CONNECT WITH US  

ಉಡುಪಿ: ಲಾಠಿಚಾರ್ಜ್‌, ನಿಷೇಧಾಜ್ಞೆ 

ಎಸ್‌ಪಿ ಲಾಠಿ ಎತ್ತಿಕೊಳ್ಳುವಂತೆ ಮಾಡಿದ ಘರ್ಷಣೆ

ಉಡುಪಿ: ಬಂದ್‌ ವೇಳೆ ಉಡುಪಿಯಲ್ಲಿ ಕಾಂಗ್ರೆಸ್‌ - ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಲಾಠಿಚಾರ್ಜ್‌ ನಡೆಸಿ  ನಿಯಂತ್ರಿಸಿದರು. ನಗರದಲ್ಲಿ ಸೆ. 11ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಳಗ್ಗೆ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ ಬಂದ್‌ ಮಾಡಲು ಹೇಳುತ್ತಿದ್ದ ಕಾಂಗ್ರೆಸ್‌ ಗುಂಪಿನ ವಿರುದ್ಧ ಬಿಜೆಪಿ ಕಾರ್ಯಕರ್ತರ ಗುಂಪು ಘೋಷಣೆ ಕೂಗಿ ಪ್ರತಿರೋಧ ಒಡ್ಡುತ್ತಿತ್ತು. ನಗರದ ಹಲವೆಡೆ ಮಾತಿನ ಚಕಮಕಿ ನಡೆದು ಅನಂತರ ನಗರದ ಬನ್ನಂಜೆಯಲ್ಲಿ ಘರ್ಷಣೆ ಮರುಕಳಿಸಿತು. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸತೊಡಗಿದರು. ಬಿಜೆಪಿ ನಗರಾಧ್ಯಕ್ಷ, ನಗರಸಭೆ ಸದಸ್ಯ ಪ್ರಭಾಕರ ಪೂಜಾರಿ ಕಲ್ಲೇಟಿನಿಂದ ಗಾಯಗೊಂಡರು. 

ಬನ್ನಂಜೆಯಲ್ಲಿರುವ ಎಸ್‌ಪಿ ಕಚೇರಿ ಬಳಿ ಗುಂಪು ಗಳು ಬಂದಾಗ ಎಸ್‌ಪಿ ಲಕ್ಷ್ಮಣ ನಿಂಬರಗಿ ಶಾಂತಿ ಕಾಪಾಡುವಂತೆ ಮಾಡಿದ ಮನವಿ ಪ್ರಯೋಜನಕ್ಕೆ ಬರಲಿಲ್ಲ. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಬಡಿದಾಟ ಆರಂಭವಾಯಿತು. ಈ ವೇಳೆ ಸ್ವಯಂ ಎಸ್‌ಪಿ ಸೇರಿದಂತೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಕಾಂಗ್ರೆಸ್‌ ನಗರಸಭಾ ಸದಸ್ಯ ರಮೇಶ್‌ ಕಾಂಚನ್‌ ಮತ್ತು ಬಿಜೆಪಿಯವರೂ ಸೇರಿದಂತೆ ಒಟ್ಟು 10 ಮಂದಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾದರು.

ಬಲವಂತದ ಬಂದ್‌: ಬಿಜೆಪಿ
ಉಡುಪಿಯಲ್ಲಿ ಬಲವಂತದ ಬಂದ್‌ ಯತ್ನ ನಡೆದಿದೆ. ಆದಾಗ್ಯೂ ಶೇ. 50ರಷ್ಟು ಅಂಗಡಿಗಳು ಬಂದ್‌ ಆಗಿವೆ. ಸರಕಾರವೇ ಬಂದ್‌ಗೆ ಕರೆಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ. ಪ್ರಭಾಕರ ಪೂಜಾರಿ ಮೇಲೆ ಕಾಂಗ್ರೆಸ್‌ನವರ ಹಲ್ಲೆ ಖಂಡನೀಯ. ಘಟನೆಗೆ ಕಾಂಗ್ರೆಸ್‌, ಪೊಲೀಸರೇ ಕಾರಣ' ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದ್ದಾರೆ.

ಬಂದ್‌ ವಿಫ‌ಲಕ್ಕೆ ಬಿಜೆಪಿ ಯತ್ನ: ಕಾಂಗ್ರೆಸ್‌
ಉಡುಪಿ ಜಿಲ್ಲೆಯಲ್ಲಿ ಬಂದ್‌ ವಿಫ‌ಲಗೊಳಿಸಲು ಬಿಜೆಪಿ ಪ್ರಯತ್ನಿಸಿದೆ. ಆದರೂ ಬಂದ್‌ ಯಶಸ್ವಿಯಾಗಿದೆ. ಬಸ್‌ ಮಾಲಕರು, ಟ್ಯಾಕ್ಸಿ, ಕ್ಯಾಬ್‌ ಮಾಲಕರು, ಜೆಡಿಎಸ್‌, ಕಾರ್ಮಿಕರ ಸಂಘ, ಮೀನುಗಾರರ ಕಾಂಗ್ರೆಸ್‌, ಆಟೋ ರಿಕ್ಷಾ ಚಾಲಕ, ಮಾಲಕರು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು, ಶಾಲಾಡಳಿತ ಮಂಡಳಿಯವರು ಸಹಕಾರ ನೀಡಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡನೀಯ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜನಾರ್ದನ ತೋನ್ಸೆ ಅವರು ಹೇಳಿದ್ದಾರೆ. "ಪೊಲೀಸರು ಬಿಜೆಪಿಯವರನ್ನು ತಡೆಯಬೇಕಿತ್ತು. ಎಸ್‌ಪಿ ಕಾಂಗ್ರೆಸ್‌ನ ನಗರಸಭಾ ಸದಸ್ಯರಿಗೆ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ. ಪೊಲೀಸ್‌ ದೌರ್ಜನ್ಯ ನಡೆದಿದೆ' ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.


10 ಮಂದಿ ವಿರುದ್ಧ  ಪ್ರಕರಣ

ಉಡುಪಿಯಲ್ಲಿ ಬಂದ್‌ ವೇಳೆ ನಡೆದ ಕಾಂಗ್ರೆಸ್‌-ಬಿಜೆಪಿ ನಡುವಿನ ಘರ್ಷಣೆಗೆ ಸಂಬಂಧಿಸಿ ಬಿಜೆಪಿಯ 6 ಹಾಗೂ ಕಾಂಗ್ರೆಸ್‌ನ 4 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖ ಲಿಸಿಕೊಂಡಿದ್ದಾರೆ. ಇವರ ವಿರುದ್ಧ ಅಕ್ರಮ ಕೂಟ ಮತ್ತು ದೊಂಬಿಗೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಪ್ರಭಾಕರ ಪೂಜಾರಿ ಮೇಲಿನ ಹಲ್ಲೆಯ ಬಗ್ಗೆಯೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನುಳಿ ದವರ ಕುರಿತು ಮಾಹಿತಿ ಸಂಗ್ರಹಿಸಿ ಅನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಪ್ರಕರಣ ದಾಖಲಿಸಿಕೊಳ್ಳಲಾಗಿರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಗಸ್ತು ಬಿಗಿ
ನಗರದಲ್ಲಿ ಸೋಮವಾರ ರಾತ್ರಿ ಪೊಲೀಸ್‌ ಗಸ್ತು ಬಿಗಿಗೊಳಿಸಲಾಗಿತ್ತು. ಎಎಸ್‌ಪಿ ಕುಮಾರ ಚಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ನಗರಾದ್ಯಂತ ಗಸ್ತು ನಡೆಸಿದ್ದಾರೆ.

ಕೆರಳಿದ ಎಸ್‌ಪಿಗೆ ಶಹಬ್ಟಾಸ್‌ಗಿರಿ!
ತನ್ನ ಮಾತಿಗೆ ಬೆಲೆ ಕೊಡದೆ ತನ್ನ ಕಚೇರಿ ಪಕ್ಕದಲ್ಲೇ ಘರ್ಷಣೆಗಿಳಿದ ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ವರ್ತನೆಯಿಂದ ಸಿಟ್ಟಿಗೆದ್ದ ಎಸ್‌ಪಿ ಸ್ವತಃ ಲಾಠಿ ಕೈಗೆತ್ತಿದರು. ಲಾಠಿ ಚಾರ್ಜ್‌ಗೆ  ಆದೇಶಿಸಿದರು. ಸಹ ಅಧಿಕಾರಿಗಳು, ಸಿಬಂದಿ ಎಸ್‌ಪಿ ಜತೆ ಕಾರ್ಯಾಚರಣೆಗಿಳಿದರು. ಕೆಲವು ಸ್ಥಳೀಯ ಜನಪ್ರತಿನಿಧಿಗಳು ಮೊದ ಮೊದಲು ಪೊಲೀಸ ರೆದುರು ಎದೆಯುಬ್ಬಿಸಿ ನಿಂತರು, ಪೆಟ್ಟು ಬಿದ್ದರೂ ಕದಲಿಲ್ಲ. ಆದರೆ ಲಾಠಿಯೇಟು ಜೋರಾ ದಾಗ ಕಾಲ್ಕಿತ್ತರು. ಹಲವು ಸಂದರ್ಭಗಳಲ್ಲಿ ಸೌಮ್ಯವಾಗಿದ್ದು ತಾಳ್ಮೆಯಿಂದ ವರ್ತಿಸಿದ್ದ ಎಸ್‌ಪಿ ನಡವಳಿಕೆ ಪಕ್ಷಗಳ ಕಾರ್ಯಕರ್ತರು, ಮುಖಂಡರು ಮಾತ್ರವಲ್ಲದೆ ಸಾರ್ವಜನಿಕರಿಗೂ ಅಚ್ಚರಿ ಮೂಡಿಸಿತು. ಎಸ್‌ಪಿಯವರ ಕ್ರಮ ಸರಿ ಎಂಬ ಶ್ಲಾಘನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ತರಕಾರಿ ರಸ್ತೆಗೆಸೆದರು
ತೆಂಕಪೇಟೆಯಲ್ಲಿ ತರಕಾರಿ ಅಂಗಡಿಗಳಿಗೆ ನುಗ್ಗಿದ ದುಷ್ಕರ್ಮಿಗಳು ತರಕಾರಿ ಬುಟ್ಟಿಗಳನ್ನು ರಸ್ತೆಗೆ ಎಸೆದಿದ್ದಾರೆ ಎಂದು ದೂರಲಾಗಿದೆ. ರಥಬೀದಿಯ ರಾಜೇಶ್ವರಿ ಫ್ಯಾನ್ಸಿಯಲ್ಲಿಯೂ ದಾಂಧಲೆ ನಡೆ ಸಿರುವ ಕಾರ್ಯಕರ್ತರು ಅಂಗಡಿಗೆ ಹಾನಿ ಮಾಡಿದ್ದಾರೆ. "ನನ್ನ ಚಿನ್ನದ ಸರವನ್ನು ಕೂಡ ಕಿತ್ತು ಹಾಕಿದ್ದಾರೆ' ಎಂದು ಅಂಗಡಿ ಮಾಲಕ ವಿಜಯಕಾಂತ್‌ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದವರು
ಲಾಠಿಚಾರ್ಜ್‌ನಿಂದ ಕಾಂಗ್ರೆಸ್‌ ನಗರಸಭಾ ಸದಸ್ಯರಾದ ರಮೇಶ್‌ ಕಾಂಚನ್‌, ವಿಜಯ ಪೂಜಾರಿ, ಮಾಜಿ ನಗರಸಭಾ ಸದಸ್ಯ ಆರ್‌.ಕೆ. ರಮೇಶ್‌, ವಿನೋದ್‌, ಗೋಪಾಲ್‌; ಬಿಜೆಪಿಯ ನಗರಸಭಾ ಸದಸ್ಯ ಗಿರೀಶ್‌ ಅಂಚನ್‌, ದಿನೇಶ್‌, ದಿನಕರ ಪೂಜಾರಿ, ಹರೀಶ್‌, ಅರುಣ್‌ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿ ತಾ.ಪಂ. ಸದಸ್ಯ ಶರತ್‌ ಬೈಲಕೆರೆಯವರೂ ಪೊಲೀಸ್‌ ಪೆಟ್ಟು ತಿಂದಿ ದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಿಂದ ಗಾಯಗೊಂಡ ಬಿಜೆಪಿ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿಯವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಕ್ಷಗಳ ನಾಯಕರು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

*  ಬಲವಂತದ ಬಂದ್‌ ಮಾಡಿಸುವಾಗ ತಡೆಯದ ಪೊಲೀಸರು 
* ಎರಡು ಗುಂಪುಗಳು ಸಂಘರ್ಷಿಸುವ ಮೊದಲೇ ಎಚ್ಚೆತ್ತುಕೊಳ್ಳದೆ ಎಡವಟ್ಟು
*  ಹಲವು ಅಂಗಡಿಗಳಿಂದ ಬಂದ್‌ಗೆ ಪ್ರತಿರೋಧ; ವಾಗ್ವಾದ 
* ಮಣಿಪಾಲದಲ್ಲಿ  ಬಂದ್‌ ಮಾಡಿಸಲು ಮುಂದಾದವರನ್ನು ರಿಕ್ಷಾ ಚಾಲಕರು, ನಾಗರಿಕರು ಹಿಮ್ಮೆಟ್ಟಿಸಿ "ಮೋದಿ ಮೋದಿ' ಎಂದು ಕೂಗಿದ ವೀಡಿಯೋ ವೈರಲ್‌.
*  ಲಾಠಿಚಾರ್ಜ್‌ ವೇಳೆ ಒಂದಿಬ್ಬರು ಪತ್ರಕರ್ತರು, ಸಮವಸ್ತ್ರದಲ್ಲಿರದ ಪೊಲೀಸರಿಗೂ ಪೆಟ್ಟು.
* ಕಾಂಗ್ರೆಸ್‌, ಬಿಜೆಪಿಯಿಂದ ಪೊಲೀಸರಿಗೆ ತೀವ್ರ ತರಾಟೆ


Trending videos

Back to Top