ದಿಲ್ಲಿಯಲ್ಲಿ ಕಾಂಗ್ರೆಸ್‌ನಿಂದ CBI ಘೇರಾವ್‌: ರಾಹುಲ್‌ ಗಾಂಧಿ arrest

Team Udayavani, Oct 26, 2018, 3:18 PM IST

ಹೊಸದಿಲ್ಲಿ : ದೇಶಾದ್ಯಂತದ ಸಿಬಿಐ  ಕಾರ್ಯಾಲಯಗಳ ಮುಂದೆ ” ಸಿಬಿಐ ಘೇರಾವ್‌ ” ನಡೆಸುವ ಕಾಂಗ್ರೆಸ್‌ ಪ್ರತಿಭಟನೆಯ ಅಂಗವಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಪೊಲೀಸರು ಅರೆಸ್ಟ್‌ ಮಾಡಿದರು. 

ಕೇಂದ್ರ ಸರಕಾರವು ಸಿಬಿಐ ನಂತಹ ಉನ್ನತ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಇನ್ನಿತರ ಅನೇಕ ನಾಯಕರನ್ನು ಪೊಲೀಸರು ಬಂಧಿಸಿದರು. 

ಸಿಬಿಐ ಮುಖ್ಯಸ್ಥ ಆಲೋಕ್‌ ವರ್ಮಾ ಅವರನ್ನು ಬಲವಂತದಿಂದ ರಜೆಯಲ್ಲಿ ಕಳುಹಿಸಲಾದ ಕೇಂದ್ರ ಸರಕಾರದ ಕ್ರಮವನ್ನು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟಿಸಿದರು. 

ವಿವಾದಾತ್ಮಕ ರಫೇಲ್‌ ಫೈಟರ್‌ ಜೆಟ್‌ ಡೀಲ್‌ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದ ವರ್ಮಾ ಅವರನ್ನು ದುರುದ್ದೇಶದಿಂದಲೇ ಕೇಂದ್ರ ಸರಕಾರ ಹುದ್ದೆಯಿಂದ ಕಿತ್ತು ಹಾಕಿದೆ ಎಂದು ಕಾಂಗ್ರೆಸ್‌ ಆರೋಪಿಸಿತು.

ಈ ನಡುವೆ ಖುದ್ದು ಸಿಬಿಐ, ವರ್ಮಾ ಅವರು ಈಗಲೂ ಸಿಬಿಐ ಮುಖ್ಯಸ್ಥರೇ ಆಗಿದ್ದಾರೆ ಮತ್ತು ದುರ್ವರ್ತನೆಯ ಆರೋಪದ ಮೇಲೆ ಅವರನ್ನು ತಾತ್ಕಾಲಿಕವಾಗಿ ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಹೇಳಿಕೊಂಡಿರುವ ಹೊರತಾಗಿಯೂ ಕಾಂಗ್ರೆಸ್‌, ವರ್ಮಾ ಅವರ ಪುನರ್‌ ಸ್ಥಾಪನೆಯ ತನ್ನ ಬೇಡಿಕೆಗೆ ಅಂಟಿಕೊಂಡಿತು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ