CONNECT WITH US  

ಸಿಎಂ ಅವಧಿಗೆ, ಕೈಕುದಿ

ಐದು ವರ್ಷ ಸಿಎಂ ಪಟ್ಟಕ್ಕೆ ಒಪ್ಪಿದ್ದಕ್ಕೆ ಕಾಂಗ್ರೆಸ್‌ನಲ್ಲಿ ಅಸಮಾಧಾನ; ಎರಡು ಬಾರಿ ಸಚಿವರಾದವರಿಗೆಮತ್ತೆ ಅಧಿಕಾರ ಬೇಡ 

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಐದು ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದು ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.  ಇಷ್ಟೊಂದು ದೊಡ್ಡ ತ್ಯಾಗ ಅಗತ್ಯವಿತ್ತಾ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಕಡಿಮೆ ಸ್ಥಾನ ಪಡೆದಿದ್ದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತು. ಜತೆಗೆ ಪ್ರಮುಖ ಖಾತೆಗಳನ್ನೂ ಕೊಟ್ಟಿತು. ಆದರೆ, ಐದು ವರ್ಷ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದು ಸರಿಯಲ್ಲ. ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿಯಾಗುವ ಹಾಗೂ ಆಕಾಂಕ್ಷೆ ಇಟ್ಟುಕೊಂಡಿರುವ ನಾಯಕರು ಇಲ್ಲವೇ? ಅವರಿಗೆ ಮತ್ತೆ ಯಾವಾಗ ಅವಕಾಶ ಸಿಗುವುದು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿಯವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಒಪ್ಪಂದ ಪತ್ರದಲ್ಲಿ ಮುದ್ರಿಸಿ ಈಗಲೇ ಘೋಷಣೆ ಮಾಡುವ ಅನಿವಾರ್ಯತೆ ಏನಿತ್ತು? ಇದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಯಾವ ರೀತಿಯ ಸಂದೇಶ ಹೋಗುತ್ತದೆ. ಸಮ್ಮಿಶ್ರ ಸರ್ಕಾರವಿದ್ದರೂ ಮುಂದೆ ಕಾಂಗ್ರೆಸ್‌ ಸಂಘಟನೆಯೂ ಆಗಬೇಕಲ್ಲವೇ? ಪಕ್ಷ 79 ಸ್ಥಾನ ಗೆದ್ದಿರುವಾಗ ಹೆಚ್ಚಿನ ಅಧಿಕಾರ ಸಿಗದಿದ್ದರೆ ಪಕ್ಷ ಬಲವರ್ಧನೆ ಹೇಗಾಗುತ್ತದೆ? ಎಂಬ ಅಭಿಪ್ರಾಯಗಳು ಶನಿವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತವಾದವು ಎಂದು ತಿಳಿದು ಬಂದಿದೆ.

ಆದರೆ, ಈ ಬಗ್ಗೆ ಇನ್ನೂ ಅಧಿಕೃತ ತೀರ್ಮಾನವಾಗಿಲ್ಲ. ಲೋಕಸಭೆ ಚುನಾವಣೆ ನಂತರ ಅಧಿಕೃತವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಸಭೆಯಲ್ಲಿದ್ದ ನಾಯಕರು ಸಮಜಾಯಿಷಿ ನೀಡಿದರು ಎನ್ನಲಾಗಿದೆ. ಮತ್ತೂಂದೆಡೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಅನೇಕ ಮುಖಂಡರು ರಾಜ್ಯ ನಾಯಕರ ಈ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿ ಜೆಡಿಎಸ್‌ಗಿಂತಲೂ ಹೆಚ್ಚಿನ ಸ್ಥಾನ ಪಡೆದಿದ್ದರೂ, ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಲಾಗಿದೆ. ಅಲ್ಲದೇ ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ಜೆಡಿಎಸ್‌ಗೆ ನೀಡಲಾಗಿದ್ದರೂ, ಸಮ್ಮಿಶ್ರ ಸರ್ಕಾರದ ಸಂಪೂರ್ಣ ಐದು ವರ್ಷ ಅವರೇ ಮುಖ್ಯಮಂತ್ರಿಯಾದರೆ ಕಾಂಗ್ರೆಸ್‌ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂವತ್ತು-ಮೂವತ್ತು ತಿಂಗಳು ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಳ್ಳಬಹುದಿತ್ತು. ಆದರೆ, ಜೆಡಿಎಸ್‌ ಹೇಳಿದಂತೆ ಒಪ್ಪಿಕೊಂಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಕಿರಿಯರಿಂದ ನಾಯಕರ ಮೇಲೆ ಒತ್ತಡ
ಮತ್ತೂಂದೆಡೆ, ಈಗಾಗಲೇ ಎರಡು ಬಾರಿ ಸಚಿವರಾಗಿರುವ ಹಿರಿಯರನ್ನು ಸಂಪುಟದಿಂದ ಹೊರಗಿಟ್ಟು, ಪಕ್ಷ ಸಂಘಟನೆಗೆ ಬಳಸಿಕೊಳ್ಳುವಂತೆ ಕಿರಿಯ ಶಾಸಕರು ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಹಿರಿಯ ನಾಯಕರಾದ ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ್‌, ರಾಮಲಿಂಗಾ ರೆಡ್ಡಿ, ರೋಷನ್‌ಬೇಗ್‌, ಕೆ.ಜೆ. ಜಾರ್ಜ್‌ ಅವರನ್ನು ಸಂಪುಟದಿಂದ ಹೊರಗಿಟ್ಟು, ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಬಳಸಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮ್ಮ ಕ್ಷೇತ್ರದ ವ್ಯಾಪ್ತಿಗೆ ಸೀಮಿತವಾಗಿ ಬೇರೆ ಶಾಸಕರನ್ನು ಗೆಲ್ಲಿಸಿಕೊಂಡು ಬರಲಾಗದ ಹಿರಿಯ ನಾಯಕರು ಸಚಿವರಾದ ಮೇಲೆ ಪಕ್ಷದ ಕಾರ್ಯಕರ್ತರಿಗೆ ಬೆಲೆ ಕೊಡುವುದಿಲ್ಲ. ಪಕ್ಷದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದಿಲ್ಲ. ಹೀಗಾಗಿ, ಅವರಿಂದ ಯಾವುದೇ ಅನುಕೂಲ ಆಗುವುದಿಲ್ಲ. ಹೊಸ ಮುಖಗಳಿಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ಡಿ.ಕೆ.ಶಿವಕುಮಾರ್‌, ಎಂ. ಕೃಷ್ಣಪ್ಪ, ಶಿವಶಂಕರ ರೆಡ್ಡಿ, ಒಕ್ಕಲಿಗರ ಕೋಟಾದಲ್ಲಿ ಪೈಪೋಟಿ ನಡೆಸಿದ್ದಾರೆ. ಅವರೆಲ್ಲರಿಗೂ ಸಚಿವ ಸ್ಥಾನ ದೊರೆತರೆ ಕಿರಿಯರಾದ ಕೃಷ್ಣ ಬೈರೇಗೌಡ, ಡಾ. ಸುಧಾಕರ್‌ ಅವರಿಗೆ ಸಂಪುಟದಲ್ಲಿ ಅವಕಾಶ ಕೈ ತಪ್ಪಲಿದೆ.

ಅದೇ ರೀತಿ ಲಿಂಗಾಯತ ಸಮುದಾಯದಲ್ಲಿ ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಶಾಮನೂರು ಶಿವಶಂಕರಪ್ಪ, ಎಸ್‌.ಆರ್‌. ಪಾಟೀಲ್‌ ಅವರಿಗೆ ಸಚಿವ ಸ್ಥಾನ ದೊರೆತರೆ, ಯುವ ಶಾಸಕರಾದ ಬಿ.ಸಿ. ಪಾಟೀಲ್‌, ಬಸವರಾಜ್‌ ಪಾಟೀಲ್‌ ಹುಮ್ನಾಬಾದ್‌, ಶಿವಾನಂದ ಪಾಟೀಲ್‌ ಅವರಿಗೆ ಅವಕಾಶ ಸಿಗುವುದು ಕಷ್ಟ. ಬ್ರಾಹ್ಮಣರ ಕೋಟಾದಲ್ಲಿ ಆರ್‌.ವಿ. ದೇಶಪಾಂಡೆಗೆ ಅವಕಾಶ ದೊರೆತರೆ, ದಿನೇಶ್‌ ಗುಂಡೂರಾವ್‌ಗೆ ಅವಕಾಶ ತಪ್ಪಲಿದೆ. ಅಲ್ಪ ಸಂಖ್ಯಾತರ ಕೋಟಾದಡಿ ರೋಷನ್‌ಬೇಗ್‌ ಸಚಿವರಾದರೆ, ಜಮೀರ್‌ ಅಹಮದ್‌, ರಹೀಂ ಖಾನ್‌ ಅಥವಾ ಯು.ಟಿ. ಖಾದರ್‌ ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಬಾರಿ ಮಂತ್ರಿಯಾದವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳುವಂತೆ ಬೇಡಿಕೆ ಬಂದಿದೆ. ಈ  ಬಗ್ಗೆ ಹೈ ಕಮಾಂಡ್‌ ಗಮನಕ್ಕೆ ತರಲಾಗುವುದು. ಅವರ ಸೂಚನೆ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
- ಡಾ. ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ


Trending videos

Back to Top