CONNECT WITH US  

ಕೆಮರಾ ಟ್ರಾಪ್‌ಗೆ ಕೆರೆಯ ಹುಲಿ ಮರಿ

ಹುಲಿಗಳ ಪ್ರಪಂಚದಲ್ಲಿ ಹೆಣ್ಣು ಹುಲಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ

ನನ್ನ ಗಾಯಗಳಿಂದ ಸ್ವಲ್ಪ ಚೇತರಿಸಿಕೊಂಡು ಕಾಡಿಗೆ ಮರಳಿದೆ. ನನ್ನ ಸಹಾಯಕ ಕೃಷ್ಣಪ್ಪನೊಡನೆ ನಲ್ಲೂರು ಹಳ್ಳಿಯ ಕಡೆಯಿಂದ ಕಾಡು ಹೊಕ್ಕು, ಕಾಡಿನಲ್ಲಿ ಕಟ್ಟಿದ್ದ ಒಂದೊಂದೇ ಸ್ಥಳದಲ್ಲಿ ಕ್ಯಾಮೆರಾಗಳಿಂದ ಚಿತ್ರಗಳನ್ನು ಡೌನಲೋಡ್‌ ಮಾಡುತ್ತಾ ಬೆಟ್ಟ ಹತ್ತಿ ಕಾಡಿನ ಮಧ್ಯೆಯಿರುವ ದೊಡ್ಡದೊಂದು ತೊರೆಯನ್ನು ಮಧ್ಯಾಹ್ನದ ವೇಳೆಗೆ ತಲುಪಿದೆವು..

""ಹರೀಶ್‌, ಇಲ್ಲಿ ಕಟ್ಟೋಣ ರೀ, ಇಲ್ಲಿ ಪ್ರಾಣಿಗಳು ಬರುವ ಸಾಧ್ಯತೆ ಜಾಸ್ತಿ ಇದೆ'' ಎಂದು ಪಿಸುಗುಟ್ಟಿದೆ. ಸುತ್ತಮುತ್ತಲು ಪ್ರದೇಶಕ್ಕೆ ಇದೊಂದೇ ನೀರಿನ ಸೆಲೆ, ಹಾಗಾಗಿ ಈ ಹಾದಿಯಲ್ಲಿ ಪ್ರಾಣಿಗಳು ಬರಲೇಬೇಕು ಎಂದು ನನ್ನ ಅಂದಾಜು. ಮುಂಚೆ ನಮ್ಮೊಡನೆ ಹಲವು ವರ್ಷ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ ಗುಂಗುರು ಕೂದಲಿನ, ಮಾಗಡಿ ತಾಲೂಕಿನ ಹರೀಶ್‌ ವನ್ಯಜೀವಿಗಳ ಮೇಲಿನ ಸೆಳೆತದಿಂದ, ಜರ್ಮನ್‌ ಕಂಪನಿಯೊಂದರಲ್ಲಿ ತಮ್ಮ ಇಂಜಿನಿಯರಿಂಗ್‌ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆಯಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿ ದ್ದಾರೆ. ಇಂದು ರಾಜ್ಯದ ಹಲವಾರು ಕಾಡುಗಳಲ್ಲಿ ಕೆಲಸ ಮಾಡಿ ಉತ್ತಮ ವನ್ಯಜೀವಿ ಸಂಶೋಧಕರಾಗಿ ರೂಪುಗೊಳ್ಳುತ್ತಿದ್ದಾರೆ. 

ಅಕ್ಟೋಬರ್‌ 2014
ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ಪ್ರದೇಶದಲ್ಲಿ ಸುಡು ಬಿಸಿಲು. ಈ ಹೊಸ ವನ್ಯಜೀವಿಧಾಮದಲ್ಲಿ ಚಿರತೆಗಳ ಬಗ್ಗೆ ನಾವು ನಡೆಸುತ್ತಿದ್ದ ಅಧ್ಯಯನಕ್ಕಾಗಿ ಕ್ಯಾಮೆರಾ ಟ್ರಾಪ್‌ಗ್ಳನ್ನು ಕಟ್ಟಲು ಸೂಕ್ತ ಜಾಗಗಳನ್ನು ಹುಡುಕುತ್ತಿದ್ದೆವು. ಈ ಸ್ವಯಂ ಚಾಲಿತ ಕ್ಯಾಮೆರಾಗಳು ಅವುಗಳ ಮುಂದೆ ಹಾದು ಹೋಗುವ ವನ್ಯಜೀವಿಗಳ (ಮನುಷ್ಯರನ್ನು ಸೇರಿ) ಚಿತ್ರಗಳನ್ನು ತಂತಾನೆ ತೆಗೆಯುತ್ತವೆ. ಚಿರತೆಗಳ ಮೇಲಿರುವ ಗುಲಾಬಿದಳ ಆಕಾರದ ಚುಕ್ಕೆಗಳನ್ನು ಹೋಲಿಸಿ ಬೇರೆ ಬೇರೆ ಚಿರತೆಗಳನ್ನು ಗುರುತಿಸಬಹುದು. ಆದರೆ ಕ್ಯಾಮೆರಾಗಳನ್ನು ಕಟ್ಟಲು ಸೂಕ್ತವಾದ ಜಾಗಗಳನ್ನು ಹುಡುಕುವುದು ಬಹುಮುಖ್ಯ. 

ಪ್ರಾಣಿಗಳು ಹೆಚ್ಚಾಗಿ ಉಪಯೋಗಿಸುವ ಹಾದಿಗಳು ಮತ್ತು ಕಾಡು ರಸ್ತೆಗಳಲ್ಲಿ ಅವುಗಳ ಹೆಜ್ಜೆ ಗುರುತು, ಹಿಕ್ಕೆ ಹಾಕಿರುವ ಸ್ಥಳಗಳು, ಮರದ ಮೇಲೆ ಕೆರೆದಿರುವ ಗುರುತುಗಳು ಹೀಗೆ ಇನ್ನಿತರ ಕುರುಹುಗಳನ್ನು ಆಧರಿಸಿ ಸೂಕ್ತ ವಾದ ಸ್ಥಳಗಳನ್ನು ಕ್ರೋಡೀಕರಿಸಿ ಅಲ್ಲಿ ಕ್ಯಾಮೆರಾಗಳನ್ನು ಕಟ್ಟಲಾಗುತ್ತದೆ. ಒಂದು ಪ್ರದೇಶದಲ್ಲಿ  ಕ್ಯಾಮೆರಾಗಳನ್ನು ಅಳವಡಿಸಲು ಬೇಕಾದ ಸೂಕ್ತವಾದ ಸ್ಥಳಗಳನ್ನು ಗುರುತಿಸಲು ಹಲವಾರು ದಿನಗಳು ಬೇಕಾಗುತ್ತವೆ. ಈ ತಯಾರಿ ಮನೆ ಕಟ್ಟಿದ ಹಾಗೆ. ಗೃಹ ಪ್ರವೇಶದಂದು ಸುಂದರವಾದ ಮನೆ ಕಂಡರೂ, ಅದರ ಹಿಂದಿನ ಪರಿಶ್ರಮ ಬಹುದೊಡ್ಡದು, ಮನೆ ಕಟ್ಟಲು ತೆಗೆದುಕೊಂಡ ಸಮಯ ಬಹು ದೀರ್ಘ‌. ಎಲ್ಲಾ ಚಿಕ್ಕಪುಟ್ಟ ವಿಚಾರಗಳನ್ನು ತುಲನೆ ಮಾಡಿ ಮುಂದುವರಿಯಬೇಕಾಗುತ್ತದೆ. ನಮಗಿರುವ ಸಮಯ, ಸಂಪನ್ಮೂಲಗಳನ್ನು ಆಧರಿಸಿ ಸೂಕ್ತವಾದ ವಿನ್ಯಾಸ ಮತ್ತು ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಆಯ್ಕೆ ಮಾಡಬಹುದು.  

ನನ್ನ ಸಹದ್ಯೋಗಿಗಳಾದ ಹರೀಶ್‌, ಪೂರ್ಣೇಶ್‌ರೊಡನೆ ನಾನಾ ಗಲೇ ಈ ವನ್ಯಜೀವಿಧಾಮದಲ್ಲಿ ಸುಮಾರು 300 ಕಿಲೋ ಮೀಟರಿಗೂ ಹೆಚ್ಚು ಕಾಲುಹಾದಿಯಲ್ಲಿ ನಡೆದು, ಕ್ಯಾಮೆರಾ ಟ್ರಾಪ್‌ಗ್ಳನ್ನು ಕಟ್ಟಲು ಸೂಕ್ತ ಸ್ಥಳಗಳನ್ನು ಗುರುತಿಸಿದ್ದೆವು. ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದಿದ್ದೆವು. ದೊಡ್ಡ ತೊರೆಗಳಲ್ಲಿ ಬಂಡೆಯಿಂದ ಬಂಡೆಗೆ ಹಾರಿ ವನ್ಯಜೀವಿಧಾಮದ ಸುಂದರ ಪ್ರದೇಶಗಳನ್ನು ನೋಡಿದ್ದೆವು. ಹೊಸ ವನ್ಯಜೀವಿಧಾಮವಾದುದರಿಂದ ಆಗ ಇಲ್ಲಿ ರಸ್ತೆಗಳ ಜಾಲ ಬಹು ಕಡಿಮೆಯಿತ್ತು. 

ನಮಗೆ ದಾರಿ ತೋರಲು ಬರುತ್ತಿದ್ದ ಅರಣ್ಯ ಇಲಾಖೆಯ  ಕೆಲ ಮುಂಚೂಣಿ ಸಿಬ್ಬಂದಿ, "ವೀರಪ್ಪನ್‌ ಈ ಗುಹೆಯಲ್ಲಿ ಹಲವು ದಿನ ಕಳೆದಿದ್ದ', "ಅವನು ಈ ಹಾದಿ ಹಿಡಿದೇ ಆ ಹಳ್ಳಿಗೆ ಹೋಗುತ್ತಿದ್ದದ್ದು', "ಕಾಡಿನ ಮಧ್ಯೆ ಇದ್ದ ಈ ದೇವಸ್ಥಾನಕ್ಕೆ ಸದಾ ಬರುತ್ತಿದ್ದ..' ಹೀಗೆಂದು ನಾವು ನಡೆಯುತ್ತಿದ್ದ ಪ್ರತಿ ಹಾದಿಗೆ, ವಿರಮಿಸುತ್ತಿದ್ದ ಬಂಡೆಗಳ ಬಗ್ಗೆ, ನಮಿಸುತ್ತಿದ್ದ ಚಿಕ್ಕಪುಟ್ಟ ಗುಡಿಗಳ ಬಗ್ಗೆ ವಿವರಿಸುತ್ತಿದ್ದರು. ಆ ನಿಗೂಢ ವ್ಯಕ್ತಿ ಮತ್ತು ಅವನ ತಂಡದವರು ಹಲವಾರು ವರ್ಷಗಳು ಓಡಾಡಿದ ಜಾಗಗಳಲ್ಲೇ ಈಗ ನಾವು ನಡೆಯುತ್ತಿದ್ದೇವೆ ಎಂದು ಮನಸ್ಸಿನ ಮೂಲೆಯಲ್ಲಿ ಎಂತಹದೋ ವಿಚಿತ್ರ ರೋಮಾಂಚನ. 
  
ಅಂದು ಪಿ.ಜಿ.ಪಾಳ್ಯ ಪ್ರದೇಶದ ಕೆರೆಯೊಂದರ ಬಳಿ ಸ್ಥಳಗಳನ್ನು ಗುರುತಿಸುತ್ತಿದ್ದೆವು. ಕೊನೆಗೆ ಆ ಕೆರೆಗೆ ಸೇರುವ ಚಿಕ್ಕ ಹಾದಿ ಗಳು ಸೂಕ್ತ ಜಾಗವೆಂದು ನಮ್ಮ ಡೇಟಾಶೀಟ್‌ನಲ್ಲಿ ಸ್ಥಳದ ಅûಾಂಶ- ರೇಖಾಂಶ, ಆ ಸ್ಥಳದ ಸಸ್ಯವರ್ಗ ಮತ್ತು ಸಂಬಂಧಪಟ್ಟ ಇತರ ಮಾಹಿತಿಗಳನ್ನು ಗುರುತುಹಾಕಿಕೊಂಡು ಮುಂದುವರಿದೆವು. 

ಆ ತಿಂಗಳ ಕೊನೆಯಲ್ಲಿ ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ ನಮ್ಮ ಕ್ಯಾಮೆರಾ ಟ್ರಾಪಿಂಗ್‌ ಕೆಲಸ ಪ್ರಾರಂಭಿಸಿದೆವು. ಸುಮಾರು ಒಂಬೈನೂರು ಚದರ ಕಿಲೋಮೀಟರ್‌ಗೂ ಹೆಚ್ಚು ವಿಸ್ತೀರ್ಣವುಳ್ಳ ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ (ಸುಮಾರು ಎರಡು ಲಕ್ಷದ ಇಪ್ಪತ್ತುನಾಲ್ಕು ಸಾವಿರ ಎಕರೆಗೂ ಅಧಿಕ) ಈ ವೈಜ್ಞಾನಿಕ ಕಾರ್ಯವನ್ನು ನಡೆಸಲು ಅನೇಕ ತಿಂಗಳುಗಳೇ ಬೇಕಾಗುತ್ತವೆ. ದಿನವೂ ಕ್ಯಾಮೆರಾ ಇರುವ ಸ್ಥಳ ಗಳಿಗೆ ಹೋಗಿ ಚಿತ್ರಗಳನ್ನು ಡೌನ್‌ಲೋಡ್‌ ಮಾಡುವುದು, ಕ್ಯಾಮೆರಾದ ಬ್ಯಾಟರಿ ಮುಗಿದಿದ್ದರೆ ಬದಲಾಯಿಸುವುದು, ಪ್ರಾಣಿಗಳೇನಾದರೂ ಕ್ಯಾಮೆರಾಗಳನ್ನು ತಿರುಗಿಸಿದ್ದರೆ ಅದರ ದಿಕ್ಕು ಮತ್ತು ಕೋನವನ್ನು ಸರಿಪಡಿಸುವುದು, ಹೀಗೆ ದಿನದಲ್ಲಿ ಕೆಲಸ ಮುಗಿದರೆ, ಸಂಜೆಯ ವೇಳೆ ಚಿತ್ರಗಳನ್ನು  ವ್ಯವಸ್ಥಿತವಾಗಿ ವರ್ಗೀಕರಿಸುವುದು, ಇನ್ನಿತರ ಕೆಲಸ ನಡೆಯುತ್ತಿತ್ತು. 

ನವೆಂಬರ್‌ 2014
ನಮಗೊಂದು ಸಂತೋಷಕರವಾದ ವಿಚಾರ ತಂದು ಕೊಟ್ಟದ್ದು ಪಿ.ಜಿ.ಪಾಳ್ಯ ಭಾಗದಲ್ಲಿ ಹೆಣ್ಣು ಹುಲಿ. ಆ ಹುಲಿ ತನ್ನ ಮೂರು ಮರಿಗಳೊಡನೆ ನಮ್ಮ ಕ್ಯಾಮೆರಾ ಟ್ರಾಪ್‌ ಮುಂದೆ ಓಡಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿತ್ತು. ಸುಮಾರು ಆರರಿಂದ ಎಂಟು ತಿಂಗಳ ಮೂರು ಮರಿಗಳು ತಾಯಿಯೊಟ್ಟಿಗೆ ನೀರು ಕುಡಿಯಲು ಬಂದು, ಕ್ಯಾಮೆರಾ ಮುಂದೆ ಓಡಾಡಿ, ಹತ್ತಾರು ಚಿತ್ರಗಳನ್ನು ನಮಗೆ ದೊರಕಿಸಿಕೊಟ್ಟಿದ್ದವು. ಕಿತ್ತಳೆ ಬಣ್ಣದ ಈ ಪುಟ್ಟ, ಸುಂದರ ಮರಿಗಳು ತಮ್ಮ ತುಂಟಾಟವನ್ನೆಲ್ಲ ಹೊರ ಜಗತ್ತಿಗೆ ನಮ್ಮ ಕ್ಯಾಮೆರಾ ಮೂಲಕ ಬಿತ್ತರಿಸಿದ್ದವು. ಮರಿಗಳ ಉಬ್ಬಿದ ಹೊಟ್ಟೆ ಅವುಗಳು ಹೊಟ್ಟೆ ಬಿರಿಯುವಂತೆ ತಿಂದಿದ್ದವೆಂದು ತೋರುತ್ತಿತ್ತು. ತಾಯಿ ಹುಲಿ ಕಡವೆಯೋ, ಕಾಟಿಯೋ, ಜಿಂಕೆಯನ್ನೋ ಬೇಟೆಯಾಡಿ ಮರಿಗಳಿಗೆ ಆಹಾರವನ್ನೊದಗಿಸಿತ್ತು. ವೀರಪ್ಪನ್‌ ಮತ್ತವನ ತಂಡದವರ ಚಟುವಟಿಕೆಗಳಿಂದ ತತ್ತರಿಸಿದ್ದ ಈ ಕಾಡು ಪ್ರದೇಶದಲ್ಲಿ ಹುಲಿ ಮರಿಗಳನ್ನು ನೋಡುವುದೆಂದರೆ ಕಾಡು ಮತ್ತು ಅದರ ಜೀವಿಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆಯೆಂಬ ಸಂತೋಷದ ಕುರುಹು. ನಾವು ಯೋಚಿಸಿದಂತೆ ನಾವು ಕಟ್ಟಿದ್ದ ಸ್ಥಳಗಳಲ್ಲಿ ಮಹತ್ವವಾದ ಫ‌ಲಿತಾಂಶಗಳು ಬರುತ್ತಿದ್ದವು.

ಮೇ 2016
ನಾವು ಮಲೈ ಮಹದೇಶ್ವರಬೆಟ್ಟದಲ್ಲಿ ಮೊದಲ ಬಾರಿ ಕ್ಯಾಮೆರಾ ಟ್ರಾಪ್‌ ಮಾಡಿ ಸುಮಾರು ಒಂದೂವರೆ ವರ್ಷವಾಗಿತ್ತು. ನಾನಾಗ ಬೆಂಗಳೂರಿನ ವೈಟ್‌ಫೀಲ್ಡ್‌ನ ಶಾಲೆಗೆ ಬಂದಿದ್ದ ಚಿರತೆಯ ವಿಚಾರದಲ್ಲಿ ತೀವ್ರವಾಗಿ ಗಾಯಗೊಂಡು ಮನೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದೆ. ಮಲೈ ಮಹದೇಶ್ವರ ಬೆಟ್ಟದಲ್ಲಿ ನಮ್ಮ ಅಧ್ಯಯನದ ಕೆಲಸ ಮತ್ತೆ ಪ್ರಾರಂಭವಾಗಿತ್ತು ಮತ್ತು ಆಗ ರಾಮಾಪುರ ವಲಯದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದೆವು. ಪ್ರತಿ ದಿನವೂ ಹರೀಶ್‌ ಚಿತ್ರಗಳನ್ನು ಡೌನ್‌ಲೋಡ್‌ ಮಾಡಿದ ಮೇಲೆ, ಇಂಟರ್ನೆಟ್‌ ಸಂಪರ್ಕವಿದ್ದಲ್ಲಿ ಕೆಲ ಮುಖ್ಯವಾದ ಅಥವಾ ಕುತೂ ಹಲ ಕಾರಿಯಾದ ಚಿತ್ರಗಳೇನಾದರೂ ಇದ್ದರೆ ಕಳುಹಿಸುತ್ತಿದ್ದರು. ಕಾಡಿಗೆ ಹೋಗಲಾಗದೆ ಮನೆಯಲ್ಲೇ ಮಲಗಿದ್ದ ನನಗೆ ಚಿತ್ರಗಳು ಬಂದರೆ ಅದೇನೋ ಸಂತೋಷ. ಕಾಡಿನಲ್ಲಿ ಏನು ಆಗುತ್ತಿದೆ ಎನ್ನುವ ವಿಚಾರ ಸ್ವಲ್ಪಮಟ್ಟಿಗಾದರೂ ತಿಳಿಯುತ್ತಿತ್ತು. 
 
ಅಂದು ಕಳುಹಿಸಿದ ಚಿತ್ರಗಳಲ್ಲಿ ಚಿರತೆಗಳು, ಆನೆಗಳು ಮತ್ತು ವಿಶೇಷವಾಗಿ ಎರಡು ಹುಲಿಗಳ ಚಿತ್ರಗಳಿದ್ದವು. ಚಿರತೆಗಳನ್ನು ನಮ್ಮ ಹಿಂದಿನ ವರ್ಷದ ಚಿತ್ರಗಳೊಂದಿಗೆ ಹೋಲಿಸಿ ನೋಡಿದ ನಂತರ ಹುಲಿಗಳ ಚಿತ್ರಗಳನ್ನು ನೋಡುತ್ತಿದ್ದೆ. ಎರಡೂ ಹುಲಿಗಳು ಹಿಂದಿನ ವರ್ಷದ ಯಾವ ಹುಲಿಗೂ ಹೋಲಿಕೆಯಾಗಲಿಲ್ಲ. ಈ ಎರಡೂ ಹುಲಿಗಳು ಹೊಸದಿರಬಹುದೆಂದು ಸುಮ್ಮನಾದೆ. 

ಮಾರನೆಯ ದಿನ ನನ್ನ ಸಹದ್ಯೋಗಿ ಆಶ್ರಿತ ಅನೂಪ್‌ಗೆ  ಚಿತ್ರಗಳನ್ನು ಕಳುಹಿಸಿ ಇನ್ನೊಮ್ಮೆ ಹೋಲಿಸಿ ನೋಡಲು ಕೇಳಿ ಕೊಂಡೆ. ಆಶ್ರಿತ ಹುಡುಕಿದ ಹುಲಿ ನಮಗೆಲ್ಲರಿಗೂ ಆಶ್ಚರ್ಯ ತಂದಿತು. ಹಿಂದಿನ ರಾತ್ರಿ ನಾನು ಹುಲಿಗಳನ್ನು ಹೋಲಿಸುವಾಗ 2014ರಲ್ಲಿ ಸಿಕ್ಕ ಮರಿಗಳೊಡನೆ ಹೋಲಿಸುವುದನ್ನು ಮರೆತು ಬಿಟ್ಟಿದ್ದೆ. ಹಿಂದಿನ ರಾತ್ರಿ ಸಿಕ್ಕ ಎರಡು ಹುಲಿಗಳಲ್ಲೊಂದು, ನಮಗೆ 2014ರ ನವೆಂಬರ್‌ ತಿಂಗಳಿನಲ್ಲಿ ಪಿ.ಜಿ.ಪಾಳ್ಯದಲ್ಲಿ ಸಿಕ್ಕ ಮರಿಗಳಲ್ಲಿ ಒಂದಾಗಿತ್ತು. ಈ ಹೆಣ್ಣು ಮರಿಗೆ ಅಂದು ನಾವು ಎಂ.ಎಂ.ಸಿ. ಯು-01 ಎಂದು ನಾಮಾಂಕಿತ ಮಾಡಿದ್ದೆವು. ಈಗ ಎಂ.ಎಂ.ಸಿ. ಯು-01 ತನ್ನ ತವರು ಮನೆಯಿಂದ ಪೂರ್ವಕ್ಕೆ ಸುಮಾರು ಹದಿನೈದು ಕಿಲೋಮೀಟರು ದೂರದಲ್ಲಿ ಮತ್ತೂಮ್ಮೆ ಸಿಕ್ಕಿದೆ. ಈ ಮರಿಯೀಗ ತನ್ನ ಪ್ರೌಢಾವಸ್ಥೆಗೆ ಕಾಲಿಟ್ಟಿತ್ತು ಮತ್ತು ಬಹು ಮುಖ್ಯವಾಗಿ ಬದುಕಿ ಉಳಿದಿತ್ತು. ಹುಲಿಗಳ ಪ್ರಪಂಚದಲ್ಲಿ ಮರಿಗಳು ಪ್ರೌಢಾವಸ್ಥೆಗೆ ತಲುಪುವುದು ಒಂದು ಸಾಹಸಯಾತ್ರೆ. ಹಾಗಾಗಿ ದೊಡ್ಡ ಹುಡುಗಿಯಾಗಿದ್ದ ಎಂ.ಎಂ.ಸಿ.ಯು-01ನನ್ನು ನೋಡಿ ನಮಗೆಲ್ಲರಿಗೂ ಸಂತೋಷವಾಗಿತ್ತು. ನಂತರದ ಎರಡು ದಿನಗಳಲ್ಲಿ ಎಂ.ಎಂ.ಸಿ.ಯು-01 ಮತ್ತೆ ನಮ್ಮ ಕ್ಯಾಮೆರಾಗಳಿಗೆ ಸಿಕ್ಕಿತು. ಆಶ್ಚರ್ಯದ ಸಂಗತಿಯೆಂದರೆ ಅದು ಸಿಕ್ಕ ಸ್ಥಳದ ಹತ್ತಿರವೇ ನಮಗೆ ಇನ್ನೆರೆಡು ಗಂಡು ಹುಲಿಗಳು ಸಿಕ್ಕವು. 

ಜೂನ್‌ 2016
ನನ್ನ ಗಾಯಗಳಿಂದ ಸ್ವಲ್ಪ ಚೇತರಿಸಿಕೊಂಡು ಕಾಡಿಗೆ ಮರಳಿದೆ. ನನ್ನ ಸಹಾಯಕ ಕೃಷ್ಣಪ್ಪನೊಡನೆ ನಲ್ಲೂರು ಹಳ್ಳಿಯ ಕಡೆಯಿಂದ ಕಾಡು ಹೊಕ್ಕು, ಕಾಡಿನಲ್ಲಿ ಕಟ್ಟಿದ್ದ ಒಂದೊಂದೇ ಸ್ಥಳದಲ್ಲಿ ಕ್ಯಾಮೆರಾ ಗಳಿಂದ ಚಿತ್ರಗಳನ್ನು ಡೌನ್‌ಲೋಡ್‌ ಮಾಡುತ್ತಾ ಬೆಟ್ಟ ಹತ್ತಿ ಕಾಡಿನ ಮಧ್ಯೆಯಿರುವ ದೊಡ್ಡದೊಂದು ತೊರೆಯನ್ನು ಮಧ್ಯಾಹ್ನದ ವೇಳೆಗೆ ತಲುಪಿದೆವು. ತನ್ನದೇ ಕೋಮಿನವರು ಹೆಚ್ಚಾಗಿ ಇರುವ ನಲ್ಲೂರಿಗೆ ನಾವು ಕ್ಯಾಮೆರಾ ಕಟ್ಟಿರುವ ಹಾದಿಯಲ್ಲೇ ವೀರಪ್ಪನ್‌ ನಲ್ಲೂರಿಗೆ ಬರುತ್ತಿದ್ದನೆಂದು ನನಗೆ ಹಿಂದೆ ತಿಳಿಸಲಾಗಿತ್ತು. ಈ ಹಾದಿಯ ಹತ್ತಿರವಿದ್ದ ಮೂಲಂಪಟ್ಟಿ ಎಂಬ ಜಾಗದಲ್ಲಿ ಎರಡು ಮೂರು ವರ್ಷಗಳ ಹಿಂದೆ ನೂರಾರು ದನಗಳಿದ್ದ ಖಾಲಿ ದೊಡ್ಡಿಯೊಂದಿತ್ತು. ಇಂತಹ ದೊಡ್ಡಿಯವರನ್ನು ವೀರಪ್ಪನ್‌ ಮತ್ತವನ ಸಹಚರರು ಹೆದರಿಸಿ ಆಹಾರ ಮತ್ತು ಹಾಲಿನ ಪದಾರ್ಥಗಳನ್ನು ಕಸಿದುಕೊಳ್ಳುತ್ತಿದ್ದರು. 

ನಾವು ತಲುಪಿದ ತೊರೆ ನನ್ನ ಅಚ್ಚುಮೆಚ್ಚಿನ ಜಾಗಗಳಲ್ಲೊಂದು. ಹೆಬ್ಟಾವಿನ ಹಾಗೆ ಹರಿಯುವ ತೊರೆ, ಅದರ ಎರಡೂ ದಡಗಳಲ್ಲಿ ಎತ್ತರದ ತೊರೆಮತ್ತಿ ಮರಗಳು, ಅಷ್ಟು ದೊಡ್ಡದ ಮರಗಳನ್ನು ಬೆಂಬಲಿಸಲು ಆಜಾನುಬಾಹು ಗಾತ್ರದ ಬುಡಗಳು, ಆ ದೊಡ್ಡ ಮರಗಳಿಂದ ಬೃಹತ್‌ ಛತ್ರಿಯಂತೆ ಹರಡಿರುವ ರೆಂಬೆಗಳು ತೊರೆಗೆ ವರ್ಷಪೂರ್ಣ ನೆರಳು ಕೊಟ್ಟು ನೀರನ್ನು ಬಹಳಷ್ಟು ದಿನ ಇಂಗದಂತೆ ರಕ್ಷಿಸುತ್ತಿದ್ದವು. ತೊರೆಯ ಹತ್ತಿರದ ಹಾದಿಯಲ್ಲಿ ಕಟ್ಟಿದ್ದ ಕ್ಯಾಮೆರಾಗಳಿಂದ ಚಿತ್ರಗಳನ್ನು ಡೌನ್‌ಲೋಡ್‌ ಮಾಡಿ, ಊಟದ ಶಾಸ್ತ್ರ ಮುಗಿಸುವ ಹೊತ್ತಿಗೆ ಮಧ್ಯಾಹ್ನ ತಡವಾಗಿತ್ತು. ನಾವು ತಂಗಿದ್ದ ಜಾಗಕ್ಕೆ ಹಿಂದಿರುಗಿದೆವು. 
 
ಸಂಜೆ ಕ್ಯಾಮೆರಾ ಟ್ರಾಪ್‌ ಚಿತ್ರಗಳನ್ನು ಪರಿಶೀಲಿಸುತ್ತಿದ್ದಾಗ ತೊರೆಯ ಹತ್ತಿರ ಕಟ್ಟಿದ್ದ ಕ್ಯಾಮೆರಾಗಳಲ್ಲಿ ಹುಲಿಗಳ ಚಿತ್ರಗಳು ಬಂದಿದ್ದವು. ಒಂದು ಚಿತ್ರದಲ್ಲಿ ಕ್ಯಾಮೆರಾಕ್ಕೆ ಬಹು ಹತ್ತಿರ ಬಂದು ಒಂದು ಚಿಕ್ಕ ಕಲ್ಲನ್ನು ಮೂಸುತ್ತಿದ್ದ ಗಂಡು ಹುಲಿಯಿದ್ದರೆ, ಅದರ ಹಿಂದೆ ಪೊದೆಯ ಮಧ್ಯದಲ್ಲಿ ಇನ್ನೊಂದು ಹುಲಿಯಿರುವ ಚಿತ್ರವಿತ್ತು. ಒಂದೇ ಚಿತ್ರದಲ್ಲಿ ಎರಡು ಹುಲಿಗಳಿದ್ದವು. ಹೋಲಿಸಿ ನೋಡಿದರೆ ಪೊದೆಯಲ್ಲಿದ್ದ ಹುಲಿ ಎಂ.ಎಂ.ಸಿ.ಯು-01 ಆಗಿತ್ತು. ಬಹುಶಃ ಎಂ.ಎಂ.ಸಿ.ಯು-01, ಗಂಡು ಹುಲಿಗೆ ಸಂಗಾತಿಯಾಗಿ ತ್ತೆಂದು ಕಾಣುತ್ತದೆ. 

ತರುವಾಯದ ದಿನ ಮತ್ತೆ ಎಂ.ಎಂ.ಸಿ.ಯು-01, ಇದೇ ಗಂಡು ಹುಲಿಯೊಂದಿಗೆ ತೊರೆಯಿಂದ ಐದಾರು ಕಿಲೋ
ಮೀಟರ್‌ ದೂರದಲ್ಲಿದ್ದ ಒಂದು ಚಿಕ್ಕ ನೀರಿನ ಹೊಂಡದ ಹತ್ತಿರ ಕ್ಯಾಮೆರಾದಲ್ಲಿ ಸೆರೆಯಾಯಿತು. ಒಂದು ದೊಡ್ಡ ಬಂಡೆಯ ಕೆಳಗೆ ಮರಳ ಮಧ್ಯದಲ್ಲಿದ್ದ ನೀರಿಗೆ ಮೊದಲು ಎಂ.ಎಂ.ಸಿ.ಯು-01, ಹುಲಿಗಳು ನೀರಿಗೆ ರಿವರ್ಸ್‌ ಗೇರ್‌ನಲ್ಲಿ ಇಳಿಯುವ ನಿರ್ದಿಷ್ಟ ರೀತಿಯಲ್ಲಿ ಹಿಂದಿನ ಕಾಲನ್ನು ಮೊದಲು ಇಟ್ಟು, ದೇಹದ ಅರ್ಧಭಾಗ ನೀರಿನಲ್ಲಿ ಮುಳುಗುವ ಹಾಗೆ ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ಎಂ.ಎಂ.ಸಿ.ಯು-01 ಅಲ್ಲಿಂದ ನೀರಿನಿಂದೆದ್ದು ಓಡಿ ಹೋಗುತ್ತದೆ. ಇದು ಎದ್ದು ಹೋದ ಒಂದೆರೆಡು ನಿಮಿಷಗಳಲ್ಲಿ, ತೊರೆಯ ಬಳಿ ಎಂ.ಎಂ.ಸಿ.ಯು-01 ಒಟ್ಟಿಗೆ ಸಿಕ್ಕಿದ ಅದೇ ಗಂಡು ಹುಲಿಯು ನೀರಿಗೆ ಬಂದಿತ್ತು. ಎಂ.ಎಂ.ಸಿ.ಯು-01 ಈ ಗಂಡು ಹುಲಿಯೊಂದಿಗೆ ಸಂಗ ಮಾಡುತ್ತಿರಬಹುದೆಂಬ ನನ್ನ ಅನುಮಾನಕ್ಕೆ ಈ ಚಿತ್ರಗಳು ಪುಷ್ಟಿಕೊಟ್ಟವು.  

ಹುಲಿಗಳ ಪ್ರಪಂಚದಲ್ಲಿ ಹೆಣ್ಣು ಹುಲಿಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಪರಿಸ್ಥಿತಿ ಅನುಕೂಲವಾಗಿದ್ದಾಗ ಮಾತ್ರ ಅವುಗಳು ಮರಿಗಳಿಗೆ ಜನ್ಮ ಕೊಡುವುದು. ಅವುಗಳಿಗೆ ಸಾಕಷ್ಟು ಆಹಾರ, ಮತ್ತು ಫ‌ಲಪ್ರದವಾದ ವಾತಾವರಣವಿಲ್ಲದಿದ್ದರೆ ಅವು ಬೆದೆಗೆ ಬರುವುದಿಲ್ಲ ಮತ್ತು ಮರಿಗಳಿಗೆ ಜನ್ಮ ನೀಡುವುದಿಲ್ಲ. ಹಾಗಾಗಿ ಎಂ.ಎಂ.ಸಿ.ಯು-01 ದೊಡ್ಡದಾಗಿ ಮತ್ತು ಈಗ ಅದು ತನ್ನದೇ ಕುಟುಂಬವನ್ನು ಬೆಳೆಸುವ ಹಾದಿಯಲ್ಲಿದ್ದದ್ದು ಬಹು ಉತ್ತಮ ಸಂಕೇತ. ಎಂ.ಎಂ.ಸಿ.ಯು-01 ಮಲೈ ಮಹದೇ ಶ್ವರ ಬೆಟ್ಟದ ಹುಲಿ ಸಂತತಿ ಮುಂದುವರೆಸಲು ಇನ್ನೊಂದು ಹೆಜ್ಜೆ ಇಟ್ಟಿತ್ತು. ನಾವು ಅರಣ್ಯ ಇಲಾಖೆಯೊಡನೆ ಸೇರಿ ಈ ಕಾಡುಗಳನ್ನು ವನ್ಯಜೀವಿಧಾಮವನ್ನಾಗಿ ಮಾಡಲು ಮಾಡಿದ ಪ್ರಯತ್ನಕ್ಕೆ ಒಂದು ದೊಡ್ಡ ಪ್ರತಿಫ‌ಲವಾಗಿತ್ತು ಎಂ.ಎಂ.ಸಿ.ಯು-01. ಅರಣ್ಯ ಇಲಾ ಖೆಯ ಮುಂಚೂಣಿ ಸಿಬ್ಬಂದಿ ಪಟ್ಟ ಕಷ್ಟದ ಸಂಕೇತವಾಗಿತ್ತು ಈ ಹೆಣ್ಣು ಹುಲಿ. ಮುಂದೊಂದು ದಿನ ನಮ್ಮ ಕ್ಯಾಮೆರಾಗಳಲ್ಲಿ ಅದರ ಮರಿಗಳನ್ನು ಸಹಾ ನಾವು ದಾಖಲಿಸಬಹುದೆಂಬ ಆಸೆಯಿಂದಿ ದ್ದೇನೆ. ಆದರೆ ಎಂ.ಎಂ.ಸಿ.ಯು-01ನೊಟ್ಟಿಗೆ ಇದ್ದ ಇನ್ನೆರೆಡು ಮರಿಗಳಾಗಲಿ ಅಥವಾ ಅದರ ತಾಯಿಯಾಗಲಿ ಮತ್ತೆ ನಮ್ಮ ಕ್ಯಾಮೆರಾ ಟ್ರಾಪ್‌ನಲ್ಲಿ ಇಲ್ಲಿಯವರೆಗೆ ಸಿಕ್ಕಿಲ್ಲ. ಬಹುಶಃ ಆ ಎರಡೂ ಮರಿಗಳು ತಮ್ಮದೇ ಪ್ರಪಂಚವನ್ನು ಸೃಷ್ಟಿಸಿಕೊಂಡಿರಬಹುದು. 

ಲೇಖನ ಕುರಿತ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ goo.gl/xNVwMi

ಚಿತ್ರ: ಎನ್‌.ಸಿ.ಫ್./ಸಂಜಯ್‌ ಗುಬ್ಬಿ 

Trending videos

Back to Top