CONNECT WITH US  

ಭಾರತೀಯನೆಂಬ ಹೊಣೆ ಎಲ್ಲರಲ್ಲೂ ಇರಲಿ

ದಿ.ನ.ಕೃಷ್ಣಪ್ಪ ಜೀವನ ಆಧರಿತ ಪುಸ್ತಕ ಲೋಕಾರ್ಪಣೆಯಲ್ಲಿ ಮೋಹನ್‌ ಭಾಗವತ್‌ ಅಭಿಮತ

ಬೆಂಗಳೂರು: ನಾವು ಭಾರತೀಯ ಕುಲದವರು ಎಂಬ ಬಾಧ್ಯತೆ ನಮ್ಮಲ್ಲಿದ್ದರೆ ಸನಾತನ ಧರ್ಮದ ಭಾರತವನ್ನು ವಿಶ್ವಕ್ಕೇ ಪ್ರತಿಷ್ಠಿತ ದೇಶವಾಗಿ ಕಟ್ಟಬಹುದು ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಒಂದು ದೇಶ ಸುಖ, ಸಮೃದ್ಧಿ ಮತ್ತು ಪ್ರತಿಷ್ಠೆಯಿಂದ ಇರಬೇಕಾದರೆ ಆ ದೇಶದ ಜನ ಮೊದಲು ಸುಖ, ಸಮೃದ್ಧಿ, ಪ್ರತಿಷ್ಠೆಯಿಂದ ಬದುಕಬೇಕು. ಆತ ದೇಶದಲ್ಲೇ ಇರಲಿ, ವಿಶ್ವದ ಬೇರೆ ಯಾವುದೇ ಭಾಗದಲ್ಲಿರುವ ಭಾರತೀಯನಾಗಿರಲಿ. ಸುಖ ಮತ್ತು ಸಮೃದ್ಧಿಯಿಂದ ಬದುಕಿದ್ದರೆ ದೇಶವೂ ಸುಖ, ಸಮೃದ್ಧಿಯಿಂದ ಇರುತ್ತದೆ ಎಂದರು.

ಸಾಹಿತ್ಯ ಸಂಗಮ ವತಿಯಿಂದ ಭಾನುವಾರ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದ ದಿವಂಗತ ನ.ಕೃಷ್ಣಪ್ಪ ಅವರ ಜೀವನ ಆಧಾರಿತ ಪುಸ್ತಕ "ನಿರ್ಮಾಲ್ಯ'ವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜೀವನದಲ್ಲಿ ಅನುಭವಕ್ಕೆ ಬಂದಿದ್ದನ್ನು ವಿಚಾರವಾಗಿ ಮತ್ತು ಅದನ್ನು ಶಬ್ಧಕ್ಕೆ ಪರಿವರ್ತಿಸದಿದ್ದರೆ ಉಪಯೋಗಕ್ಕೆ ಬರುವುದಿಲ್ಲ. ಆದರೆ, ಆರ್‌ಎಸ್‌ಎಸ್‌ನಲ್ಲಿ ಅನುಭವಕ್ಕೆ ಬಂದಿದ್ದನ್ನು ವಿಚಾರಕ್ಕೆ, ವಿಚಾರವನ್ನು ಶಬ್ಧಕ್ಕೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಈ ಪರಂಪರೆ ಮುಂದುವರಿಯಬೇಕು ಮತ್ತು ಬೆಳೆಯಬೇಕು. ಸಂಘದಲ್ಲಿ ಅಲ್ಲದಿದ್ದರೂ ಸಮಾಜದಲ್ಲಾದರೂ ಉಪಯೋಗಕ್ಕೆ ಬರಬೇಕು ಎಂದರು.

ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ನಿಸ್ವಾರ್ಥದಿಂದ ತನು, ಮನ, ಧನವನ್ನು ಧಾರೆ ಎರೆದು ಕೆಲಸ ಮಾಡಿದರೆ ದೇಶದ ಗೌರವ ಅಧಿಕವಾಗುತ್ತದೆ. ಅಂತಹ ದೇಶ ಗುಣಸಂಪನ್ನವಾಗಿ ಇಡೀ ವಿಶ್ವಕ್ಕೆ ಅಮೃತ ನೀಡುವ ದೇಶವಾಗುತ್ತದೆ. ಅಲ್ಲದೆ, ರಾಷ್ಟ್ರವೂ ವೈಭವ ಮತ್ತು ಸಾಮರ್ಥ್ಯ ಹೊಂದಿದ ದೇಶವಾಗುತ್ತದೆ. ಆ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದ್ದು, ಇದರಲ್ಲಿ ನ.ಕೃಷ್ಣಪ್ಪ ಅಂಥವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಸಾಕಷ್ಟು ಮಹಾಪುರುಷರಿದ್ದಾರೆ. ಅವರು ಆದರ್ಶ ವ್ಯಕ್ತಿಯೂ ಆಗಿರುತ್ತಾರೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಶಿವಾಜಿಯಂಥವರು ಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಆತ ನಮ್ಮ ಮನೆಯಲ್ಲಿ ಆಗುವುದು ಬೇಡ ಎನ್ನುತ್ತಾರೆ. ಅದೇ ರೀತಿ ಮಹಾಪುರುಷರು ಬೇಕು, ಅವರ ಆದರ್ಶ ಬೇಕು ಎನ್ನುವವರಿದ್ದಾರೆಯೇ ಹೊರತು ನಾವು ಮಹಾಪುರುಷರಾಗಬೇಕು ಎಂದು ಯಾರೂ ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ನಲ್ಲಿ ಪ್ರಚಾರಕರಾಗಿ ಕೆಲಸ ಮಾಡುವವರು ಆದರ್ಶ ಪುರುಷರಂತೆ ಕೆಲಸ ಮಾಡಿದ್ದಾರೆ. ಸಂಘದ ಜತೆಗೆ ಸಮಾಜಕ್ಕೂ ತಮ್ಮ ಸೇವೆ ಮೀಸಲಿಟ್ಟಿದ್ದಾರೆ. ಪ್ರಾಮಾಣಿಕತೆ ಮತ್ತು ನಿಸ್ವಾರ್ಥದಿಂದ ದೇಶ ಮತ್ತು ಸಮಾಜಕ್ಕೆ ಗುಣಸಂಪನ್ನ ಕೊಡುಗೆಗಳನ್ನು ನೀಡಿದ್ದಾರೆ. ಇದರಿಂದಾಗಿ ದೇಶ ಮತ್ತು ಸಮಾಜ ಮುಂದುವರಿದಿದೆ ಎಂದು ಸಂಘದ ಸೇವೆಯನ್ನು ಸ್ಮರಿಸಿದರು.

ನ.ಕೃಷ್ಣಪ್ಪ ಕುರಿತು ಮಾತನಾಡಿದ ಅವರು, ಪೂರ್ಣ ಸಮರ್ಪಣಾ ಭಾವದೊಂದಿಗೆ ಅವರು ತಮ್ಮ ಜೀವನವನ್ನು ಸಂಘ ಮತ್ತು ಸಮಾಜಕ್ಕೆ ಮೀಸಲಾಗಿಟ್ಟರು. ಸಂಘದ ಪ್ರಚಾರಕರಾಗಿ ಯಾರನ್ನೂ ವಿರೋಧಿಸದೆ, ಯಾರಿಂದಲೂ ವಿರೋಧಕ್ಕೆ ಒಳಗಾಗದೆ, ಎಲ್ಲಿಯೂ ಟೀಕೆಗೆ ಆಸ್ಪದವಾಗದೆ ಶಾಂತ ಮತ್ತು ಸೌಮ್ಯ ವ್ಯಕ್ತಿತ್ವ ಹೊಂದಿದ್ದರು. ಇಂತಹ ಪ್ರಚಾರಕರು ಸಾಕಷ್ಟು ಮಂದಿ ಇದ್ದು, ತಮ್ಮ ಜೀವನವನ್ನು ಸಮಾಜಕ್ಕಾಗಿಯೇ ಸಮರ್ಪಣೆ ಮಾಡಿದ್ದಾರೆ. ಇದರಿಂದ ಭಾರತ ಇಂದಿಗೂ ತನ್ನ ಸನಾತನ ಧರ್ಮವನ್ನು ಉಳಿಸಿಕೊಂಡಿದೆ ಎಂದರು.

ಪುಸ್ತಕದ ಕುರಿತು ಮಾತನಾಡಿದ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಒಬ್ಬ ಸಾಧಕ ಬೇಗೆ ಬದುಕಬಲ್ಲ ಎಂಬುದನ್ನು ಕೃಷ್ಣಪ್ಪ ಅವರು ಸಂಘದ ಕಾರ್ಯಕರ್ತರು ಮತ್ತು ಜನರಿಗೆ ಹೇಳಿದ್ದಾರೆ. ಅವರು ಹೇಗೆ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಂಡು ರಚನಾತ್ಮಕ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂಬುದನ್ನು ಪುಸ್ತಕದಲ್ಲಿ ಲೇಖಕ ಚಂದ್ರಶೇಖರ ಭಂಡಾರಿ ವಿವರಿಸಿದ್ದಾರೆ ಎಂದರು.

ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಡಾ.ಎಸ್‌.ಎಲ್‌.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ದಕ್ಷಿಣ ಮಧ್ಯ ಸಂಘ ಚಾಲಕ ವೆಂಕಟ್ರಾಂ, ನಿರ್ಮಾಲ್ಯ ಪುಸ್ತಕದ ಲೇಖಕ ಚಂದ್ರಶೇಖರ ಭಂಡಾರಿ ಹಾಜರಿದ್ದರು.

Trending videos

Back to Top