CONNECT WITH US  

ಶೋಷಿತರ ಪ್ರಗತಿಗೆ ಶ್ರಮಿಸಿದ ಸಂತೆ

ರಾಯಚೂರು: ತಳ ಸಮುದಾಯಗಳು ಮುಂದೆ ಬರಬೇಕಾದರೆ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು, ಸಂಘಟನೆಯಿಂದ ಬಲವಂತರಾಗಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಕರೆ ನೀಡಿದ್ದರು ಎಂದು ಸಿಂಧನೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಶಿವರಾಜ ಹೇಳಿದರು.

ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ
ನೀಡಿದರು.

1854ರಲ್ಲಿ ಕೇರಳದಲ್ಲಿ ಜನಿಸಿದ ಅವರು, ಅಂದು ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ಧತಿ ವಿರುದ್ಧ ಹೋರಾಡಿದ್ದರು. ತಳ ಸಮುದಾಯಗಳ ಜಾಗೃತಿಗಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಸಮಾಜದಲ್ಲಿ ಜಾತಿ ಪದ್ಧತಿ
ನಿರ್ಮೂಲನೆಗಾಗಿ ಪಣ ತೊಟ್ಟಿದ್ದರು. ಕೇರಳದಲ್ಲಿ ಅಂದಿನ ಅರಸರು ತಳ ಸಮುದಾಯಗಳ ಮೇಲೆ 300 ರೀತಿಯ ತೆರಿಗೆ ವಿಧಿಸಿದ್ದನ್ನು ತೀವ್ರವಾಗಿ ಖಂಡಿಸಿದ್ದರು ಎಂದರು. 

ಸಮಾಜದಲ್ಲಿ ಮೇಲು-ಕೀಳೆಂಬ ಭಾವನೆ ಸರಿಯಲ್ಲ. ಎಲ್ಲರೂ ಒಂದೇ ಜಾತಿ, ಮತ ಪಂಥದವರೆಂಬ ಭಾವನೆಯಿಂದ ಬಾಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದರು. ತಂದೆಯವರಿಂದ ಸಂಸ್ಕೃತ ವೇದಾಧ್ಯಯನ ನಡೆಸಿದ್ದ ಅವರು
ಶಿಕ್ಷಣದ ಮಹತ್ವವನ್ನು ಸಾರಿದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಭಾ
ಗೋನಾಳ, ದಂಡಪ್ಪ ಬಿರಾದಾರ, ಸಮಾಜದ ಮುಖಂಡರಾದ ರಾಘವೇಂದ್ರಗೌಡ, ಭೀಮಣ್ಣಗೌಡ ಸೇರಿ ಅನೇಕರು ಉಪಸ್ಥಿತರಿದ್ದರು. ಅದಕ್ಕೂ ಮುಂಚೆ ನಗರದ ಕರ್ನಾಟಕ ಸಂಘದಲ್ಲಿ ಬ್ರಹ್ಮಶ್ರೀ ಗುರುಗಳ ಭಾವಚಿತ್ರ ಮೆರವಣಿಗೆಗೆ ತಹಶೀಲ್ದಾರ್‌ ಶಿವಾನಂದ ಸಾಗರ ಚಾಲನೆ ನೀಡಿದರು.

ಅಲ್ಲಿಂದ ಶೆಟ್ಟಿಬಾವಿ ವೃತ್ತ, ತೀನ್‌ ಕಂದಿಲ್‌, ಮಹಿಳಾ ಸಮಾಜ, ನಗರಸಭೆ, ಅಂಬೇಡ್ಕರ್‌ ವೃತ್ತ ಮಾರ್ಗವಾಗಿ
ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಯಂತಿಯನ್ನು
ಸರಳವಾಗಿ ಆಚರಿಸಲಾಯಿತು.


Trending videos

Back to Top