ರಾಜಸ್ಥಾನದಲ್ಲಿ 50.8 ಡಿ.ಸೆ. ತಾಪಮಾನ

Team Udayavani, Jun 2, 2019, 6:00 AM IST

ಪಂಜಾಬ್‌ನ ಅಮೃತಸರದಲ್ಲಿ ಶನಿವಾರ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳ ಲೆಂದು ಕೆಲವರು ನೀರಾಟವಾಡುತ್ತಾ ಸಮಯ ಕಳೆಯುತ್ತಿದ್ದುದು ಕಂಡುಬಂತು.

ಜೈಪುರ: ರಾಜಸ್ಥಾನ ರಾಜ್ಯದಲ್ಲಿ ಶನಿವಾರ ದೇಶದ ಉಳಿದೆಲ್ಲ ಪ್ರಾಂತ್ಯಗಳಿಗಿಂತ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಅದರಲ್ಲೂ ಅಲ್ಲಿನ ಚುರು ಎಂಬಲ್ಲಿ 50.8 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ. ಇದು ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ದಾಖಲಾಗುವ ಸರಾಸರಿ ಉಷ್ಣಾಂಶಕ್ಕಿಂತ 9 ಡಿಗ್ರಿಯಷ್ಟು ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗಂಗಾನಗರ್‌, ಬಿಕಾನೇರ್‌, ಜೈಸಲ್ಮೇರ್‌ ಹಾಗೂ ಕೋಟಾ ನಗರಗಳಲ್ಲಿ ಕ್ರಮವಾಗಿ ಗರಿಷ್ಠ 49 ಡಿಗ್ರಿ ಸೆಲ್ಸಿಯಸ್‌, 47.9 ಡಿಗ್ರಿ ಸೆಲ್ಸಿಯಸ್‌, 47.2 ಡಿಗ್ರಿ ಸೆಲ್ಸಿಯಸ್‌ ಹಾಗೂ 46 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನು, ಜೋಧಪುರ, ಬಾರ್ಮರ್‌ ಹಾಗೂ ಜೈಪುರಗಳಲ್ಲಿ ಕ್ರಮವಾಗಿ 45.6, 44.5 ಹಾಗೂ 45.2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ ಎಂದು ಇಲಾಖೆ ಹೇಳಿದ್ದು, ದೇಶಾದ್ಯಂತ ಆವರಿಸಿರುವ ಉಷ್ಣ ಹವೆಯು ಮುಂದಿನ 2 ದಿನಗಳವರೆಗೆ ಮುಂದುವರಿಯಲಿದೆ ಎಂದಿದೆ. ಇದರ ಜತೆ, ಒಡಿಶಾದ 10 ಪ್ರಾಂತ್ಯಗಳಲ್ಲಿ ದಾಖಲೆಯ ಉಷ್ಣಾಂಶ ಕಂಡುಬಂದಿದೆ. ಅತ್ತ, ದೆಹಲಿಯಲ್ಲೂ ಸರಾಸರಿ ಉಷ್ಣಾಂಶಕ್ಕಿಂತ 6 ಡಿಗ್ರಿ ಸೆಲ್ಸಿಯಸ್‌ನಷ್ಟು (46.6) ಶಾಖ ದಾಖಲಾಗಿದ್ದು, ರಾಷ್ಟ್ರ ರಾಜಧಾನಿ ಸುತ್ತಲಿನ ರಾಜ್ಯಗಳ ಜನರಿಗೆ ಮನೆಯಿಂದ ಆಚೆ ಬಾರದಂತೆ ಶುಕ್ರವಾರ ಇಲಾಖೆ ಸೂಚಿಸಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ