CONNECT WITH US  

ಕಲ್ಲಂಗಡಿಯ ಅಂಗಡಿ

ಬೆಳಿಗ್ಗೆ ಆರು ಗಂಟೆ. ಬೆಂಗಳೂರಿನ ರಸ್ತೆ ಮಲಗಿದ್ದವೋ, ಮೈಮುರಿದು ಆಕಳಿಸುತ್ತ ಆಗ ತಾನೇ ಕಣ್ಣು ಬಿಡುತ್ತಿದ್ದವೋ ನನಗಂತೂ ಗೊತ್ತಿಲ್ಲ. ಓಡುವ ಗಿಡಮರಗಳನ್ನು, ಬಾಗಿಲು ಮುಚ್ಚಿದ ಅಂಗಡಿಗಳನ್ನು, ಗುಂಪಲ್ಲಿ ಓಡಾಡುತ್ತಿದ್ದ ನಾಯಿಗಳನ್ನು ನೋಡು ನೋಡುತ್ತ ಕಣ್ಣಿಗೆ ಸಣ್ಣ ಜೊಂಪು ಹತ್ತಿತ್ತು. ಪಕ್ಕದಲ್ಲಿ ಕುಳಿತ ಪತಿ ಮಹಾಶಯ ಕಣ್ಣೆವೆ ಮುಚ್ಚದೆ ಕಾರನ್ನು ಓಡಿಸುತ್ತಿದ್ದರು, ಸುಯ್ಯನೆ ಸರಾಗವಾಗಿ ಓಡುತ್ತಿದ್ದ ಕಾರು ಜಟಕಾ ಬಂಡಿಯಂತೆ ಶಬ್ದ ಮಾಡಲು ಶುರುವಿಟ್ಟುಕೊಂಡಿದ್ದೇ ತಡ ಬೆಂಗಳೂರು ಬಂತೆಂದು ನನ್ನ ಜೊಂಪು ಹತ್ತಿದ ಕಣ್ಣುಗಳನ್ನು ಎಬ್ಬಿಸಿದೆ. ಮನೆಗೆ ಹೋಗುವಾಗ ಕಲ್ಲಂಗಡಿ ಹಣ್ಣನ್ನು ಕೊಳ್ಳಬೇಕೆಂದು ನಿನ್ನೆಯೇ ಲೆಕ್ಕ ಹಾಕಿಕೊಂಡಿದ್ದೆನಲ್ಲ..

ಡಿಸೆಂಬರ್‌ ಮುಗಿದು ಜನವರಿ ಪ್ರಾರಂಭವಲ್ಲವೇ, ರುಚಿ ರುಚಿ ಕಲ್ಲಂಗಡಿ ಹಣ್ಣಿನ ಸೀಸನ್‌ ಆಗತಾನೆ ಪ್ರಾರಂಭವಾಗುತ್ತಿತ್ತು. ಮಟಮಟ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಬೇಯುತ್ತಿರುವ ಕಲ್ಲಂಗಡಿ ಹಣ್ಣನ್ನು ಕೊಂಡರೆ ಬೆಂದಂತಾಗಿರುತ್ತದೆ. ಅದರ ಬದಲು ಹಿಂದಿನ ದಿನ ರಾತ್ರಿ ತಂಪಗೆ ಹೊದೆಸಿದ ಪ್ಲಾಸ್ಟಿಕ್ಕು ಶೀಟುಗಳ ಕೆಳಗೆ ಮೈ ಒಡ್ಡಿ ಮಲಗಿದ ಕಲ್ಲಂಗಡಿ ಹಣ್ಣನ್ನು ಕೊಂಡು ತಿಂದರೆ ಅದರ ಸವಿ ಅದ್ಭುತ. ಅಮೃತಹಸ್ತದಿಂದ ಉಜ್ಜಿಸಿಕೊಳ್ಳುತ್ತ ನನ್ನ ನಯನ ರಾಶಿಗಳು ಹಣ್ಣಿನ ಬೇಟೆಗೆ ಆಗಲೇ ಅಣಿಯಾಗಿಬಿಟ್ಟಿದ್ದವು. 

ಕೃಷ್ಣದೇವರಾಯನ ಕಾಲದಲ್ಲಿ ಚಿನ್ನವನ್ನು ರಸ್ತೆ ಬದಿಗೆ ರಾಶಿ ರಾಶಿ ಗುಡ್ಡೆ ಹಾಕಿ ಮಾರುತ್ತಿದ್ದ ಕತೆ ಬಂದಿದ್ದು ಆರನೆಯ ತರಗತಿಯ ಇತಿಹಾಸದ ಪುಸ್ತಕದಲ್ಲಾಯಿತು. ಈಗಿನ ಕಾಲದಲ್ಲಿ ಜನವರಿ ಮೆಲ್ಲಗೆ ಹೆಜ್ಜೆಯಿಡುತ್ತಿದ್ದಂತೆ ಕಲ್ಲಂಗಡಿ ಹಣ್ಣನ್ನು ರಸ್ತೆ ಬದಿಗೆ ಪರ್ವತದಂತೆ ಗುಡ್ಡೆ ಹಾಕಿ ಮಾರುತ್ತಿರುತ್ತಾರೆ. ಮುಂದೊಂದು ದಿನ ಈ ವೈಭವವೂ ಗತಕಾಲವನ್ನು ಸೇರಿ ಕೇಜಿಯ ಬದಲು ಗ್ರಾಮಿನ ಲೆಕ್ಕದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಕೊಳ್ಳಲು ಬ್ಯಾಂಕಿನಲ್ಲಿ ಸಾಲ ತೆಗೆಯುವ ಕಾಲ ಬಾರದಿರಲಿ ಎಂಬುದು ಆಶಯವಷ್ಟೇ!  

ಅಷ್ಟು ದೂರಾಲೋಚನೆಯನ್ನು ಆಚೆ ತಳ್ಳಿದ ನನಗೆ, ರಸ್ತೆ ಬದಿಯ ಕಲ್ಲಂಗಡಿ ಮುಗಿದು ತಳ್ಳುವ ಗಾಡಿಯಲ್ಲಿ ಮಾವು ನಗುವ ಮೊದಲೇ ಉದರ ಪೋಷಣೆಯಾಗಲೇಬೇಕಿತ್ತು. ಎಲ್ಲ ಕಾಲದಲ್ಲಿ ಸಿಗುವ ಅಚ್ಚ ಹಸಿರಿನ ಕಲ್ಲಂಗಡಿಗಿಂತ ಹಸಿರು-ಬಿಳಿ ಪಟ್ಟೆಯ, ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ಕಲ್ಲಂಗಡಿಯ ರುಚಿ ನನ್ನಂತೆ ನಾಲಿಗೆ ಹರಿತವಿರುವವರಿಗೆ ಮಾತ್ರ ಗೊತ್ತು. ಅಂತಹ ಹಣ್ಣನ್ನು ನೋಡಿ ಹೊಟ್ಟೆತುಂಬಿಸಿಕೊಳ್ಳಲು ನನಗಂತೂ ಬಾರದು. ಒಂದು ತಿಂಗಳಿಗೆ ನಮಗಾಗುವಷ್ಟು ಕಲ್ಲಂಗಡಿಯನ್ನು ಮನೆಯಲ್ಲಿ ಪೇರಿಸಿಟ್ಟುಕೊಂಡರೆ ಪ್ರತಿದಿನ ರಸ್ತೆಗಿಳಿದು ಚೌಕಾಸಿ ಮಾಡುತ್ತ ಕಂಠಶೋಷಣೆಗೈಯುವ ಆವಶ್ಯಕತೆಯಿಲ್ಲ ಎಂಬುದು ನನ್ನ ಊಹೆ. ಮೇಲಾಗಿ ಹುಟ್ಟಾ ಹೆಂಗಸಿಗೆ ಹೋಲ್‌ಸೇಲ್‌ ದರದಲ್ಲಿ ಹಣ್ಣನ್ನು ಕೊಂಡು ಐವತ್ತೋ ನೂರೋ ಕಡಿಮೆ ಕಾಸು ಖರ್ಚಾದರೂ ಆತ್ಮಕ್ಕೆ ಅಷ್ಟರಮಟ್ಟಿಗೆ ಶಾಂತಿ ಸಿಗುತ್ತದೆಯಲ್ಲವೇ! ನನ್ನ ತಾಟು ಮೋಟು ಗಣಿತಜ್ಞಾನವನ್ನು ಒರೆಗೆ ಹಚ್ಚುತ್ತ ಲೆಕ್ಕ ಹಾಕಿ ಬರೋಬ್ಬರಿ ಇಪ್ಪತ್ತಾದರೂ ಕಲ್ಲಂಗಡಿ ಹಣ್ಣುಗಳನ್ನು ಖರೀದಿಸುವ ಹುನ್ನಾರದಲ್ಲಿದೆ. ಇಂತಹ ಸಮಯದಲ್ಲಿಯೂ ಮನೆಯಲ್ಲಿರುವ ಸ್ಟೋರ್‌ ರೂಮ್‌ ಬಳಕೆಗೆ ಬಾರದಿದ್ದರೆ ಅದೇನು ಚೆಂದಕ್ಕೆ ಕಟ್ಟಿಸಿರುವುದೇ! ನನ್ನ ಗಣಿತ ಪ್ರತಿಭೆಗೆ ಅಪ್ರತಿಭರಾಗಿ ಸೋತ ಯಜಮಾನರು ಒಂದು ತಿಂಗಳು ಜರಗಲಿರುವ ಕಲ್ಲಂಗಡಿ ಗಾಣ ನೆನೆದು, ದೂಸರಾ ಮಾತಿಲ್ಲದೆ ಶರಣಾಗಿಬಿಟ್ಟಿದ್ದರಿಂದ ನನಗಿನ್ಯಾವ ದೊಡ್ಡ ಅಡ್ಡಿ-ಆತಂಕವೂ ಕಾಣಿಸಲಿಲ್ಲ.

ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಬಣ್ಣ, ರುಚಿ, ರೇಟು ಇವು ಮೂರರ ಬಗ್ಗೆ ಬಹಳ ಕಾಳಜಿವಹಿಸದಿದ್ದರೆ ಹೇಗೆ! ಆದ್ದರಿಂದ ಕಲ್ಲಂಗಡಿ ಗುಡ್ಡೆ ಕಂಡಲ್ಲೆಲ್ಲ ಗಾಡಿ ನಿಲ್ಲಿಸಿ ಹಣ್ಣನ್ನು ಕೊರೆಸಿದ್ದು, ರುಚಿ ನೋಡಿದ್ದು, ರೇಟು ಕೇಳಿದ್ದೇ ಕೇಳಿದ್ದು. ಅಂದಿನ ನಮ್ಮ ಬೆಳಗ್ಗಿನ ತಿಂಡಿ ಹೆಚ್ಚು ಕಮ್ಮಿ ಕಲ್ಲಂಗಡಿಯ ಸ್ಯಾಂಪಲ್‌ ಪೀಸ್‌ ತಿಂದೇ ಮುಗಿದುಹೋಯ್ತು.

ಅಂತೂ ಕೊನೆಯಲ್ಲಿ ಒಂದು ಮಹಾತ್ಮನ ಕಳೆಯಿರುವ ಮಹಾಪುರುಷನೊಬ್ಬ ಮಿಕ್ಕವರೆಲ್ಲರಿಗಿಂತ ಕಡಿಮೆ ಹಣಕ್ಕೆ ಹಣ್ಣನ್ನು ತೂಗಿ ಕೊಡಲು ಸಿದ್ಧನಾದ. ಅವನ ಹಣ್ಣಿನಿಂದ ನನ್ನ ಕಲ್ಲಂಗಡಿ ತಿನ್ನುವ ಚಟ ತೀರಿ, ಆತ್ಮ ತೃಪ್ತಿಯಾದರೆ ಆ ಮಹಾಪುರುಷನ ಹೆಸರನ್ನು ಯಾವುದೋ ಕಾಲದಲ್ಲಿ ಹುಟ್ಟುವ ನನ್ನ ಮೊಮ್ಮಕ್ಕಳಿಗೆ ಇಡಲೂ ನಾನು ಸಿದ್ಧಳಾಗಿಬಿಟ್ಟಿದ್ದೆ. 

""ಹಣ್ಣು ಅಲಿಲ್ಲಾ ಇದು, ಸಕ್ರೀ ತುಂಡು'' ಎಂದು ಒಂದು ಹಣ್ಣನ್ನು ಸಣ್ಣಕ್ಕೆ ಕೊರೆದು ತಿನ್ನಲು ಕೊಟ್ಟ. ಹಣ್ಣು ಗಿಳಿಯ ಕೊಕ್ಕಿನಷ್ಟೇ ಕೆಂಪಗಿತ್ತು, ಜೊತೆಗೆ ಸಿಹಿಯೂ ಇತ್ತು. ಆ ಮಹಾಪುರುಷನ ಅಗಾಧ ಜ್ಞಾನ ಹೇಗಿತ್ತೆಂದರೆ ಕಲ್ಲಂಗಡಿ ಹಣ್ಣನ್ನು ದಪದಪನೆ ತಟ್ಟಿ, ಬೆರಳುಗಳಿಂದ ಪಟಪಟನೆ ಕುಟ್ಟಿ ಸಿಹಿಯ ಅಂದಾಜು ಹಾಕಿಬಿಡುತ್ತಿದ್ದ. ಈ ಎಲ್ಲಾ ಕೈಚಳಕವೂ ನನಗೆ ಅವನು ಮಾರುತ್ತಿದ್ದ ಕಲ್ಲಂಗಡಿ ಹಣ್ಣಿನ ಸಿಹಿಯ ಬಗ್ಗೆ ಮತ್ತಷ್ಟು ನಂಬಿಕೆ ಮೂಡಿಸಿತ್ತು. ಆ ಮಹಾಪುರುಷ ಬೆಳಗ್ಗೆದ್ದು ಯಾವ ಪುಣ್ಯಾತ್ಮನ ಮುಖ ನೋಡಿದ್ದನೋ, ಅವನ ಅಂಗಡಿಯಲ್ಲಿನ ಅರ್ಧಕ್ಕರ್ಧ ಮಾಲು ನನ್ನ ಮನೆ ಸೇರುವುದರಲ್ಲಿತ್ತು. 

"ಯಾವ ಶನಿಯ ಮುಖ ನೋಡಿ¨ªೆನೋ ಇಂದು' ಎಂದು ಶಪಿಸಿಕೊಳ್ಳುತ್ತ ನೂರು ನೂರರ ನೋಟುಗಳನ್ನು ಮುಖದ ಮುಂದೆ ಹಿಡಿದು ನನ್ನ ಹೊಟ್ಟೆಬಾಕ ಮುಖವನ್ನು ಗುರುಗುರು ನೋಡಿದರು ಯಜಮಾನರು. ಇದೇನು ಹೊಟ್ಟೆಯೋ ಪಟ್ಟಣವೋ ಎಂಬ ಅವರ ನೋಟ ನನಗೆ ಹೊಸದಲ್ಲ, ಆದರೂ ಅವರ ಆ ಬಿರುನೋಟಕ್ಕೆ ನನ್ನ ಅಂಜುವ ಪ್ರತಿಕ್ರಿಯೆ ಚೆನ್ನಾಗಿ ಹೊಂದುತ್ತದೆ ಎಂದು ಗೊತ್ತು ನನಗೆ. ಅದಕ್ಕಾಗಿ ಸಂದರ್ಭಕ್ಕೆ  ಅಗತ್ಯವಿದ್ದಷ್ಟು ಭಯವಾದಂತೆ ತೋರಿಸಿಕೊಳ್ಳುತ್ತೇನೆ, 

ರುಚಿಗೆ ತಕ್ಕಷ್ಟು ಉಪ್ಪು ಬಿದ್ದರೆ ಅಡುಗೆ ರುಚಿಕಟ್ಟಾಗುತ್ತದೆ ಎಂದು ನನಗೇನು ಹೇಳಿಕೊಡಬೇಕೆ? ಅಂತೂ ವ್ಯವಹಾರ ಕುದುರಿಸಿ, ಕಲ್ಲಂಗಡಿಗಳನ್ನು ನನ್ನ ಮನೆ ತುಂಬಿಸಿಕೊಂಡೆ. ಮರುದಿನ ಬೆಳಿಗ್ಗೆ ಬ್ರಾಹ್ಮಿà ಮುಹೂರ್ತದಲ್ಲಿ ಎದ್ದು, ಮಡಿಯಾಗಿ, ಗಣಪನಿಗೆ ನಮಿಸಿ ಕಲ್ಲಂಗಡಿ ಹಣ್ಣನ್ನು ಕೊರೆದೆ, ಸಿಗಿದು-ಬಗೆದು ನೋಡಿದೆ. ಕಲ್ಲಂಗಡಿಯ ಮರ್ಯಾದಿ ಉಳಿಸಲಿಕ್ಕಾಗಿಯಾದರೂ ಒಂದು ತುಂಡು ಕೆಂಪು ಬಣ್ಣವಿಲ್ಲ ಇನ್ನು ಗಿಳಿಯ ಕೊಕ್ಕಿನ ಬಣ್ಣ ಬರುವ ಮಾತೆಲ್ಲಿ? ಮನೆಯ ಸ್ಟೋರ್‌ ರೂಮಿನಲ್ಲಿ ಅನಾಯಾಸವಾಗಿ ಕುಳಿತ ಬಾಕಿ ಹತ್ತೂಂಬತ್ತು ಹಣ್ಣುಗಳನ್ನು ನೆನೆದು ನನ್ನ ಕಣ್ಣಲ್ಲೆಲ್ಲ ನೀರು.

"ಅತಿಯಾಸೆ ಗತಿಗೇಡು' ಎಂಬ ಗಾದೆಮಾತು ನನಗಾಗಿಯೇ ಖಾಸ್‌ ಮಾಡಿದ್ದು ಎಂಬಂತಿತ್ತು. ಒಮ್ಮೆಲೇ ಇಪ್ಪತ್ತು ಕಲ್ಲಂಗಡಿ ಹಣ್ಣುಗಳನ್ನು ಹೇರಿಕೊಂಡು ತಂದಿದ್ದಕ್ಕೆ ನಿನ್ನೆಯೇ ಕಣ್ಣುಗುಡ್ಡೆ ಮೇಲೇರಿಸಿದ ನಮ್ಮನೆ ದೇವರೆದ್ದು "ನೀ ನೆಟ್ಟ ದುಡ್ಡಿನ ಗಿಡ ತೋರಿಸು' ಎಂದು ಬೊಬ್ಬೆ ಹೊಡೆದರೆ ಏನು ಮಾಡುವುದು ಅಂತ ತಳಮಳವಿಟ್ಟುಕೊಂಡಿತು. ಕೇಜಿಗೆ ಹದಿನೈದು ರೂಪಾಯಿಯಾದರೆ ಈ ಐದು ಕೇಜಿ ಕಲ್ಲಂಗಡಿಗೆ ಎಪ್ಪತ್ತೆçದು ರೂಪಾಯಿ! ತಿನ್ನದೆ ಎಸೆದುಬಿಟ್ಟರೆ ನ್ಯಾಯವುಳಿದೀತೆ, ನೀವೆ ಹೇಳಿ?  ಛಕ್ಕಂತ ತಲೆಗೆ ಉಪಾಯ ಹೊಳೆದೇಬಿಡು¤, "ನೀನಿಟ್ಟಂತೆ ಆಗಲಿ' ಎಂದು ಮತ್ತೂಮ್ಮೆ ಗಣಪನನ್ನು ನೆನೆದು, ಕಲ್ಲಂಗಡಿಯನ್ನು ಸಣ್ಣಕ್ಕೆ ಹೆಚ್ಚಿ ಈರುಳ್ಳಿ ಒಗ್ಗರಣೆ ಹಾಕಿ ಭಾಜಿ ಮಾಡಿಬಿಟ್ಟೆ. 

 ""ಅಮ್ಮ, ಸವತೆಕಾಯಿ ಭಾಜಿ ಬಲು ರುಚಿಯಾಗಿದೆ, ಯಾವತ್ತೂ ಇಷ್ಟು ರುಚಿ ಭಾಜಿ ಮಾಡಿರಲೇ ಇಲ್ಲ ನೀನು'' ಎಂದು ಹೊಗಳುತ್ತ-ದೂರುತ್ತ ದೋಸೆ ಜೊತೆ ಭಾಜಿಯನ್ನು ತಿನ್ನುತ್ತಿದ್ದ ಮಕ್ಕಳ ಮಾತಿಗೆ ಮೇರೆ ಮನ್‌ ಮೆ ಔರ್‌ ಏಕ್‌ ಲಡೂx ಫ‌ೂಟಾ. ಮಿಕ್ಕ ಕಲ್ಲಂಗಡಿ ಹಣ್ಣುಗಳು ಹೀಗೆಯೇ ಬೆಳ್ಳಗೆ ಸಪ್ಪೆಯಾಗಿದ್ದರೆ ಸವತೆಕಾಯಿ, ಮೊಗೆಕಾಯಿಯ ಪರ್ಯಾಯವಾಗಿ ಬಳಸಿಕೊಳ್ಳಬಹುದೇ ಎಂಬ ಉಪಾಯದಂತಹ ಯೋಚನೆ ತಲೆಗೆ ಬಂತು. ಅತ್ತೆ ತನ್ನ ಹಿತ್ತಲಲ್ಲಿ ನೂರಾರು ರುಚಿ ಮೊಗೆಕಾಯಿಗಳನ್ನು ಬೆಳೆದರೂ ಸೊಸೆಯ ಮೇಲಿನ ತಾಪಕ್ಕೆ ಒಂದು ಕಾಯನ್ನೂ ಇತ್ತ ದಾಟಿಸದೆ ಸೆಡ್ಡು ಹೊಡೆದಾಗ ಕಲ್ಲಂಗಡಿಯನ್ನು ಬದಲಿಯಾಗಿ ಬಳಸಬಹುದಲ್ಲ ಎನ್ನುವ ಯೋಚನೆಯೂ ಮನಸ್ಸಲ್ಲಿ ಬಂತು.

ಮರುದಿನ ನಮ್ಮನೆಗೆ ನೆಂಟರ ದಂಡು ಭೇಟಿ ಕೊಡುವುದರಲ್ಲಿತ್ತು, ಮನೆಯಲ್ಲಿ ತುಂಬಿ ತುಳುಕಾಡುತ್ತಿದ್ದ ಕಲ್ಲಂಗಡಿಯನ್ನು ಖಾಲಿ ಮಾಡಲು ಒಳ್ಳೆಯ ಅವಕಾಶ ಎಂದು ಬಗೆದು, ಕುಡಿಯಲು ತಂಪಗೆ ಮೊಗೆಸುಳಿ ಬೀಸುವಂತೆ ಕಲ್ಲಂಗಡಿ, ಏಲಕ್ಕಿ, ತೆಂಗಿನ ತುರಿ, ಬೆಲ್ಲ ಹಾಕಿ ಹದವಾಗಿ ಬೀಸಿ ಕಲ್ಲಂಗಡಿ ಸುಳಿ ಮಾಡಿದೆ. ಅದೇನು ಸೊಗಸಾದ ರುಚಿ ಅಂತೀರಾ! ಕಲ್ಲಂಗಡಿ ಸುಳಿಯಲ್ಲಿ ಸಿಲುಕಿದ ನಮ್ಮ ನೆಂಟರಿಂದಾಗಿ ಒಂದೇ ದಿನದಲ್ಲಿ ಮೂರು ಕಲ್ಲಂಗಡಿಹಣ್ಣುಗಳು ಖಾಲಿಯಾದವು.

ಮತ್ತೂಂದು ದಿನ ಸಾಂಬಾರಿಗೆ ತರಕಾರಿ ಇಲ್ಲದೆ ಕಂಗೆಟ್ಟ ನನಗೆ ನೆನಪಿಗೆ ಬಂದಿದ್ದು ಕಲ್ಲಂಗಡಿ ಎಂಬ ತರಕಾರಿಯೇ! ಸವತೆಕಾಯಿ ಹುಳಿ ಸೂಪರ್‌ ಎಂದು ಮತ್ತೆ ಶಹಬ್ಟಾಸ್‌ ಸಿಕ್ಕಿತು ನನಗೆ.  ಮರುದಿನ ನಮ್ಮನೆಯಲ್ಲಿ ಸವತೆಕಾಯಿ ಆಕಾ ಕಲ್ಲಂಗಡಿ ಕಾಯಿಯ ಪಲ್ಯ. ಅನ್ನಕ್ಕಿಂತ ಹೆಚ್ಚು ಪಲ್ಯವೇ ಖಾಲಿ ಆಯ್ತು.  ನಮ್ಮನೆ ದೋಸೆ ಬಂಡಿಯಲ್ಲಿ ಗರ್‌ಗರಿಯಾಗಿ ಮೂಡುವ ತೆಳ್ಳೇವು ಯಾವುದರದ್ದು ಎಂದುಕೊಂಡಿರಿ, ಕಲ್ಲಂಗಡಿ ಕಾಯಿಯದ್ದೇ!  ನನ್ನ ಅಡುಗೆಯ ಚಮತ್ಕಾರ ಮನೆಯವರನ್ನು ಹೇಗೆ ಮೋಡಿ ಮಾಡಿಬಿಟ್ಟಿತು ಎಂದರೆ ಊಟಕ್ಕೆ ಕುಳಿತಾಗ ಮನೆ ಮಂದಿಗೆಲ್ಲ ನನ್ನ ಕೈರುಚಿ ಹೊಗಳಿಯೇ ಮುಗಿಯುತ್ತಿರಲಿಲ್ಲ. ಮೊದಲೇ ದಪ್ಪಗಿರುವ ನಾನು, ಹೊಗಳಿಕೆ ಎಂದರೆ ಬಹಳ ಅಂಜುತ್ತೇನೆ, ಎಲ್ಲಿಯಾದರೂ ಮತ್ತೆ ಉಬ್ಬಿ ಬಿಟ್ಟರೆ ಅಂತ ! ಶಿವರಾತ್ರಿಯ ಉಪವಾಸ ಮುಗಿಸಿದ ಮರುದಿನ ನಾಲಿಗೆ ಬಹಳ ಕಡಿಯುತ್ತಿತ್ತು, ಇಂತಹ ಗಂಭೀರ ಸಮಯದಲ್ಲಿ ಯಾರಾದರೂ ಕೈಕಟ್ಟಿ ಸುಮ್ಮನೆ ಕುಳಿತವರುಂಟೇ? ಅಕ್ಕಿ ಹಿಟ್ಟಿಗೆ ಸವತೆ ಬದಲು ಕಲ್ಲಂಗಡಿ ಕೊರೆದು ಹಾಕಿ ಬಾಳೆಎಲೆಯಲ್ಲಿ ಕಡುಬಿಗೆ ಹೊಯ್ದೆ. ಕಡುಬು ಬೆಂದು ಬಟ್ಟಲಿಗೆ ಬೀಳುವವರೆಗೂ ನನಗೆ ನೆಮ್ಮದಿಯಿಲ್ಲ, ಉಪಾಯ ಹಾಕಿದ್ದು ಸರಿಯಾಗದೆ ಕಲ್ಲಂಗಡಿಯೊಂದಿಗೆ ಅಕ್ಕಿಹಿಟ್ಟೂ ಹಾಳಾದರೆ ಎಂಬ ಆತಂಕ ಇದ್ದೇ ಇತ್ತು.  

ಆದರೆ, ಕಡುಬಿನ ಪರೀಕ್ಷೆಯಲ್ಲೂ ಪೂರ್ಣ ಅಂಕಗಳೊಂದಿಗೆ ನಾನು ಉತ್ತೀರ್ಣ !  ಕಲ್ಲಂಗಡಿ ಕಾಯಿಯಿಂದ ಮಾಡಿದ ಖಾದ್ಯದಿಂದ ಹಾಗೂ ನನಗೆ ದೊರೆತ ಹೊಗಳಿಕೆಯಿಂದ ಸ್ಫೂರ್ತಿ ಪಡೆದು ಈಗ ಕಲ್ಲಂಗಡಿ ಎಂಬ ತರಕಾರಿಯಿಂದ ಮಾಡಬಹುದಾದ ಹೊಸ ರೆಸಿಪಿಗಳ ಪುಸ್ತಕವನ್ನೇ ಬರೆಯಲು ಕುಳಿತಿದ್ದೇನೆ. ಎದುರಿಗೆ ಕಲ್ಲಂಗಡಿಯನ್ನು  ಸಣ್ಣಗೆ ಹೆಚ್ಚಿ ಉಪ್ಪು, ಹುಳಿ, ಖಾರ ಹಾಕಿ ಜಜ್ಜಿ ಮಾಡಿದ ಪಚ್ಚುಡಿ ಇದೆ. ಬರೆಯುವಾಗ ಬಾಯಾಡಿಸಲು ನನಗೆ ಏನಾದರೂ ಬೇಕೇ ಬೇಕು ನೋಡಿ.

Trending videos

Back to Top