CONNECT WITH US  

ಬೆಂಕಿ ಆಕಸ್ಮಿಕ : ಪ್ರಾಥಮಿಕ ಚಿಕಿತ್ಸೆಗೆ ಒಂದಿಷ್ಟು ಸಲಹೆ

ಬೆಂಕಿ ಆಕಸ್ಮಿಕ ಸಂಭವಿಸಿದಾಗ ಅನಗತ್ಯ ಒತ್ತಡಕ್ಕೆ ಒಳಗಾಗದೇ ಇದ್ದರೆ ಅರ್ಧ ಸನಿವೇಶವನ್ನು ಗೆದ್ದಂತೆ. ಇಲ್ಲದಿದ್ದರೆ ಸಮಸ್ಯೆಯ ತೀವ್ರತೆ ಹೆಚ್ಚಾಗುವುದರಲ್ಲಿ ಯಾವ ಸಂಶಯವಿಲ್ಲ.

ಮನೆ, ಹೊಟೇಲ್‌ ಮುಂತಾದೆಡೆ ಅಡುಗೆ ಮಾಡುವಾಗ ಅಚಾತುರ್ಯದಿಂದ ಒಮ್ಮೊಮ್ಮೆ ಕೈ ಕಾಲಿಗೆ ಬೆಂಕಿ ತಾಕುವುದು ಸಾಮಾನ್ಯ. ಕಬ್ಬಿಣ ವಸ್ತುಗಳನ್ನು ಹದ ಮಾಡುವಾಗಲೂ ಸಣ್ಣಪುಟ್ಟ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಒಂದೆರಡು ದಿನಗಳಲ್ಲಿ ಗುಣವಾಗುತ್ತದೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಒಂದಷ್ಟು ಪ್ರಾಥಮಿಕ ಚಿಕಿತ್ಸೆಗಳೂ ಅವಶ್ಯ
ಏನು ಮಾಡಬಹುದು?

ತಣ್ಣೀರಿನಲ್ಲಿ ತಂಪು ಮಾಡಿ
ಬೆಂಕಿ ತಾಗಿದ ಭಾಗವನ್ನು ನಿಮಿಷಗಳ ಕಾಲ ತಣ್ಣೀರಿನಲ್ಲಿ ಇಟ್ಟು ತಂಪು ಮಾಡಬೇಕು. ಇದರಿಂದ ಗಾಯದಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡಬಹುದು. ಇಲ್ಲವೇ ಶುಚಿಯಾದ ಬಟ್ಟೆಯನ್ನು ಗಾಯಗೊಂಡ ಭಾಗಕ್ಕೆ ಕಟ್ಟಿ ನಳ್ಳಿ ನೀರಿಗೆ ಒಡ್ಡುವುದರಿಂದಲೂ ಉರಿ ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. 

ಬೆಂಕಿ ತಾಗಿದ ಭಾಗಕ್ಕೆ ಐಸ್‌ ಗಟ್ಟಿ ಇಟ್ಟರೆ ಉರಿ ಕಡಿಮೆಯಾಗುತ್ತದೆ ಎಂಬುದಾಗಿ ಹಲವು ಮಂದಿಯಲ್ಲಿ ತಪ್ಪು ಕಲ್ಪನೆಯಿದೆ. ಆದರೆ ಅತಿಯಾದ ಉಷ್ಣತೆಯು ಚರ್ಮಕ್ಕೆ ಹಾನಿಯುಂಟು ಮಾಡುವುದರಿಂದ ಯಾವುದೇ ಕಾರಣಕ್ಕೂ ಐಸ್‌ ಗಟ್ಟಿಗಳನ್ನು ಇಡಬಾರದು. ಬದಲಾಗಿ ತಣ್ಣೀರನ್ನೇ ಹಾಯಿಸಬೇಕು. 

ಬೆಂಕಿ ತಗುಲಿದ ತುಸು ಸಮಯದ ಬಳಿಕ ಆ ಭಾಗದಲ್ಲಿ ಸ್ವೆಲ್ಲಿಂಗ್‌ ಉಂಟಾಗುವುದರಿಂದ ಬಳೆ, ಉಂಗುರಾದಿಗಳಿದ್ದಲ್ಲಿ ತೆಗೆಯಲು ಸಾಧ್ಯವಾಗದು. ಆ ಭಾಗದಲ್ಲಿ ಚರ್ಮ ಊದಿಕೊಳ್ಳುವುದರಿಂದಲೂ ಆಭರಣಗಳನ್ನು ತೆಗೆದರೆ ಸಿಪ್ಪೆ ಹೋಗುತ್ತದೆ. ಅಲ್ಲದೇ ಆಭರಣವು ಬೆಂಕಿ ತಗುಲಿದ ಜಾಗಕ್ಕೆ ತಾಗಿದರೆ ಅಲರ್ಜಿಯಾಗುವ ಸಂಭವವೂ ಇದೆ. ಆದ್ದರಿಂದ ಯಾವುದೇ ರೀತಿಯ ಆಭರಣಗಳಿದ್ದರೂ ಅದನ್ನು ತತ್‌ಕ್ಷಣ ಮೆಲ್ಲಗೆ ತೆಗೆದಿಡಬೇಕು.

ಗಾಯದ ಭಾಗಕ್ಕೆ ಮಾಯಿಶ್ಚರೈಸರ್‌ ಅಥವಾ ಅಲೋವೆರಾ ಜೆಲ್‌ ಹಚ್ಚಬೇಕು. ಉಳಿದಂತೆ ಯಾವುದೇ ಮುಲಾಮುಗಳನ್ನು ಹಚ್ಚಬಾರದು. ನೋವು ಹೆಚ್ಚಿದ್ದರೆ ಮತ್ತು ತಡೆಯಲಾಗದಿದ್ದಂತಹ ಸಂದರ್ಭಗಳಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಹುದು. ಆದರೆ ನಿರಂತರ ನೋವು ನಿವಾರಕ ಮಾತ್ರೆಗಳನ್ನು ನುಂಗುತ್ತಲೇ ಇರಬಾರದು. ಅಗತ್ಯ ಬಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಟೆಟಾನಸ್‌ ಚುಚ್ಚುಮದ್ದು ತೆಗೆದುಕೊಳ್ಳಬಹುದು. ಅಲ್ಲದೇ ಪ್ರಾಥಮಿಕ ಚಿಕಿತ್ಸೆಗಳಿಗೆ ಸಂಬಂಧಿಸಿ ವೈದ್ಯರಿಗೆ ಕರೆ ಮಾಡಿ ಸಲಹೆ ಪಡೆಯಬೇಕು.

ಈ ಸಲಹೆಗಳು ಮತ್ತು ತುರ್ತು ಚಿಕಿತ್ಸೆಗಳನ್ನು ಸಣ್ಣ ಪುಟ್ಟ  ಗಾಯಗಳಾಗಿದ್ದಲ್ಲಿ ಮಾತ್ರ ಮಾಡಬೇಕು. ಗಾಯದ ಪ್ರಮಾಣವು ದೊಡ್ಡದಾಗಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅಲ್ಲದೇ ಗಾಯ ಮಾಸಲು ವೈದ್ಯರು ತಿಳಿಸಿದ ಕ್ರಮಗಳ ಪ್ರಕಾರವೇ ಚಿಕಿತ್ಸೆ ಪಡೆಯಬೇಕು.

ಬಿಸಿನೀರು, ಬಿಸಿ ಎಣ್ಣೆ ಅಥವಾ ಬೆಂಕಿ ದೇಹಕ್ಕೆ ತಗುಲಿದರೆ ಆ ಭಾಗದಲ್ಲಿ ಗುಳ್ಳೆಗಳುಂಟಾಗುತ್ತವೆ. ಈ ಗುಳ್ಳೆಗಳು ಅಸಹ್ಯವಾಗಿ ಕಾಣುತ್ತವೆ ಎಂಬ ಕಾರಣಕ್ಕಾಗಿ ಹಲವರು ಗುಳ್ಳೆ ಒಡೆಯುತ್ತಾರೆ. ಆದರೆ ಹಾಗೆ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅವಷ್ಟಕ್ಕೇ ಒಡೆದು ಹೋಗುವ ತನಕ ಸುಮ್ಮನಿರಬೇಕು.

ಅಚಾತುರ್ಯ ಬೇಡ
ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಒಲೆಯಲ್ಲಿರುವ ಕೆಂಡ ತಾಗಿಯೋ, ಗ್ಯಾಸ್‌ ಮೇಲಿಟ್ಟ ಬಾಣಲೆ ತಾಗಿಯೋ ಆಕಸ್ಮಿಕವಾಗಿ ಕೈ ಕಾಲಿಗೆ ಗಾಯವಾಗುತ್ತದೆ. ಕೇವಲ ಕೈ ಕಾಲಿಗಲ್ಲ; ಒಮ್ಮೊಮ್ಮೆ ನಮ್ಮ ಅಚಾತುರ್ಯ, ಗಡಿಬಿಡಿಯಿಂದಾಗಿ ದೇಹದ ಇತರ ಭಾಗಗಳಿಗೂ ಬೆಂಕಿ ತಾಗಿಸಿಕೊಳ್ಳುವುದುಂಟು. ಬೆಂಕಿಯಿಂದುಂಟಾಗುವ ಸಣ್ಣ ಗಾಯವೂ ನಿರ್ಲಕ್ಷಿಸುವಂತಹ ವಿಷಯವಲ್ಲ. ಸಣ್ಣ ಗಾಯವೇ ಆದರೂ ಪರಿಣಾಮ ದೊಡ್ಡದಿರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕಾದುದೂ ಅಷ್ಟೇ ಅಗತ್ಯ. ಕೆಲವೊಂದು ಪ್ರಾಥಮಿಕ ಚಿಕಿತ್ಸೆಗಳನ್ನು ಜಾಗ್ರತೆಯಿಂದ ಮಾಡಿದರೆ ಗಾಯವೂ ಬಹುಬೇಗ ಮರೆಯಾಗುತ್ತದೆ.
- ಡಾ| ಮುರಳಿ ಮೋಹನ ಚೂಂತಾರು

ಇಂದು ಹೆಚ್ಚು ಓದಿದ್ದು

Trending videos

Back to Top