CONNECT WITH US  

ವೀರಶೈವ ಮಹಾಸಭೆಯವರು ರಾಜಕೀಯ ಮಾಡುತ್ತಿದ್ದಾರೆ, ಧರ್ಮದ ಕಾರ್ಯವಲ್ಲ

ಲಿಂಗಾಯತ ಮತ್ತು ವೀರಶೈವ (ಬಸವ ತತ್ವ ಅನುಯಾಯಿಗಳು)ರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಕುರಿತು ರಾಜ್ಯಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೋರಾಟದ ಬ್ರೇನ್‌ ಚೈಲ್ಡ್‌ ಎಂದು ಕರೆಯಿಸಿಕೊಳ್ಳುವ ನಿವೃತ್ತ ಅಧಿಕಾರಿ ಎಸ್‌.ಎಂ. ಜಾಮದಾರ ಮುಂದಿನ ಹಾದಿಯ ಕುರಿತು ಮಾತನಾಡಿದ್ದಾರೆ. ಇದೇ ವೇಳೆಯಲ್ಲೇ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಪ್ರತ್ಯೇಕ ಧರ್ಮ ವಿಚಾರದಲ್ಲಿ ಎದುರಿಡುತ್ತಿರುವ ಅಭಿಪ್ರಾಯ ಬೇರೆ.

ರಾಜ್ಯ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡಲು ತೀರ್ಮಾನ ಮಾಡಿದೆ. ಈಗ ಏನನ್ನಿಸುತ್ತಿದೆ?
ಹೌದು ನಾವು ಸಂಘಟಿತವಾಗಿ ಹೋರಾಟ ಮಾಡಿದ್ದೇವೆ. ಅದಕ್ಕೆ ಸಿಕ್ಕ ಜಯ ಎಂದು ನಾವು ಭಾವಿಸಿದ್ದೇವೆ.

ವೀರಶೈವರು ಲಿಂಗಾಯತರಲ್ಲ ಎಂದು ನೀವು ವಾದಮಾಡಿ ದ್ದೀರಿ. ಈಗ ಸರಕಾರ ವೀರಶೈವರನ್ನೂ ಸೇರಿಸಿದೆಯಲ್ಲಾ ?
ಆ ರೀತಿ ಏನಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಮೊದಲು ಹೇಳಿದ್ದಾರೆ. ಅದರಲ್ಲಿ ವೀರಶೈವರು (ಬಸವ ತತ್ವ ಒಪ್ಪುವ) ಎನ್ನುವುದನ್ನು ಸೇರಿಸಿದ್ದಾರೆ. ಬಸವ ತತ್ವ ಯಾರೇ ಒಪ್ಪಿದರೂ ಅವರು ಲಿಂಗಾಯತರು. ವೈಷ್ಣವರೂ ಬಸವ ತತ್ವ ಒಪ್ಪಿಕೊಂಡು ಬಂದರೆ ಅವರೂ ಲಿಂಗಾಯತರು.

ಹಿಂದೆ ಯುಪಿಎ ಸರಕಾರ ವೀರಶೈವರ ಬೇಡಿಕೆ ತಿರಸ್ಕರಿಸಿದೆಯಲ್ಲಾ?
ಅದೇ ಕಾರಣಕ್ಕೆ ವೀರಶೈವ ಜೊತೆಗೆ "ಬಸವ ತತ್ವ ಒಪ್ಪುವ' ಎಂಬ ಪದವನ್ನು ಸೇರಿಸಿದ್ದು. 

ಪ್ರತ್ಯೇಕ ಧರ್ಮ ನೀಡಿದರೂ ಅಲ್ಪಸಂಖ್ಯಾಕರ ಮೀಸಲಾತಿ ಪಾಲು ಕೇಳುವುದಿಲ್ಲ ಎಂದು ಹೇಳುತ್ತೀರೇಕೆ?
ಆ ರೀತಿ ಅಲ್ಲಾ ಅದು. ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ. ಇರುವ ಅಲ್ಪಸಂಖ್ಯಾಕರಿಗೆ ತೊಂದರೆಯಾಗದಂತೆ ನಮಗೆ ಅಲ್ಪಸಂಖ್ಯಾಕರ ಸವಲತ್ತು ನೀಡಬೇಕು. ನಮಗೇನೂ ತೊಂದರೆ ಇಲ್ಲ. ಮೀಸಲಾತಿ ನೀಡುವುದು ಅಲ್ಪಸಂಖ್ಯಾಕರ ಆಯೋಗದಿಂದ ಅಲ್ಲ. ಬ್ಯಾಕ್‌ವರ್ಡ್‌ ಕ್ಲಾಸಸ್‌ ಕಮಿಷನ್‌, ಎಸ್ಸಿ ಕಮಿಷನ್‌, ಎಸ್ಟಿ ಕಮಿಷನ್‌ ಮೂಲಕ ಮೀಸಲಾತಿ ಬರುತ್ತದೆ. ಮೀಸಲಾತಿ ನೀಡಲು ಬೇರೆ ಕಾನೂನು ಇದೆ.  ಸಂವಿಧಾನದ ಆರ್ಟಿಕಲ್‌ 15/4, 16/4 ರಲ್ಲಿ ಸ್ಪಷ್ಟವಾಗಿ ಹೇಳಿದೆ. ಎಸ್ಸಿ, ಎಸ್ಟಿ, ಬ್ಯಾಕ್‌ವರ್ಡ್‌ ಕ್ಲಾಸ್‌ ಮತ್ತು ಅದರ್‌ ಬ್ಯಾಕ್‌ವರ್ಡ್‌ ಕ್ಲಾಸ್‌ ಅಂತ ನಾಲ್ಕು ಭಾಗ ಮಾಡಿದ್ದಾರೆ. ಲಿಂಗಾಯತರಿಗೆ ಉದ್ಯೋಗ ಮೀಸಲಾತಿ ಬಿಟ್ಟು ಉಳಿದ ಎಲ್ಲ ಮೀಸಲಾತಿಯಲ್ಲಿ ಲಾಭ ಸಿಗಲಿದೆ. ಲಿಂಗಾಯತರು 15 % ರಷ್ಟು ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸೇರುವುದರಿಂದ ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡಬೇಕಿದೆ. 

ಲಿಂಗಾಯತರ ಹೋರಾಟದಿಂದ ಸಾಮಾನ್ಯರ ಬದಲಿಗೆ ಶಿಕ್ಷಣ ಸಂಸ್ಥೆ ಹೊಂದಿದವರಿಗೆ ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲಾ?
ಅದು ಪೂರ್ಣ ಸತ್ಯವಲ್ಲ. ಲಿಂಗಾಯತರಿಗೆ ಅಲ್ಪಸಂಖ್ಯಾಕ ಮಾನ್ಯತೆ ದೊರೆತರೆ, ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಶೇಕಡಾ 50 ರಷ್ಟು ಸೀಟುಗಳು ದೊರೆಯುತ್ತವೆ. ಇದರಿಂದ ಆ ಸಮುದಾಯದ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಯುವಕರಿಗೆ ಅನುಕೂಲ ಆಗುವು ದೆಂದರೆ, ಸಮುದಾಯದ ಸಾಮಾನ್ಯರಿಗೆ ಅನುಕೂಲ ಆದಂತೆ ಅಲ್ಲವೇ? 

ಪ್ರತ್ಯೇಕ ಧರ್ಮ ಆಗುವುದರಿಂದ ಲಿಂಗಾಯತ ಎಸ್ಸಿ ಎಸ್ಟಿ ಸಮು ದಾಯ ಮೀಸಲಾತಿ ಕಳೆದುಕೊಳ್ಳುತ್ತಾರೆ ಎಂಬ ಮಾತಿದೆ?
ಲಿಂಗಾಯತ ಹಿಂದುಳಿದ ವರ್ಗದವರಿಗೆ ಮೀಸಲಾತಿ ಅವಕಾಶ ಇದೆ. ಅದರಲ್ಲಿರುವ ದಲಿತ ಸಮುದಾಯ ಚಮ್ಮಾರ, ಸಮಗಾರ, ಮಾದರ ಸಮುದಾ ಯದವರು ಲಿಂಗಾಯತ ಧರ್ಮಕ್ಕೆ ಸೇರಿದರೆ ಅವರಿಗೆ ಸಮಸ್ಯೆಯಾಗಲಿದೆ. ಧಾರ್ಮಿಕವಾಗಿ ಲಿಂಗಾಯತಕ್ಕೆ ಸೇರಿದರೆ ಅವರಿಗೆ ಮೀಸಲಾತಿ ತೊಂದರೆಯಾಗಲಿದೆ. ಅನೇಕ ದಲಿತರು ಕ್ರಿಶ್ಚಿಯನ್‌ ಆಗಿದ್ದಾರೆ. ಆದರೆ, ಅವರು ಕ್ರಿಶ್ಚಿಯನ್‌ ಅಂತ ಹೇಳಿಕೊಳ್ಳುವುದಿಲ್ಲ. ಇಲ್ಲಿಯೂ ಅಷ್ಟೇ ಆಗುತ್ತದೆ. 

ಲಿಂಗಾಯತ ಮತ್ತು ಹಿಂದುಗಳ ಶಿವ ಹೇಗೆ ಭಿನ್ನ?
ವೇದದಲ್ಲಿ ಬಹುದೇವ ಉಪಾಸನೆ ಬಗ್ಗೆ ಹೇಳಲಾಗಿದೆ. ವೇದದಲ್ಲಿಯೇ ಗೊಂದಲಗಳಿವೆ. ಸರ್ವ ದೇವಂ ನಮಸ್ಕಾರಾಯ ಕೇಶವಂ ಪ್ರತಿಗತ್ಛತಿ ಅಂತ ಹೇಳುತ್ತಾರೆ. ಅಂದರೆ ಎಲ್ಲಾ ದೇವರನ್ನು ಪೂಜೆ ಮಾಡಿದರೂ ಒಬ್ಬನೇ ದೇವರಿಗೆ ಹೋಗುತ್ತದೆ ಎಂದು ಏಕ ದೇವರ ಉಪಾಸನೆ ಇದೆ ಎಂದು ವಾದ ಮಾಡುತ್ತಾರೆ. ಆದರೆ, ಲಿಂಗಾಯತರು ಬಹುದೇವೋಪಾಸಕರು ಅಲ್ಲ. ವೇದದಲ್ಲಿ ನಿರಾಕಾರ ದೇವರ ಬಗ್ಗೆ ಪ್ರಸ್ತಾಪ ಇದೆ. ಆದರೆ, ಹಿಂದುಗಳ ಶಿವನಿಗೆ ಆಕಾರ ಇದೆ. ಹೆಂಡತಿ, ಮಕ್ಕಳು ಎಲ್ಲರೂ ಇದ್ದಾರೆ. ಲಿಂಗಾಯತರ ಶಿವ ನಿರಾಕಾರನಾಗಿದ್ದಾನೆ. ಅವನ ಬಗ್ಗೆ ಬಸವಣ್ಣ ಜಗದಗಲ, ಮುಗಿಲಗಲ ಅಂತ ಹೇಳಿದ್ದಾನೆ. ಅವನಿಗೆ ಆಕಾರ ಇಲ್ಲ. ಹೆಂಡತಿ ಮಕ್ಕಳಿಲ್ಲ. ಮದುವೆಯಿಲ್ಲ. ಯಾರ ಕಣ್ಣಿಗೂ ಕಾಣುವುದಿಲ್ಲ. ಈತ ಪ್ರತಿಯೊಬ್ಬರ ದೇಹದಲ್ಲಿಯೇ ಇದ್ದಾನೆ. 

ಆಚರಣೆ ಬೇರೆ ಆದರೆ ಧರ್ಮ ಮಾಡಬೇಕೇ?
ಆ ರೀತಿ ಒಂದೊಂದೇ ಅಂಶಗಳನ್ನು ಇಟ್ಟುಕೊಂಡು ನೋಡಿದರೆ ಗೊಂದಲಗಳು ಉಂಟಾಗುತ್ತವೆ. ನೀವು ಮಾಧ್ಯಮದವರು ಒಂದೇ ವಿಷಯವನ್ನು ಇಟ್ಟುಕೊಂಡು ವಾದ ಮಾಡುತ್ತೀರಿ. ಹಿಂದುಗಳಲ್ಲಿ ನಲವತ್ತು ಸಂಸ್ಕಾರಗಳಿವೆ. ಲಿಂಗಾಯತರಲ್ಲಿ ನಾಲ್ಕು ಸಂಸ್ಕಾರಗಳು ಮಾತ್ರ ಬರುತ್ತವೆ. ಹಿಂದುಗಳು ಪುನರ್‌ ಜನ್ಮ, ಕೈಲಾಸ ನಂಬುತ್ತಾರೆ. ಲಿಂಗಾಯತರಲ್ಲಿ ಪುನರ್‌ಜನ್ಮ ಇಲ್ಲ. ಕೈಲಾಸ ನಂಬುವುದಿಲ್ಲ. 

ಪ್ರತ್ಯೇಕ ಧರ್ಮ ಇಲ್ಲದೇ ಬಸವಣ್ಣನವರ ತತ್ವ ಪ್ರಚಾರ ಮಾಡಲು ಆಗುತ್ತಿರಲಿಲ್ಲವೇ?
ಇದರಲ್ಲಿ ಎರಡು ವಿಷಯಗಳಿವೆ. ಧರ್ಮ ಪ್ರಚಾರ, ಧರ್ಮದ ನಂಬಿಕೆ, ವೈಯಕ್ತಿಕ ವಿಷಯಗಳು, ಸಾಮಾಜಿಕ ವಿಷಯಗಳು ಇದೆಲ್ಲ ಒಂದು ಭಾಗ. ಇನ್ನೊಂದೇನಿದೆ ಅಂದರೆ, ಧರ್ಮವನ್ನು ಜನರು ಆಚರಣೆ ಮಾಡುತ್ತಿರುವುದನ್ನು ನೋಡಿ ಅವರು ಎಲ್ಲಿದ್ದಾರೆ ಎಂದು ನೋಡಿ ಸರಕಾರ ಸವಲತ್ತು ಕೊಡುತ್ತದೆ. ಹೀಗಾಗಿ ಜನರು ಬೇರೆ ಬೇರೆ ಧರ್ಮದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಸಿಖರಿಗೆ, ಜೈನರಿಗೆ ಬೌದ್ಧರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟಿದ್ದಾರೆ. ಅವರಿಗೆ ಹೇಗೆ ಕೊಟ್ಟಿದ್ದೀರೋ ಹಾಗೆ ನಮಗೂ ಕೊಡಿ ಅನ್ನುವುದು ನಮ್ಮ ಬೇಡಿಕೆ.

ವೀರಶೈವ ಮಹಾಸಭೆ ಸರಕಾರದ ನಿರ್ಧಾರವನ್ನು ವಿರೋಧಿಸುತ್ತಿದೆಯಲ್ಲಾ?
ಮಹಾಸಭೆಗೆ ಏನು ಮಾತಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಮಹಾಸಭೆ ಕಳೆದ 40 ವರ್ಷದಿಂದ  ಪ್ರತ್ಯೇಕ ಧರ್ಮದ ಬೇಡಿಕೆ ಇಡುತ್ತಿದೆ. ಕೇಂದ್ರ ಸರಕಾರ ಯಾಕೆ ಮಾನ್ಯತೆ ನೀಡುತ್ತಿಲ್ಲ ಎನ್ನುವುದು ಅದಕ್ಕೆ ಗೊತ್ತಿದೆ. ಇದಕ್ಕೆ ಮಹಾಸಭೆ ಉತ್ತರ ನೀಡಬೇಕು. ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ. ಮಹಾಸಭೆಯವರು ಧರ್ಮದ ಕಾರ್ಯ ಮಾಡುತ್ತಿಲ್ಲ. ರಾಜಕೀಯ ಮಾಡುತ್ತಿದ್ದಾರೆ. ಧರ್ಮವನ್ನು ಒಡೆದವರು ಲಿಂಗಾಯತರಲ್ಲ ವೀರಶೈವರು.

ರಾಜ್ಯ ಸರಕಾರದ ಶಿಫಾರಸ್ಸು ಕೇಂದ್ರ  ಒಪ್ಪದಿದ್ದರೆ ಮುಂದೇನು?
ಕೇಂದ್ರ ಸರಕಾರ ಒಪ್ಪದಿದ್ದರೆ ನಮ್ಮ ಹೋರಾಟವನ್ನು ಮುಂದುವರಿ ಸುತ್ತೇವೆ. ಸದ್ಯಕ್ಕೆ ಯಾವುದೇ ಊಹೆ ಮಾಡುವುದು ಸರಿಯಲ್ಲ. 

ಕಾನೂನು ಹೋರಾಟ ಮಾಡುತ್ತೀರಾ?
ಈಗಾಗಲೇ ವೀರಶೈವರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ನಾವು ಅವರನ್ನು ಎದುರಿಸುತ್ತಿದ್ದೇವೆ. ಬೌದ್ಧ, ಜೈನ್‌ ಧರ್ಮಕ್ಕೆ ಮಾನ್ಯತೆ ನೀಡಿದಂತೆ ನಮಗೇಕೆ ಮಾನ್ಯತೆ ನೀಡುತ್ತಿಲ್ಲ ಎಂದು ಕೋರ್ಟ್‌ಗೆ ಹೋಗುತ್ತೇವೆ. ಕೋರ್ಟ್‌ಗೆ ಪ್ರತ್ಯೇಕ ಧರ್ಮ ನೀಡುವ ಅಧಿಕಾರ ಇಲ್ಲ. ಆದರೆ, ತಾರತಮ್ಯ ಮಾಡುತ್ತಿರುವುದರ ವಿರುದ್ಧ ಕೋರ್ಟ್‌ಗೆ ಹೋಗುತ್ತೇವೆ. ನಮ್ಮ ಹಕ್ಕನ್ನು ಕೇಳುತ್ತೇವೆ.  

ವೀರಶೈವ ಲಿಂಗಾಯತರು ಹಿಂದುಗಳೇ
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸರಕಾರದ ಶಿಫಾರಸನ್ನು ಕೇಂದ್ರ ತಿರಸ್ಕರಿಸಬೇಕು. ರಾಜ್ಯ ಸರಕಾರದ ನಡೆ ಖಂಡನೀಯ. ಬಸವಣ್ಣ  ಎಲ್ಲಿಯೂ ತಾನು ಲಿಂಗಾಯತ ಎಂದು ಹೇಳಿಕೊಂಡಿಲ್ಲ. ಈಗಿನ ರಾಜಕೀಯ ಮುಖಂಡರುಗಳಿಗೆ ಬಸವಣ್ಣನ ಬಗ್ಗೆ ಮಾಹಿತಿ ಕೊರತೆ ಇದೆ. ರಾಜಕೀಯ ಉದ್ದೇಶಕ್ಕಾಗಿ ರಾಜ್ಯ ಸರಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಇವೆರಡೂ ಹಿಂದೂ ಧರ್ಮದ ಭಾಗವಾಗಿವೆ. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ತಂತ್ರಗಳು ನಡೆಯುತ್ತಿವೆ. ಇದಕ್ಕೆ ಕೇಂದ್ರ ಸರಕಾರ ಸಹ ಮಣಿಯಬಾರದು. ಈ ಸಂಬಂಧ ಕೇಂದ್ರ ಸಚಿವರಾದ ಅನಂತ್‌ ಕುಮಾರ್‌ ಮತ್ತು ಅನಂತ ಕುಮಾರ್‌ ಹೆಗಡೆ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡುವೆ.

ಒಂದು ವೇಳೆ ಕೇಂದ್ರ ಸರಕಾರ ಈ ಶಿಫಾರಸನ್ನು ಜಾರಿಗೊಳಿಸಿದರೆ ಸುಪ್ರೀಂ ಕೋರ್ಟ್‌ ಮೋರೆ ಹೋಗುತ್ತೇನೆ.  
ಮಾತೆ ಮಹಾದೇವಿ ಅವರು ಬಸವಣ್ಣ ಲಿಂಗಾಯತನೇ ಹೊರತು ವೀರಶೈವ ಅಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆ ಅಪಾಯಕಾರಿ ನಡೆ. ಈ ಹಿಂದೆ ಸನ್ಯಾಸಿ ಆಗುವ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ "ನನ್ನ ಜೀವನವನ್ನು ವೀರಶೈವಕ್ಕಾಗಿ ಮೀಸಲಿಡುತ್ತೇನೆ' ಎಂದಿದ್ದರು. ಈಗ ಮಾತು ಬದಲಿಸಿದ್ದಾರೆ. ಲಿಂಗಾಯತ  ಸ್ವತಂತ್ರ ಧರ್ಮ, ಅವರು ಹಿಂದೂಗಳಲ್ಲ ಎಂಬ ಅವಿವೇಕದ ವಾದವನ್ನು ಕೈಬಿಡಬೇಕು. ಈ ಹಿಂದೆ ಕರ್ನಾಟಕದ ಗಾಂಧಿ, ಹರ್ಡೆಕರ್‌ ಮಂಜಪ್ಪ ಸೇರಿದಂತೆ ಹಲವು ಮಹನೀಯರು ವೀರಶೈವವು ಹಿಂದೂ ಧರ್ಮದ ಒಂದು ಭಾಗ ಎಂದು ಒಪ್ಪಿದ್ದರು.

ಕೇಂದ್ರ ಸರಕಾರದ ಹಿಂದೂ ವಿವಾಹ ಕಾನೂನು ಅನ್ವಯ ಲಿಂಗಾಯತ ವೀರಶೈವರು ಹಿಂದೂ ಧರ್ಮದ ವ್ಯಾಪ್ತಿಗೆ ಒಳಪಡುತ್ತಾರೆ.  ಇದು ತಿದ್ದು ಪಡಿ ಆಗುವವರೆಗೆ ಲಿಂಗಾಯತ ವೀರಶೈವರು ಹಿಂದೂಗಳಾಗಿಯೇ ಉಳಿಯುತ್ತಾರೆ. ಕಾನೂನು ತಿದ್ದುಪಡಿ ಆಗುವುದು ಸದ್ಯಕ್ಕೆ ನನ್ನ ಪ್ರಕಾರ ಅಸಾಧ್ಯ. ಹಾಗಾಗಿ, ಮುಂದೆಯೂ ವೀರಶೈವ ಲಿಂಗಾಯತರು ಹಿಂದೂಗಳೇ. ನಾನು ಸನಾತನ ಹಿಂದೂ ಎಂದು ಮಹಾತ್ಮ ಗಾಂಧಿ, ನನ್ನನ್ನು ನಾನು ಹಿಂದೂ ಎಂದು ಹೇಳಿಕೊ ಳ್ಳಲು ಹೆಮ್ಮೆಪಡುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಲಿಂಗಾಯತರು ಸ್ವತಂತ್ರ ಧರ್ಮ, ಅವರು ಹಿಂದೂಗಳಲ್ಲ ಎಂಬ ತೀವ್ರ ಅವಿವೇಕದ ವಾದವನ್ನು ಕೈ ಬಿಡುವುದೇ ಸರಿ. ಇಂದು ನಮಗೆ ಬೇಕಾಗಿರುವುದು ಸತ್ಯ ಪ್ರತಿಪಾದನೆ ಮತ್ತು ಒಗ್ಗಟ್ಟು.

ಸಮಿತಿ ಅವಸರದಿಂದ ವರದಿ ನೀಡಿತೇ?
ಮಹಾಸಭೆಯವರು ವರದಿಯಲ್ಲಿ ಏನಿದೆ ಎನ್ನುವುದನ್ನು ಓದಿ ಮಾತನಾಡಲಿ. ಸಮಿತಿ ಎಷ್ಟು ಅಧ್ಯಯನ ಮಾಡಿದೆ ಎಂದು ಅದರಲ್ಲಿ ತಿಳಿಸಿದ್ದಾರೆ. ಮಹಾಸಭೆಯವರ ಬಳಿ ಯಾವುದೇ ದಾಖಲೆ ಇಲ್ಲ. ವೀರಶೈವರ ಪರವಾಗಿ ಇರುವವರು 33 ಪುಸ್ತಕಗಳ ದಾಖಲೆಗಳನ್ನು ನೀಡಿದ್ದಾರೆ. ಮಹಾಸಭೆಯವರು ಬರೀ ರಾಜಕೀಯ ಮಾಡುತ್ತಿದ್ದಾರೆ.ಸಮಿತಿಯಲ್ಲಿ ದ್ದವರು ದೊಡ್ಡ ಸ್ಕಾಲರ್ಸ್‌ ಇದ್ದಾರೆ. ಒಬ್ಬರು ಜಡ್ಜ್ ಇದ್ದಾರೆ. ಯಾರೂ ಲಿಂಗಾಯತರಲ್ಲದಿರಬಹುದು. ಅವರು ಬೇರೆ ಬೇರೆ ಕ್ಷೇತ್ರದಲ್ಲಿ ತಜ್ಞರು. ಅವರೇನೂ ಮೂರ್ಖರಲ್ಲ. ಗೂಬೆ ಕೂರಿಸುವವರು, ವರದಿ ವಿರೋಧಿಸುವವರು ಸರಿಯಾಗಿ ಓದಿಕೊಂಡು ಮಾತನಾಡಲಿ. 

ಎಸ್‌.ಎಂ. ಜಾಮದಾರ 
ಮಹಾಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭೆ

ಸಂದರ್ಶನ ಶಂಕರ ಪಾಗೋಜಿ 


Trending videos

Back to Top