ರಂದು ಅಂತ್ಯಗೊಳ್ಳಲಿದೆ.


Trending videos

Back to Top