ಪಾಕಿಸ್ಥಾನಕ್ಕೆ ಸುಲಭ ಗೆಲುವು
Team Udayavani, Sep 17, 2018, 11:29 AM IST
ದುಬಾೖ: ನಿರೀಕ್ಷೆಯಂತೆ ಹಾಂಕಾಂಗ್ ಮೇಲೆ ಸವಾರಿ ಮಾಡಿದ ಪಾಕಿಸ್ಥಾನ, ಏಶ್ಯ ಕಪ್ ಕ್ರಿಕೆಟ್ ಕೂಟದ ರವಿವಾರದ ಪಂದ್ಯದಲ್ಲಿ 8 ವಿಕೆಟ್ಗಳ ಸುಲಭ ಜಯ ಸಾಧಿಸಿದೆ.”ಎ’ ವಿಭಾಗದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹಾಂಕಾಂಗ್ 37.1 ಓವರ್ಗಳಲ್ಲಿ 116ಕ್ಕೆ ಆಲೌಟಾಯಿತು. ಪಾಕಿಸ್ಥಾನ 23.4 ಓವರ್ಗಳಲ್ಲಿ 2 ವಿಕೆಟಿಗೆ 120 ರನ್ ಬಾರಿಸಿತು.
ಕೂಟದ ಅತ್ಯಂತ ದುರ್ಬಲ ತಂಡವಾಗಿರುವ, ಇನ್ನೂ ಬಲಿಷ್ಠ ಅಂತಾರಾಷ್ಟ್ರೀಯ ತಂಡಗಳೆದುರು ಸೆಣಸುವಷ್ಟು ಸಾಮರ್ಥ್ಯ ಹೊಂದಿಲ್ಲದ ಹಾಂಕಾಂಗ್, ಆರಂಭದಿಂದಲೇ ಪಾಕ್ ಬೌಲಿಂಗ್ ದಾಳಿಗೆ ತತ್ತರಿಸಿ ದಿಕ್ಕಾಪಾಲಾಯಿತು. 17ನೇ ಓವರ್ ವೇಳೆ ಕೇವಲ 44 ರನ್ ಆಗುವಷ್ಟರಲ್ಲಿ ತಂಡದ ಅರ್ಧದಷ್ಟು ಆಟಗಾರರು ಪೆವಿಲಿಯನ್ ಸೇರಿಯಾಗಿತ್ತು. ಕಿಂಚಿತ್ ಷಾ (26) ಮತ್ತು ಅಲ್ಜಾಜ್ ಖಾನ್ (27) ಸಣ್ಣದೊಂದು ಹೋರಾಟ ನಡೆಸಿ 6ನೇ ವಿಕೆಟಿಗೆ 53 ರನ್ ಒಟ್ಟುಗೂಡಿಸಿದರು. ಇದರಿಂದ ತಂಡದ ಮೊತ್ತ ನೂರರ ಗಡಿ ದಾಟುವಂತಾಯಿತು. ಪಾಕ್ ಪರ ಎಡಗೈ ಮಧ್ಯಮ ವೇಗಿ ಉಸ್ಮಾನ್ ಖಾನ್ 19ಕ್ಕೆ 3 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು.