ನಾನು ಕೊಹ್ಲಿಗೆ ಸರಿಸಮವಾಗಬಲ್ಲೆ: ಶಬ್ಬೀರ್ ಟ್ವೀಟ್ಗೆ ವ್ಯಾಪಕ ಟೀಕೆ
Team Udayavani, Sep 6, 2017, 9:59 AM IST
ಢಾಕಾ: ಭಾರತ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಗೆ ಸರಿಸಮನಾಗಬಲ್ಲೆ ಎಂದು ಬಾಂಗ್ಲಾ ಬ್ಯಾಟ್ಸ್ಮನ್ ಶಬ್ಬೀರ್ ರೆಹಮಾನ್ ನೀಡಿದ ಹೇಳಿಕೆಗೆ ಟ್ವೀಟರ್ನಲ್ಲಿ ಟೀಕೆಗಳ ಸುರಿಮಳೆಯೆ ಹರಿದಿದೆ. ಇತ್ತೀಚೆಗೆ ಶಬ್ಬೀರ್ ಕೆಲ ಪಂದ್ಯ ಗಳಲ್ಲಿ ಮಿಂಚಿದ್ದಾರೆ. ಬಾಂಗ್ಲಾ ಪರ ಗೆಲುವಿನ ಹೋರಾಟ
ನಡೆಸಿದ್ದಾರೆ. ಅಲ್ಲದೆ ಆಸೀಸ್ ವಿರುದ್ಧ ತನ್ನ ನೆಲದಲ್ಲಿ ಗೆದ್ದ ವಿಶ್ವಾಸ ಕೂಡ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ಖುಷಿಯನ್ನು ಇಮ್ಮಡಿಗೊಳಿಸಿದೆ. ಇದೇ ಖುಷಿಯಲ್ಲಿ ಮಾತನಾಡಿದ ಶಬ್ಬೀರ್, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿರುವ ಖುಷಿ ಇದೆ. ಹೆಚ್ಚು ಅನುಭವ ಇಲ್ಲದಿದ್ದರೂ ಕಠಿಣ ತಯಾರಿ
ನಡೆಸಿದ್ದೇನೆ. ವಿರಾಟ್ ಕೊಹ್ಲಿಗೆ ಸರಿಸಮಾನವಾಗಿ ಬ್ಯಾಟಿಂಗ್ ಮಾಡುವೆ. ಮನಸಿದ್ದರೆ ಎಲ್ಲವೂ ಸಾಧ್ಯ ಎಂದಿದ್ದಾರೆ.
ಇದಕ್ಕೆ ಟ್ವೀಟರ್ನಲ್ಲಿ ಅಭಿಮಾನಿಯೊಬ್ಬರು ‘ನೀನು ಹೀಗೆ ಮಾತನಾಡುವುದನ್ನು ನೋಡುತ್ತಿದ್ದರೆ ಜಗತ್ತಿನ ಅಂತ್ಯ ಸಮೀಪವಾಗುತ್ತಿದೆ ಎಂದು ಅನಿಸುತ್ತಿದೆ’ ಎಂದಿದ್ದಾರೆ. ಮತ್ತೂಬ್ಬ ಅಭಿಮಾನಿ “ಗುಡ್ ಜೋಕ್ ಶಬ್ಬೀರ್, ನಿನ್ನ ಬಗ್ಗೆ ನೀನೆ ಇಂತಹ ಪ್ರಕಟಣೆ ಹಾಕುವುದನ್ನು ಮುಂದುವರಿಸು’
ಎಂದಿದ್ದಾರೆ. ಅಷ್ಟೇ ಅಲ್ಲ ಕಣ್ಣು ಬಿಟ್ಟು ಕನಸು ಕಾಣುವುದನ್ನು ಮೊದಲು ನಿಲ್ಲಿಸು ಶಬ್ಬೀರ್ ಎಂದು ಮತ್ತೋರ್ವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.