CONNECT WITH US  

ರಜನಿ ರಾಜಕೀಯಕ್ಕೆ ಬರ್ತಾರಾ?

ಎಂಜಿಆರ್‌ ಆಗಲಿ, ಕರುಣಾನಿಧಿ ಅವರಾಗಲಿ ಸ್ವಂತ ಪಕ್ಷಗಳಿಂದಲೇ ಹೆಸರು ಮಾಡಿದವರು. ಅದರಲ್ಲೂ ದ್ರಾವಿಡ ಆಂದೋಲನಗಳ ಮೂಲಕವೇ ಹೆಸರು ಗಟ್ಟಿ ಮಾಡಿಕೊಂಡವರು. ಇದೇ ಹಾದಿಯಲ್ಲಿ ನಡೆದು ಸ್ವಂತ ರಾಜಕೀಯ ಪಕ್ಷ ಮಾಡಿದರೆ ರಜನಿಕಾಂತ್‌ ಅವರಿಗೆ ಯಶಸ್ಸು ಸಿಗಬಹುದೇ?

'ನಾ ಎಪ್ಪೊ ವರುವೆನ್‌ ಎಪ್ಪಡಿ ವರುವೆನ್‌ ಯಾರುಕುಮ್‌ ತೆರಿಯಾದು ಆನಾ ವರವೇಂದಿಯಾ ತಿದುಲಾ ಕರೆಕ್ಟ್ ಆ ವರುವೆನ್‌'' (ನಾನು ಯಾವಾಗ ಮತ್ತು ಹೇಗೆ ಬರುತ್ತೇನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ನಾನು ಸರಿಯಾದ ಸಮಯದಲ್ಲೇ ಬರುತ್ತೇನೆ) 1995ರ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ 'ಮುತ್ತು' ಚಿತ್ರದ ಅಣಿಮುತ್ತುಗಳಿವು. ಆಗ ರಜನಿ ತಮಿಳುನಾಡು ರಾಜಕಾರಣಕ್ಕೆ ಪ್ರವೇಶಿಸಿಯೇ ಬಿಡುತ್ತಾರೆ ಎಂಬ ಮಾತುಗಳಿದ್ದವು. ಚಿತ್ರದ ಈ ಪಂಚಿಂಗ್‌ ಡೈಲಾಗ್‌ ಮೂಲಕವೇ ರಜನಿಕಾಂತ್‌ ಮನದೊಳಗಿನ ರಾಜಕೀಯ ಪ್ರವೇಶದಾಸೆಯನ್ನು ಬಿಚ್ಚಿಟ್ಟಿದ್ದರು. ಆದರೆ ಇದಾಗಿ ಸರಿಸುಮಾರು 23 ವರ್ಷಗಳೇ ಕಳೆದು ಹೋಗಿವೆ. ರಾಜಕೀಯ ಪ್ರವೇಶದ ವಿಚಾರದಲ್ಲಿ ರಜನಿ ಇನ್ನೂ ಜನರಲ್ಲಿ ಕುತೂಹಲವನ್ನು ಇಟ್ಟಿದ್ದಾರೆ. ಹಾಗಾದರೆ, ರಜನಿಕಾಂತ್‌ ಈಗ ರಾಜಕೀಯ ಪ್ರವೇಶ ಮಾಡಿಯೇ ಬಿಡುತ್ತಾರಾ?

ಈ ಮಿಲಿಯನ್‌ ಡಾಲರ್‌ ಪ್ರಶ್ನೆ ಈಗ ಉದ್ಭವವಾಗಲಿಕ್ಕೆ ಕಾರಣಗಳೂ ಇವೆ. 8 ವರ್ಷಗಳ ಬಳಿಕ ರಜನಿಕಾಂತ್‌ ತಮ್ಮ ಕಟ್ಟಾ ಅಭಿಮಾನಿಗಳ ಜತೆಗೆ ಮೂರ್ನಾಲ್ಕು ದಿನಗಳ ಕಾಲ ಆಪ್ತ ಸಂವಾದ ನಡೆಸಿದ್ದಾರೆ. ಇಂಥ ಸಂದರ್ಭದಲ್ಲೇ ಅವರ ಅಭಿಮಾನಿಗಳೇ 'ಅಣ್ಣಾ ನೀವು ಯಾವಾಗ ರಾಜಕೀಯಕ್ಕೆ ಬರುತ್ತೀರಿ?' ಎಂಬ ಪ್ರಶ್ನೆಯನ್ನೂ ಹಾಕಿದ್ದಾರೆ. ಇದಕ್ಕೆ ರಜನಿಕಾಂತ್‌: 'ನನಗೆ ನನ್ನದೇ ಆದ ಕೆಲಸವಿದೆ, ಜವಾಬ್ದಾರಿಗಳಿವೆ. ಹಾಗೆಯೇ ನಿಮಗೂ ನಿಮ್ಮದೇ ಕೆಲಸಗಳಿವೆ. ನೀವು ನಿಮ್ಮ ಸ್ಥಳಗಳಿಗೆ ಹೋಗಿ ನಿಮ್ಮ ಕೆಲಸ ಪೂರೈಸಿ. ಸಮರದ ವೇಳೆ ನಾನೇ ಕರೆಯುತ್ತೇನೆ. ಆಗ ಬರುವಿರಂತೆ...'' ಎಂದಿದ್ದಾರೆ. ಈ ಮಾತಿನ ಹಿಂದೆ ಬಹಳಷ್ಟು ಅರ್ಥಗಳಿವೆ. ಅಲ್ಲದೆ ಸಮರವೆಂದರೆ ಏನು? ಯಾವಾಗ ಎಂಬುದು ಅಭಿಮಾನಿಗಳ ಮನದಲ್ಲಿ ಉಳಿದಿರುವ ಯಕ್ಷ ಪ್ರಶ್ನೆ. ರಾಜಕೀಯ ಪಂಡಿತರ ಪ್ರಕಾರ, ಇದೊಂದು ಪೊಲಿಟಿಕಲ್‌ ಸ್ಟೇಟ್‌ಮೆಂಟ್‌. 

ದೇಶದ ಬಹುದೊಡ್ಡ ಸೂಪರ್‌ಸ್ಟಾರ್‌ ರಜನಿಕಾಂತ್‌ ತಮಗಿರುವ ಲಕ್ಷಾಂತರ ಅಭಿಮಾನಿಗಳು ಯಾವ ರೀತಿ ಯೋಚನೆ ಮಾಡುತ್ತಿದ್ದಾರೆ? ಇನ್ನೂ ಅವರ ಮನದಲ್ಲಿ ತಾವು ರಾಜಕೀಯಕ್ಕೆ ಬರುವ ಬಗ್ಗೆ ಆಸಕ್ತಿ ತಿಳಿಯುವ ಸಲುವಾಗಿಯೇ 8 ವರ್ಷಗಳ ನಂತರ ಅವರ ಜತೆ ಮಾತಿಗಿಳಿದಿದ್ದರು ಎಂಬ ವಿಶ್ಲೇಷಣೆಗಳಿವೆ. ಅಲ್ಲದೆ ಅಭಿಮಾನಿಗಳ ರಾಜಕೀಯ ಪ್ರವೇಶದ ಪ್ರಶ್ನೆಗೆ ರಜನಿ ಕೂಡ ಅಷ್ಟೇ ಒಗಟಾದ, ರಾಜಕೀಯ ಪ್ರವೇಶಕ್ಕೆ ಹತ್ತಿರವಾದ ಹೇಳಿಕೆಯನ್ನೇ ನೀಡಿ ಕುತೂಹಲ ಇಮ್ಮಡಿಗೊಳಿಸಿದ್ದಾರೆ.

ಸರಿ, ಹಾಗಾದರೆ ರಜನಿ ರಾಜಕೀಯ ಪ್ರವೇಶ ಮಾಡಿಯೇ ಬಿಡುತ್ತಾರೆ ಎಂದುಕೊಳ್ಳೋಣ. ಅವರ ಮುಂದಿರುವ ಆಯ್ಕೆ ಏನು? ಇದು ಕೇವಲ ತಮಿಳುನಾಡು ಅಷ್ಟೇ ಅಲ್ಲ, ರಾಜಧಾನಿ ದೆಹಲಿ ಮಟ್ಟದಲ್ಲೂ ಬಹು ಚರ್ಚಿತ ವಿಷಯ. ತಮಿಳುನಾಡು ರಾಜಕಾರಣವೇ ಅಂಥದ್ದು. ಇಲ್ಲಿ ವ್ಯಕ್ತಿಗತ ವರ್ಚಸ್ಸಿಗಿಂತ, ಸಿನಿಮಾ ಹಿನ್ನೆಲೆಗೆ ಹೆಚ್ಚಿನ ಒತ್ತುಕೊಡುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಕಾರಣವೂ ಇದೆ. ಎಂ.ಜಿ. ರಾಮಚಂದ್ರನ್‌, ಜಯಲಲಿತಾ ಮತ್ತು ಕರುಣಾನಿಧಿ ಸಿನಿಮಾ ಪರದೆಯ ಒಳಗಿಂದಲೇ ಬಂದವರು. ಎಂಜಿಆರ್‌ ಮತ್ತು ಜಯಲಲಿತಾ ತೆರೆ ಮುಂದೆ ಕಂಗೊಳಿಸಿದ್ದರೆ, ಕರುಣಾನಿಧಿ ಅಕ್ಷರ ರೂಪದಲ್ಲಿ ಸಿನಿರಂಗದಲ್ಲಿ ಮಿಂಚಿದ್ದವರು.  

ಮೊದಲಿನಿಂದಲೂ ಅಷ್ಟೇ, ತಮಿಳುನಾಡು ಪ್ರಾದೇಶಿಕ ಪಕ್ಷಗಳ ನೆಲೆ ಹೊಂದಿರುವ ಪಕ್ಷ. ಅದರಲ್ಲೂ ದ್ರಾವಿಡ ಮೂಲದ ರಾಜಕೀಯ ಪಕ್ಷಗಳೇ ಇಲ್ಲಿ ಕಂಗೊಳಿಸಿದ್ದು, ಎಂಜಿಆರ್‌ ಮತ್ತು ಕರುಣಾನಿಧಿ ದ್ರಾವಿಡ ಸಮುದಾಯದ ಗಟ್ಟಿ ತಳಹದಿ ಹೊಂದಿದ್ದರೆ, ಜಯಲಲಿತಾ ಮೇಲ್ವರ್ಗಕ್ಕೆ ಸೇರಿದವರಾದರೂ, ತಮಿಳುನಾಡಿನ ದೇಗುಲಗಳ ಉಸ್ತುವಾರಿ ಹೊತ್ತಿರುವ ಅಯ್ಯಂಗಾರಿ ಸಮುದಾಯಕ್ಕೆ ಸೇರಿದವರು. ಹೀಗಾಗಿ, ಜನ ಜಯಲಲಿತಾ ಅವರ ದ್ರಾವಿಡ ಮೂಲದ ಬಗ್ಗೆ ಪ್ರಶ್ನಿಸದೇ, ಬೆಂಬಲಿಸಿದರು. ಆದರೆ ರಜನಿಕಾಂತ್‌ಗೆ ಈ ಮಟ್ಟದ ಪ್ರಭಾವ ಇದೆಯೇ? ಏಕೆಂದರೆ, ಲಕ್ಷಾಂತರ ಮಂದಿ ಅಭಿಮಾನಿಗಳಿದ್ದ ಮಾತ್ರಕ್ಕೆ ರಾಜಕಾರಣದಲ್ಲಿ ಯಶಸ್ವಿಯಾಗಬೇಕು ಎಂದೇನಿಲ್ಲ. ಇದಕ್ಕೆ ಉದಾಹರಣೆ ಆಂಧ್ರದ ಚಿರಂಜೀವಿ. ಇವರು ಮೆಗಾಸ್ಟಾರ್‌ ಪಟ್ಟ ಕಟ್ಟಿಕೊಂಡಿದ್ದರೂ, ರಾಜಕೀಯವಾಗಿ ಸ್ವಂತ ಪಕ್ಷ ಕಟ್ಟಿ ಅಷ್ಟೇನೂ ಗಮನಹರಿಸುವ ಸಾಧನೆ ಮಾಡಲಿಲ್ಲ. ಈಗ ಅವರ ಪಕ್ಷವನ್ನು ಕಾಂಗ್ರೆಸ್‌ ಜತೆ ವಿಲೀನ ಮಾಡಿ, ಎಲ್ಲರೊಳು ಒಬ್ಬರಂತೆ ಇದ್ದಾರೆ ಎಂಬ ಉದಾಹರಣೆಯನ್ನು ಸ್ವತಃ ತಮಿಳುನಾಡಿನ ಚಿಂತಕರೇ ಕೊಡುತ್ತಾರೆ. ಆದರೆ, ಎಂಜಿಆರ್‌ ವಿಚಾರದಲ್ಲಿ ಇವರು ಹೇಳುವುದೇ ಬೇರೆ. ಎಂಜಿಆರ್‌ ದ್ರಾವಿಡ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು. ಇದು ರಾಜಕೀಯವಾಗಿ ಅವರ ಕೈ ಹಿಡಿಯಲು ಕಾರಣವೂ ಆಯಿತು. ಇದು ಕರುಣಾನಿಧಿ ಅವರಿಗೂ ಸಲ್ಲುತ್ತದೆ. ಆದರೆ ರಜನಿಕಾಂತ್‌ ಮೂಲತಃ ತಮಿಳುನಾಡಿನವರೇ ಅಲ್ಲ. ಹೀಗಾಗಿ ಅಲ್ಲಿನ ಜನ, ಅಷ್ಟು ಸುಲಭವಾಗಿ ರಜನಿಯನ್ನು ಒಪ್ಪುತ್ತಾರೆಯೇ ಎಂದು ಕಾದು ನೋಡಬೇಕು. 

ಇದು ರಜನಿಕಾಂತ್‌ ರಾಜಕೀಯ ಪ್ರವೇಶಕ್ಕೂ ಮುಂಚೆಯ ಅಂತೆಕಂತೆಗಳು. ಒಂದು ವೇಳೆ ರಜನಿ ರಾಜಕೀಯಕ್ಕೆ ಬಂದೇ ಬಿಟ್ಟರು ಎಂದುಕೊಳ್ಳೋಣ. ಅವರು ಸ್ವಂತ ಪಕ್ಷ ಕಟ್ಟುತ್ತಾರಾ ಅಥವಾ ಯಾವುದಾದರೊಂದು ರಾಜಕೀಯ ಪಕ್ಷದ ಜತೆ ಗುರುತಿಸಿಕೊಳ್ಳುತ್ತಾರಾ? ಈ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಒಂದು ಮೂಲಗಳ ಪ್ರಕಾರ, ರಜನಿಕಾಂತ್‌ ಎಲ್ಲ ಸಾಧ್ಯತೆಗಳ ಬಗ್ಗೆಯೂ ಕೂಲಂಕಶವಾಗಿ ಚರ್ಚಿಸುತ್ತಿದ್ದಾರೆ. ಎಂಜಿಆರ್‌ ಆಗಲಿ, ಕರುಣಾನಿಧಿ ಅವರಾಗಲಿ ಸ್ವಂತ ಪಕ್ಷಗಳಿಂದಲೇ ಹೆಸರು ಮಾಡಿದವರು. ಅದರಲ್ಲೂ ದ್ರಾವಿಡ ಆಂದೋಲನಗಳ ಮೂಲಕವೇ ಹೆಸರು ಗಟ್ಟಿ ಮಾಡಿಕೊಂಡವರು. ಇದೇ ಹಾದಿಯಲ್ಲಿ ನಡೆದು ಸ್ವಂತ ರಾಜಕೀಯ ಪಕ್ಷ ಮಾಡಿದರೆ ರಜನಿಕಾಂತ್‌ ಅವರಿಗೆ ಯಶಸ್ಸು ಸಿಗಬಹುದೇ? ಸದ್ಯಕ್ಕೆ ಇದಕ್ಕೆ ಉತ್ತರವಿಲ್ಲ. 

ಇನ್ನು ಅವರ ಮುಂದಿರುವ ಆಯ್ಕೆ ಬಿಜೆಪಿ. ರಜನಿಕಾಂತ್‌ ಎಲ್ಲೂ, ಯಾವುದೇ ಸಮಯದಲ್ಲೂ ತಾವು ಬಿಜೆಪಿ ಜತೆ ಗುರುತಿಸಿಕೊಳ್ಳುತ್ತೇನೆ ಎಂದು ಹೇಳಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಜನಿಕಾಂತ್‌ಗಿರುವ ಹತ್ತಿರದ ಸ್ನೇಹ ಈ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಅಲ್ಲದೆ ಮೊನ್ನೆ ರಾಜಕೀಯ ಪ್ರವೇಶದ ಸುಳಿವು ಕೊಟ್ಟಾಗಲೇ, ತಮಿಳುನಾಡು ಬಿಜೆಪಿ ಘಟಕ ರಜನಿಕಾಂತ್‌ ಅವರನ್ನು ಕೈಬೀಸಿ ಕರೆಯಿತು. ವಿಶೇಷವೆಂದರೆ ಇದಕ್ಕೆ ರಜನಿ ಎಸ್‌ ಎನ್ನಲೂ ಇಲ್ಲ, ನೋ ಎನ್ನಲೂ ಇಲ್ಲ. ಹೀಗಾಗಿ ಬಿಜೆಪಿ ಜತೆ ಗುರುತಿಸಿಕೊಂಡರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಆದರೆ, ರಜನಿ ಬಿಜೆಪಿ ಜತೆ ಗುರುತಿಸಿಕೊಂಡರೆ ಲಾಭವಾಗುತ್ತಾ ಎಂಬ ಪ್ರಶ್ನೆಗಳೂ ಇವೆ. ತಮಿಳುನಾಡು ಮೂಲತಃ ದ್ರಾವಿಡರ ನೆಲೆವೀಡು ಎಂದೇ ಖ್ಯಾತಿಗೊಳಗಾದದ್ದು. ಇವರು ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ, ಉತ್ತರ ಭಾರತದವರ (ಉತ್ತರಭಾರತದವರು ಎಂದರೆ ಆರ್ಯರು ಎಂದೇ ಅರ್ಥ. ಆರ್ಯ-ದ್ರಾವಿಡರ ನಡುವಿನ ಜಗಳ ಇಂದಿನದ್ದಲ್ಲ.) ಅಬ್ಬರ ಸಹಿಸಿಕೊಂಡವರಲ್ಲ. ಆದರೆ ಬಿಜೆಪಿ, ಉತ್ತರ ಭಾರತದವರ, ಮೇಲ್ವರ್ಗದವರ, ನಗರವಾಸಿಗಳ ಪಕ್ಷ ಎಂದೇ ಪ್ರಖ್ಯಾತಿ ಪಡೆದಿರುವಂಥದ್ದು. ಜತೆಗೆ ಉತ್ತರ ಭಾರತದಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಮಾತನಾಡುವ ಹಿಂದಿಯನ್ನು ದೇಶಾದ್ಯಂತ ಪ್ರಚುರಪಡಿಸಬೇಕು ಎಂಬ ಧ್ಯೇಯವೂ ಬಿಜೆಪಿಯಲ್ಲಿದೆ. 

ಹೀಗಾಗಿ ರಜನಿ ಬಿಜೆಪಿ ಸೇರಿದರೆ, ಜನ ತಿರಸ್ಕರಿಸುವ ಅಪಾಯವೂ ಇದೆ ಎಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲಿ ರಜನಿ ಬಿಜೆಪಿ ಜತೆಗೆ ಹೋಗುವುದಕ್ಕಿಂತ, ಸ್ವತಂತ್ರವಾಗಿ ಪಕ್ಷ ಕಟ್ಟುವುದೇ ಲೇಸು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗಾಗಲೇ ರಾಜಕೀಯ ಭ್ರಷ್ಟಾಚಾರದಿಂದಾಗಿ ಹದಗೆಟ್ಟು ಹೋಗಿದೆ. ಪ್ರಜಾಪ್ರಭುತ್ವ ವಿನಾಶದ ಹಾದಿಯಲ್ಲಿ ನಡೆದಿದೆ. ವ್ಯವಸ್ಥೆ ಬದಲಾಗಬೇಕು. ಇದಕ್ಕೆ ಡಿಎಂಕೆಯ ಸ್ಟಾಲಿನ್‌ ಮತ್ತು ಪಿಎಂಕೆಯ ಅಂಬುಮಣಿ ರಾಮ್‌ದಾಸ್‌ರಂಥ ನಾಯಕರು ಬೇಕು ಎಂದು ರಜನಿ ಇತ್ತೀಚೆಗಷ್ಟೇ ಹೇಳಿದ್ದರು. ಹಾಗಾದರೆ, ರಜನಿಕಾಂತ್‌ ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರಾ? ಒಂದು ವೇಳೆ ರಜನಿ ಗೆದ್ದು ಸಿಎಂ ಆಗಿಯೇ ಬಿಟ್ಟರು ಎಂದುಕೊಳ್ಳೋಣ. ರಾಜಕಾರಣದೊಳಗೆ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ಇದನ್ನು ಒಮ್ಮೆಲೆ ಓಡಿಸುವುದು ಕಷ್ಟದ ವಿಷಯವೇ. ಹಾಗಾದರೆ ರಜನಿ ಏನು ಮಾಡುತ್ತಾರೆ? ಸಿನಿಮಾಕ್ಕೂ, ನಿಜ ಜೀವನಕ್ಕೂ ತುಂಬಾನೇ ವ್ಯತ್ಯಾಸವಿದೆ. ಸಿನಿಮಾದಲ್ಲಿ ಮತ್ತು ವೈಯಕ್ತಿಕವಾಗಿಯೂ ತುಂಬಾ ಒಳ್ಳೆಯವರಾಗಿ ಇರಬಹುದು. ಆದರೆ ರಾಜಕಾರಣದಲ್ಲಿ ಒಳ್ಳೆಯವರಾಗಿ ಇರುವುದು ತುಂಬಾನೆ ಕಷ್ಟ ಎಂದು ರಾಜಕೀಯ ವಿಶ್ಲೇಷಕರೇ ರಜನಿ ಕುರಿತಂತೆ ಹೇಳುತ್ತಾರೆ. ಜತೆಗೆ, ಇದಕ್ಕಿಂತ ಪ್ರಮುಖವಾಗಿ ಕರ್ನಾಟಕವನ್ನು ವಿರೋಧಿಸಿದರೆ ಮಾತ್ರ ತಮಿಳುನಾಡಲ್ಲಿ ಜಯ ಎಂಬುದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಆದರೆ ಮೂಲತಃ ಕರ್ನಾಟಕದವರೇ ಆದ ರಜನಿ ಕರ್ನಾಟಕವನ್ನು ಎದುರುಹಾಕಿಕೊಳ್ಳುತ್ತಾರಾ?
  
ರಜನಿ ರಾಜಕೀಯದ ವಿಚಾರ, ತಮಿಳುನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆಗೂ ಕಾರಣವಾಗಿದೆ. ದೂರದಿಂದಲೇ ನಿಂತು ನೋಡುತ್ತಿರುವ ಕಾಂಗ್ರೆಸ್‌, ರಜನಿ ಬಿಜೆಪಿ ಜತೆ ಹೋಗಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿಕೊಂಡಿದೆ. ಡಿಎಂಕೆಯ ಸ್ಟಾಲಿನ್‌ ಅಂತೂ ರಜನಿ ರಾಜಕೀಯಕ್ಕೆ ಬರುವುದಾದರೆ ಸ್ವಾಗತ. ಇದಕ್ಕಿಂತ  ಖುಷಿ ಉಂಟೇ ಎಂದು ಹೇಳಿದ್ದಾರೆ. ಪಿಎಂಕೆಯ ರಾಮದಾಸ್‌, ನಮಗೆ ಸಿನಿಮಾದವರು ರಾಜಕಾರಣಕ್ಕೆ ಬರುವುದು ಬೇಡ. ಹೆಚ್ಚು ಓದಿದವರು ಬರಬೇಕು ಎಂದಿದ್ದಾರೆ. ಎಐಎಡಿಎಂಕೆಯಂತೂ, ರಜನಿ ರಾಜಕೀಯ ಮಾತನ್ನು ಕಟುವಾಗಿಯೇ ಟೀಕಿಸಿದೆ. ಈ ಎಲ್ಲವುಗಳ ನಡುವೆ ರಜನಿ ಅವರ ಇತ್ತೀಚಿನ ನಡೆ ಇನ್ನೂ ಕುತೂಹಲಕಾರಿಯಾದದ್ದು. ಜಯಲಲಿತಾ ನಿಧನರಾದಾಗ, 1996ರಲ್ಲಿ ಜಯಾಗೆ ಮತ ಹಾಕಿದರೆ ನಿಮ್ಮನ್ನು ದೇವರೂ ಕಾಪಾಡಲಾರ ಎಂದಿದ್ದ ಮಾತಿನ ಬಗ್ಗೆ ರಜನೀಕಾಂತ್‌ ಪ್ರಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ, ಆಗ ಅವರ ಈ ಮಾತು, ಜಯ ಪಕ್ಷ ನೆಲಕಚ್ಚುವಂತೆ ಮಾಡಿದ್ದಲ್ಲದೇ, ರಾಜಕೀಯ ಪ್ರವೇಶಕ್ಕೂ ವೇದಿಕೆ ಸೃಷ್ಟಿಸಿತ್ತು. 

ಇನ್ನು ಸದ್ಯ ತಮಿಳುನಾಡಿನ ರಾಜಕೀಯ ನಾಯಕರಿಲ್ಲದ ಅನಾಥ ಪ್ರಜ್ಞೆಯಿಂದ ಕಾಡುತ್ತಿದೆ ಎಂಬ ಮಾತುಗಳಿವೆ. ಕರುಣಾನಿಧಿ ವಯೋಸಹಜ ಕಾಯಿಲೆಗಳಿಂದಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಜಯಾ ನಿಧನಾನಂತರ ಎಐಎಡಿಎಂಕೆ ನಾವಿಕನಿಲ್ಲದ ದೋಣಿಯಂತಾಗಿದೆ. ಈ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ರಜನಿ ಬರಬಹುದು, ಯಶಸ್ವಿಯೂ ಆಗಬಹುದು ಎಂಬುದು ಬಹಳಷ್ಟು ಜನರ ಅಭಿಪ್ರಾಯ.

- ಸೋಮಶೇಖರ ಸಿ.ಜೆ.

Trending videos

Back to Top