ಸಂಸತ್‌ನಲ್ಲಿ ಕೆಂಡಾಮಂಡಲ:ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ
Team Udayavani, Feb 7, 2018, 2:36 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದು, ‘ಸಂವಿಧಾನದಲ್ಲಿ ಗೊಂದಲ ಮೂಡಿಸಿ ದೇಶವನ್ನು ವಿಭಜನೆ ಮಾಡಿದ್ದೀರಿ’ ಎಂದು ಕಿಡಿ ಕಾರಿದರು.
ರಾಷ್ಟ್ರಪತಿ ಭಾಷಣದ ಬಗ್ಗೆ ವಂದನಾರ್ಪಣೆ ಚರ್ಚೆಯ ವೇಳೆ ಹಲವು ಆರೋಪಗಳಿಗೆ ಉತ್ತರಿಸಿದ ಪ್ರಧಾನಿ ಮೋದಿ ಗಾಂಧಿ ಕುಟುಂಬದ ವಿರುದ್ದ ಕಿಡಿ ಕಾರಿದರು .’ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಇಲ್ಲ’ ಎಂದರು.
‘ಇವತ್ತು ದೇಶವೇನಾದರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ಹಿಂದೆ ಮಾಡಿರುವ ಪಾಪಗಳೇ ಕಾರಣ’ ಎಂದರು.
‘ಕಾಂಗ್ರೆಸ್ ಸರ್ಕಾರಗಳು ಹಿಂದೆ ಜವಾಬ್ಧಾರಿಯಿಂದ ಕೆಲಸ ಮಾಡಿದ್ದರೆ ದೇಶ ಈಗ ಹೊಸ ಎತ್ತರಕ್ಕೆ ಏರಿರುತ್ತಿತ್ತು, ಅವರಿಗೆ ಟೀಕೆ ಮಾಡುವ ಯಾವುದೇ ಹಕ್ಕು ಇಲ್ಲ’ ಎಂದು ಕಿಡಿ ಕಾರಿದರು.
‘ನಿನ್ನೆ ಬಶೀರ್ ಭದ್ರ ಜೀ ಅವರ ಶಾಯರಿ ಹೇಳಿ ವಾಗ್ದಾಳಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ಕಿಡಿ ಕಾರಿದ ಮೋದಿ ನಾವು ವಿಭಜನೆ ನೀತಿ ಅನುಸರಿಸುತ್ತಿಲ್ಲ. ಯಾರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನ್ನುವುದನ್ನು ನಿಮ್ಮ ಮುಖ್ಯಮಂತ್ರಿ (ಸಿದ್ದರಾಮಯ್ಯ) ಬಳಿ ಕೇಳಿ’ ಎಂದರು.
‘ಪ್ರಜಾಪ್ರಭುತ್ವಕ್ಕೆ ನೆಹರು ಕೊಡುಗೆ ಏನು’ ಎಂದು ಪ್ರಶ್ನಿಸಿದ ಮೋದಿ ‘ಸರ್ದಾರ್ ಪಟೇಲ್ ಅವರು ಬಹುಮತ ಪಡೆದಿದ್ದರೂ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ’ ಎಂದು ಆರೋಪಿಸಿದರು.
‘ಸರ್ದಾರ್ ಪಟೇಲ್ ಅವರು ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿರುತ್ತಿತ್ತು’ ಎಂದರು.
‘ಕಾಂಗ್ರೆಸ್ ಯಾವ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ. ಹೈದರಾಬಾದ್ ವಿಮಾನನಿಲ್ದಾಣದಲ್ಲಿ ಸ್ವಾಗತಕ್ಕೆ ಬಂದಿದ್ದ ದಲಿತ ನಾಯಕನನ್ನು ರಾಜೀವ್ ಗಾಂಧಿ ಸಾರ್ವಜನಿಕವಾಗಿ ಕಡೆಗಣಿಸಿದ್ದರಲ್ಲ ಅದೆಯಾ ಕಾಂಗ್ರೆಸ್ ಪ್ರಜಾಪ್ರಭುತ್ವ’ ಎಂದು ಪ್ರಶ್ನಿಸಿದರು.
‘ದೇಶಕ್ಕೆ ಜವಹಾರ್ ಲಾಲ್ ನೆಹರು ಪ್ರಜಾಪ್ರಭುತ್ವ ತಂದರು ಎಂದು ಕಾಂಗ್ರೆಸ್ ಪಕ್ಷ ಸೊಕ್ಕಿನಿಂದಲೊ ಇಲ್ಲ ಜ್ಞಾನದ ಕೊರತೆಯಿಂದ ಹೇಳುತ್ತಿದೆಯೋ ನನಗೆ ಗೊತ್ತಿಲ್ಲ , ಆದರೆ ಭಾರತದಲ್ಲಿ ಲಿಚ್‌ವಿ ರಾಜ್ಯಭಾರ ಮತ್ತು ಗೌತಮ ಬುದ್ಧನ ಕಾಲದಲ್ಲೂ ಪ್ರಜಾಪ್ರಭುತ್ವ ಇತ್ತು’ ಎಂದರು.