CONNECT WITH US  

ಭೂ ಗೇಣಿದಾರರಿಗೂ "ಬೆಳೆ ವಿಮೆ ಫ‌ಸಲು'

ಆಂಧ್ರ ಮಾದರಿಯಲ್ಲಿ ಕಾನೂನು ರೂಪಿಸಲು ಶಿಫಾರಸು, ಗೇಣಿ ಅವಧಿ 3ರಿಂದ 5 ವರ್ಷದವರೆಗೆ ನಿಗದಿಗೆ ಸಲಹೆ

ಸಾಂದರ್ಭಿಕ ಚಿತ್ರ..

ಹಾವೇರಿ: ಆಂಧ್ರಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ಭೂ ಲಾವಣಿದಾರರಿಗೆ, ಗೇಣಿದಾರರು ಹಾಗೂ ಶೇರುದಾರರನ್ನೂ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಬೇಕೆಂದು ರಾಜ್ಯ ಕೃಷಿ ಬೆಲೆ ಆಯೋಗ ನಡೆಸಿದ ಸಂಶೋಧನಾ
ಅಧ್ಯಯನ ವರದಿಯಲ್ಲಿ ಸಲಹೆ ನೀಡಿದೆ.

ಬೆಳೆ ವಿಮೆ ಕುರಿತು ರಾಜ್ಯ ಕೃಷಿ ಬೆಲೆ ಆಯೋಗವು ಧಾರವಾಡದ ಸೆಂಟರ್‌ ಫಾರ್ ಮಲ್ಟಿ ಡಿಸಿಪ್ಲಿನರಿ ಡೆವಲಪ್‌ಮೆಂಟ್‌ ರಿಸರ್ಚ್‌ (ಸಿಎಂಡಿಆರ್‌) ಮೂಲಕ ನಡೆಸಿದ ಸಂಶೋಧನಾ ಅಧ್ಯಯನ ವರದಿಯಲ್ಲಿ ಶಿಫಾರಸುಗಳನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಆಂಧ್ರದಲ್ಲಿ ಭೂ ಲಾವಣಿ, ಗುತ್ತಿಗೆ ಕಾಯ್ದೆ -2011ರ ಪ್ರಕಾರ ಗೇಣಿದಾರರು, ಲಾವಣಿದಾರರು ಹಾಗೂ ಶೇರುದಾರರು ಬೆಳೆ ವಿಮೆವ್ಯಾಪ್ತಿಗೆ ಬರುತ್ತಾರೆ. ಅದರಂತೆ ಕರ್ನಾಟಕದಲ್ಲಿಯೂ ಸಹ ಕೆಲವು ಮಾರ್ಪಾಡುಗಳೊಂದಿಗೆ ಈ ಕಾನೂನು ಮಾಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕಾನೂನು ಮಾರ್ಪಾಡು ಮಾಡುವಲ್ಲಿ ಗೇಣಿದಾರರಿಗೆ ಗೇಣಿಯ ಅವಧಿ ಮೂರರಿಂದ ಐದು ವರ್ಷದವರೆಗೆ ನಿಗದಿ ಮಾಡಬೇಕು. ಇದರಿಂದ ಹೂಡಿಕೆ ಮಾಡಲು ಅನುಕೂಲವಾಗುತ್ತದೆ, ಜತೆಗೆ ಬೆಳೆ ಸಾಲ ಪಡೆಯಲು ಸಹಕಾರಿಯಾಗುತ್ತದೆ. ಪ್ರಾಣಿಯಿಂದಾದ ನಷ್ಟವೂ ಸೇರಿಸಿ: ಕಾಡು ಪ್ರಾಣಿಗಳಿಂದಾಗುವ ಬೆಳೆ ಹಾನಿ, ನಷ್ಟವನ್ನು ಸಹ
ವಿಮಾ ಯೋಜನೆಯಡಿ ತರಬೇಕು. ಇಲ್ಲಿ ಅರಣ್ಯ ಇಲಾಖೆಯಿಂದ ಕಾಡು ಪ್ರಾಣಿಗಳಿಂದಾದ ಬೆಳೆ ಹಾನಿಯನ್ನು ಪರಿಗಣಿಸಿ ಬೆಳೆ ನಷ್ಟ ಪರಿಹಾರ ನೀಡಬೇಕು ಅಥವಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿಯಲ್ಲಿಯೇ ಗ್ರಾಪಂ ಹಾಗೂ ಬೆಳೆ ವಿಮಾ ಕಂಪನಿಗಳು ಜಂಟಿಯಾಗಿ ವೈಯಕ್ತಿಕ ಬೆಳೆ ಹಾನಿ ಮೌಲ್ಯಮಾಪನ ಮಾಡಿ ಬೆಳೆ ನಷ್ಟ ಪರಿಹಾರ ನೀಡುವಂತಾಗಬೇಕೆಂದು ಸಲಹೆ ನೀಡಲಾಗಿದೆ.

ಸಾಲದಿಂದ ಪ್ರತ್ಯೇಕಿಸಿ: ಬೆಳೆ ವಿಮೆಯನ್ನು ಬೆಳೆ ಸಾಲದಿಂದ ಪ್ರತ್ಯೇಕಿಸಬೇಕು. ಇದನ್ನು ಬೆಳೆ ಸಾಲ  ದೊಂದಿಗೆ ಜೋಡಿಸುವುದರಿಂದ ಬೆಳೆ ಬದಲಾವಣೆ ಮಾಡಿದಲ್ಲಿ ರೈತರಿಗೆ ತೊಂದರೆಯಾಗುತ್ತದೆ. ಬೆಳೆಯ 
ನಿರ್ಬಂಧವಿಲ್ಲದ್ದರಿಂದ ಹೆಚ್ಚು ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲು ಸಹಕಾರಿಯಾಗುತ್ತದೆ ಎಂಬ ಸಲಹೆ ನೀಡಲಾಗಿದೆ.

ಬ್ಯಾಂಕ್‌ಗಳು ರೈತರು ವಿಮಾ ಕಂತು ಕಟ್ಟಿದ ತಕ್ಷಣ ಸ್ವೀಕೃತಿ ರಸೀದಿ ನೀಡುವುದು ಕಡ್ಡಾಯವಾಗಬೇಕು.
ಇದರಿಂದ ವಿಮಾ ಕಂತಿನ ವಿವರ, ಬೆಳೆ ವಿಮಾ ವ್ಯಾಪ್ತಿ, ವಿಮಾ ಕಂಪನಿಯ ಹೆಸರು, ಸಂಪರ್ಕಿಸಬೇಕಾದ
ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿ ರೈತರಿಗೆ ಲಭ್ಯವಾಗುತ್ತದೆ. ನಷ್ಟಕ್ಕೊಳಗಾದ ರೈತರಿಗೆ
ಪರಿಹಾರ ಪಡೆಯಲು ಇದು ಸಹಕಾರಿಯಾಗುತ್ತದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರ ಕಂಡುಕೊಳ್ಳಲು ಕೃಷಿ
ಬೆಲೆ ಆಯೋಗದಿಂದ ಸಂಶೋಧನಾ ಅಧ್ಯಯನ ವರದಿ ತಯಾರಿಸಲಾಗಿದೆ.ವರದಿಯಲ್ಲಿನ ಕೆಲವು ಅಂಶಗಳನ್ನು
ಹಿಂದಿನ ಸರ್ಕಾರಕ್ಕೆ ತಿಳಿಸಲಾಗಿತ್ತು. ಜುಲೈನಲ್ಲಿ ಅ ಧಿಕೃತವಾಗಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ವರದಿ ಸಲ್ಲಿಸಲಾಗುವುದು.

-  ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ

ಸರ್ಕಾರ ಬೆಳೆ ವಿಮೆ ಕಂತು ತುಂಬಲು ಕೊನೆಯ ದಿನಾಂಕ ನಿಗದಿಪಡಿಸಿದಂತೆ ಬೆಳೆ ನಷ್ಟವಾದ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಕೊಡುವ ಕೊನೆಯ ದಿನಾಂಕವನ್ನೂ ನಿಗದಿಪಡಿಸಬೇಕು. ಬೆಳೆ ವಿಮೆ ದರ ನಿಗದಿಪಡಿಸುವಲ್ಲಿ ವಿಪರೀತ ವ್ಯತ್ಯಾಸವಿದ್ದು ಅದನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿಸಬೇಕು.
- ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ

- ಎಚ್‌.ಕೆ ನಟರಾಜ


Trending videos

Back to Top