CONNECT WITH US  

ಕಾಂಗ್ರೆಸ್‌ ವಿರುದ್ಧ ಮುಖಂಡರ ವಾಗ್ಧಾಳಿ

ಉಡುಪಿ: ರಾಜ್ಯದಲ್ಲಿರುವುದು ಹಿಂದೂ ವಿರೋಧಿ, ರೈತ ವಿರೋಧಿ ಮತ್ತು ಮಹಿಳಾ ವಿರೋಧಿ ಸರಕಾರ. ಹಿಂದೂ ಯುವಕರ ಹತ್ಯೆಯಾದರೂ ಸರಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳುವುದಕ್ಕೆ ಮುನ್ನ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರ ಹಣ ಬಲದಿಂದಾಗಿ ಉಳಿದಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ರಚನೆಯಾಗಬೇಕು. ಪ್ರತೀ ಬೂತ್‌ನಲ್ಲಿಯೂ ಶೇ. 80 ಮತಗಳು ಬಿಜೆಪಿಗೆ ದೊರೆಯುವಂತೆ ಮಾಡಬೇಕು ಎಂದರು.

ಜಯಪ್ರಕಾಶ್‌ ಹೆಗ್ಡೆ ಅವರು ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆ ಬಂದರು, ಸಬ್ಸಿಡಿ ರಹಿತ ಸಾಲ, ಸಮುದ್ರದ ನೀರನ್ನು ಶುದ್ಧೀಕರಿಸಿ ಒದಗಿಸುವ ಯೋಜನೆ ಮೊದಲಾದವನ್ನು ಜಾರಿಗೆ ತರುವುದು ಬಿಜೆಪಿಯ ಯೋಜನೆಗಳಾಗಿವೆ. ಇದನ್ನು ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಶ್ಮೀರದಿಂದ ತ್ರಿಪುರಾದ ವರೆಗೆ ವಂದೇ ಮಾತರಂ ಮೊಳಗಬೇಕಾದರೆ ನರೇಂದ್ರ ಮೋದಿ ಪ್ರಧಾನಿಯಾಗಬೇಕಾಯಿತು ಎಂದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಉಸ್ತುವಾರಿ ವಹಿಸಿದ್ದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್‌ ಮಾಥೂರ್‌, ಉತ್ತರ ಪ್ರದೇಶದ ಸಚಿವ ಡಾ| ಮಹೇಂದ್ರ ಸಿಂಗ್‌ ಸ್ಥಳೀಯರಿಗೆ ನಿರ್ದೇಶನ ನೀಡುತ್ತಿದ್ದರು. 

ಸಂಸದ ನಳಿನ್‌, ವಿಧಾನಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್‌, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ವಿಶ್ವೇಶ್ವರ ಭಟ್‌ ಬಂಗಾರಡ್ಕ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಪಕ್ಷದ ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ ಶೆಟ್ಟಿ ಉಪಸ್ಥಿತ ರಿದ್ದರು. ಕುತ್ಯಾರು ನವೀನ್‌ ಶೆಟ್ಟಿ, ಸುರೇಶ್‌ ನಾಯಕ್‌ ಕುಯಿಲಾಡಿ, ಯಶ್‌ಪಾಲ್‌ ಸುವರ್ಣ, ಸಂಧ್ಯಾ ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮಲಾ ಕುಂದರ್‌ ವಂದೇ ಮಾತರಂ ಹಾಡಿದರು.

Trending videos

Back to Top