CONNECT WITH US  

3 ತಿಂಗಳಲ್ಲಿ ಬಿಎಸ್‌ವೈ ಸಿಎಂ: ಯತ್ನಾಳ ಭವಿಷ್ಯ

ವಿಜಯಪುರ: "ಬರುವ ಮೂರು ತಿಂಗಳಲ್ಲಿ ಕುಮಾರಸ್ವಾಮಿ ಸರ್ಕಾರ ಪತನವಾಗಲಿದೆ. ಇದಕ್ಕೆ ಸಿದ್ದರಾಮಯ್ಯ ಅವರೇ ಕಾರಣವಾಗಲಿದ್ದಾರೆ. ಬಳಿಕ ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೆ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರಿಂದಲೇ ಒಂದಿಲ್ಲೊಂದು ರೀತಿಯ ಅವಮಾನ ಆಗುತ್ತಿದೆ. ಇದರಿಂದ ಸಿದ್ದರಾಮಯ್ಯ ಬಂಡೆದ್ದು ಈ ಸರ್ಕಾರವನ್ನು ಪತನ ಮಾಡಲಿದ್ದಾರೆ ಎಂದರು.

ಉತ್ತರ ಕರ್ನಾಟಕದ ಜನರು ತಮಗೆ ಮತ ಹಾಕಿಲ್ಲ ಎಂದು ಸಾರ್ವಜನಿಕವಾಗಿ ಹೇಳುವ ಮೂಲಕ ಸಿಎಂ ಕುಮಾರಸ್ವಾಮಿ ಅವರು ಈ ಭಾಗದ ಜನರಿಗೆ ಅವಮಾನ ಮಾಡಿದ್ದಾರೆ. ಈ ಭಾಗದ ಜನರು ಮತ ಹಾಕದಿದ್ದರೆ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಜೆಡಿಎಸ್‌ ಶಾಸಕರು ಆಯ್ಕೆಯಾಗಲು ಸಾಧ್ಯವಿತ್ತೇ? ಕೂಡಲೇ ಈ ಇಬ್ಬರು ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಅವರ ಬಾಯಿ ಮುಚ್ಚಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಮುಸ್ಲಿಮರ ಓಲೈಕೆ ಬಿಡಲಿ: ಶಾಸಕ ಎಂ.ಬಿ. ಪಾಟೀಲರು ಮುಸ್ಲಿಮರ ಓಲೈಕೆ ಬಿಡಬೇಕು. ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದ್ದು ಸಾಕು, ಇನ್ನಾದರೂ ಹಿಂದೂಗಳಿಗೆ ಆಗಿರುವ ಶೋಷಣೆ ಬಗ್ಗೆ ಅವರು ಮಾತನಾಡಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಎಂ.ಬಿ. ಪಾಟೀಲರ ಹಿಂದೆ ಅಲ್ಪಸಂಖ್ಯಾತರು ಇದ್ದರೆ, ನನ್ನ ಹಿಂದೆ ಶೋಷಿತ ಹಿಂದೂಗಳ ದೊಡ್ಡ ಪಡೆಯೇ ಇದೆ ಎಂಬುದನ್ನು ಅರಿಯಬೇಕು ಎಂದು ತೀಕ್ಷ್ಣ ಪ್ರತಿಕ್ರಿಯಿಸಿದರು. ಧರ್ಮ ಒಡೆದವರಿಗೆ ಈಗಾಗಲೇ ರಾಜ್ಯದ ಜನ ತಕ್ಕ ಶಾಸ್ತಿ ಮಾಡಿದ್ದು, ಭವಿಷ್ಯದಲ್ಲಿ ವೀರಶೈವ-ಲಿಂಗಾಯತ ಪ್ರತ್ಯೇಕ ಕೂಗು ಹಾಕದೇ ಒಗ್ಗೂಡಿ ಸಾಗಲಿದ್ದೇವೆ. ಪ್ರತ್ಯೇಕ ಧರ್ಮದ ಕೂಗು ದೇಶದ ಭವಿಷ್ಯಕ್ಕೂ ಅಪಾಯ. ಪ್ರಸಕ್ತ ಸಂದರ್ಭದಲ್ಲಿ ಭಾರತಕ್ಕೆ ಹಿಂದುತ್ವ ಹಾಗೂ ದೇಶಭಕ್ತಿ ಆದ್ಯತೆ ವಿಷಯ ಆಗಬೇಕಿದೆ ಎಂದರು.

Trending videos

Back to Top