CONNECT WITH US  

ಅತೃಪ್ತ ಶಾಸಕರ ಅನರ್ಹಗೊಳಿಸಲು ಸ್ಪೀಕರ್‌ಗೆ ದೂರು

ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿ ನೋಟಿಸ್‌ಗೆ ಸ್ಪಂದಿಸದ ಕಾಂಗ್ರೆಸ್‌ನ ನಾಲ್ವರು ಶಾಸಕರ ಸದಸ್ಯತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಮನವಿ ಮಾಡಿದೆ.

ಸೋಮವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸಭಾಧ್ಯಕ್ಷ ರಮೇಶ್‌ ಕುಮಾರ್‌ರನ್ನು ಭೇಟಿ ಮಾಡಿ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಹಾಗೂ ಚಿಂಚೊಳ್ಳಿ ಶಾಸಕ ಡಾ ಉಮೇಶ ಜಾಧವ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಪಕ್ಷದ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸಂವಿಧಾನದ ಪರಿಚ್ಛೇದ 10ರ ಪ್ರಕಾರ ಎರಡು ಬಾರಿ ನೋಟಿಸ್‌ ನೀಡಲಾಗಿದೆ. ಸರ್ಕಾರದ ಮುಖ್ಯ ಸಚೇತಕ ನೀಡಿರುವ ವಿಪ್‌ಗೆ ಉತ್ತರ ನೀಡಿ ಜಾರಿಕೊಳ್ಳುವುದನ್ನು ತಪ್ಪಿಸಲು ಖುದ್ದು ಹಾಜರಾಗುವಂತೆ ಶಾಸಕಾಂಗ ಪಕ್ಷದ ನಾಯಕರು ಪತ್ರ ಬರೆದಿದ್ದರು. ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷರು ಮನವಿ ಮಾಡಿಕೊಂಡಿದ್ದರೂ ಯಾವುದಕ್ಕೂ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ನಾಲ್ವರು ಶಾಸಕರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪರಿಗಣಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂವಿಧಾನದ 10ನೇ ಪರಿಚ್ಛೇದದ ಪ್ರಕಾರ ಶಾಸಕ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸೂಕ್ತ ಮಾಹಿತಿಯೊಂದಿಗೆ ದೂರು ನೀಡಿ: ಸೋಮವಾರ ಬೆಳಿಗ್ಗೆಯೇ ಕಾಂಗ್ರೆಸ್‌ ನಾಯಕರು ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ದೂರು ಸಲ್ಲಿಸಲು ತೆರಳಿದ್ದರು. ಆದರೆ, ನಿಯಮಗಳ ಪ್ರಕಾರ ದೂರು ನೀಡಲು ಸೂಕ್ತ ದಾಖಲೆ ಸಲ್ಲಿಸಲು ಸ್ಪೀಕರ್‌ ರಮೇಶ್‌ ಕುಮಾರ್‌ ಸಮಯ ನೀಡಿದರು. ಅದರಂತೆ ಮಧ್ಯಾಹ್ನ ಮತ್ತೆ ಕಾಂಗ್ರೆಸ್‌ ನಾಯಕರು ದಾಖಲೆಗಳೊಂದಿಗೆ ದೂರು ನೀಡಿದರು.

ಸ್ಪೀಕರ್‌ ಮುಂದಿನ ಆಯ್ಕೆ?
- ಅತೃಪ್ತ ಶಾಸಕರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌
- ಅತೃಪ್ತ ಶಾಸಕರಿಂದ ಅಭಿಪ್ರಾಯ ಪಡೆಯಬಹುದು
- ವಿವರಣೆಗೆ ಸಮಯ ಕೊಟ್ಟು ಹಾಜರಾಗದಿದ್ದರೆ ಉಚ್ಚಾಟನೆ


Trending videos

Back to Top