‘ಕರಣ್‌ ಜೊತೆ ಕಾಫಿ’ ಕುಡಿದ ಪಾಂಡ್ಯ, ರಾಹುಲ್‌ ಗೆ ತಲಾ 20 ಲಕ್ಷ ರೂ. ದಂಡ!

ದಂಡದ ಮೊತ್ತದಲ್ಲಿ ಅರ್ಧ ಪಾಲು ಹುತಾತ್ಮ ಜವಾನರ ಪತ್ನಿಯರಿಗೆ ಇನ್ನರ್ಧ ಪಾಲು ಅಂಧ ಕ್ರಿಕೆಟಿಗರ ನಿಧಿಗೆ

Team Udayavani, Apr 20, 2019, 2:41 PM IST

ಮುಂಬಯಿ: ಜನಪ್ರಿಯ ಟಿ.ವಿ. ಕಾರ್ಯಕ್ರಮ ‘ಕಾಫಿ ವಿತ್ ಕರಣ್‌’ ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರಿಕೆಟ್‌ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌. ರಾಹುಲ್‌ ಅವರು ಆ ಕಾರ್ಯಕ್ರಮದಲ್ಲಿ ತಾವು ಮಾಡಿದ್ದ ‘ಸೆಕ್ಸಿಸ್ಟ್‌’ ಪ್ರತಿಕ್ರಿಯೆಗೆ ದಂಡ ರೂಪದಲ್ಲಿ ಬೆಲೆ ತೆರಬೇಕಾಗಿದೆ. ಈ ಪ್ರಕರಣದ ಕುರಿತಾಗಿ ವಿಚಾರಣೆ ನಡೆಸಿದ್ದ ಬಿಸಿಸಿಐನ ಒಂಬುಡ್ಸ್‌ ಮನ್‌ ಡಿ.ಕೆ. ಜೈನ್‌ ಅವರು ಈ ಇಬ್ಬರು ಕ್ರಿಕೆಟಿಗರಿಗೂ ತಲಾ 20 ಲಕ್ಷಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಬಿಸಿಸಿಐ ತನ್ನ ವೆಬ್‌ ಸೈಟ್‌ ನಲ್ಲಿ ಈ ಆದೇಶವನ್ನು ಪ್ರಕಟಿಸಿದೆ. ಪಾಂಡ್ಯ ಮತ್ತು ರಾಹುಲ್‌ ಈಗಾಗಲೇ ತಾತ್ಕಾಲಿಕ ವಜಾ ಶಿಕ್ಷೆಯನ್ನು ಅನುಭವಿಸಿರುವುದರಿಂದ ಮತ್ತು ಮಹಿಳೆಯರ ಕುರಿತಾಗಿ ತಾವು ಮಾಡಿರುವ ಲಘು ಪ್ರತಿಕ್ರಿಯೆಗೆ ಇವರಿಬ್ಬರೂ ಕ್ಷಮೆ ಯಾಚಿಸಿರುವ ಕಾರಣದಿಂದ ದಂಡ ರೂಪದ ಹೊರತಾದ ಇನ್ಯಾವುದೆ ಕ್ರಮವನ್ನು ಈ ಇಬ್ಬರ ಮೇಲೆ ತೆಗೆದುಕೊಳ್ಳುವುದಿಲ್ಲ ಎಂದು ಡಿ. ಕೆ. ಜೈನ್‌ ಅವರು ತಮ್ಮ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಕೆ.ಎಲ್‌. ರಾಹುಲ್‌ ಮತ್ತು ಹಾರ್ಧಿಕ್‌ ಪಾಂಡ್ಯ ಅವರಿಗೆ ವಿಧಿಸಲಾಗಿರುವ ತಲಾ 20 ಲಕ್ಷ ರೂಪಾಯಿಗಳ ದಂಡದ ಮೊತ್ತದಲ್ಲಿ ತಲಾ 10 ಲಕ್ಷ ರೂಪಾಯಿಗಳನ್ನು ಕರ್ತವ್ಯದಲ್ಲಿರುವಾಗಲೇ ಪ್ರಾಣತ್ಯಾಗ ಮಾಡಿದ ಅರೆ-ಸೈನಿಕ ದಳದ ಹುತಾತ್ಮ 10 ಕಾನ್ ಸ್ಟೇಬಲ್‌ ಗಳ ಪತ್ನಿಯರಿಗೆ ತಲಾ 1 ಲಕ್ಷ ರೂಪಾಯಿಗಳಂತೆ ‘ಭಾರತ್‌ ಕೆ ವೀರ್‌ ಆಪ್‌’ ಮೂಲಕ ನೀಡುವಂತೆ ಜೈನ್‌ ಅವರು ಮಾದರಿ ತೀರ್ಪನ್ನು ನೀಡಿದ್ದಾರೆ. ಹಣಕಾಸಿನ ಸಹಾಯದ ಜರೂರತ್ತಿರುವ ಹುತಾತ್ಮ ಕಾನ್ ಸ್ಟೇಬಲ್‌ ಗಳ ವಿಧವಾ ಪತ್ನಿಯರನ್ನು ಗುರುತಿಸಿ ಈ ನೆರವಿನ ಮೊತ್ತವನ್ನು ನೀಡುವಂತೆ ಆದೇಶಿಸಲಾಗಿದೆ.

ಇನ್ನು ತಲಾ 10 ಲಕ್ಷ ರೂಪಾಯಿಗಳನ್ನು ಇವರಿಬ್ಬರು ‘ಕಣ್ಣಿನ ದೃಷ್ಟಿ ಕಳೆದುಕೊಂಡಿರುವವರಿಗಾಗಿ ಕ್ರಿಕೆಟ್‌ ಅಸೋಸಿಯೇಷನ್‌’ ಪ್ರಾರಂಭಿಸಿರುವ ನಿಧಿಗೆ ಸಲ್ಲಿಸಬೇಕೆಂದು ಡಿ.ಕೆ. ಜೈನ್‌ ಆದೇಶಿಸಿದ್ದಾರೆ. ಮಾತ್ರವಲ್ಲದೇ ಈ ಒಂಬುಡ್ಸ್‌ ಮನ್‌ ನಿರ್ದೇಶಿತ ಸೂಕ್ತ ರೀತಿಯಲ್ಲಿ ಈ ಅದೇಶ ಹೊರಬಿದ್ದ ನಾಲ್ಕು ವಾರಗಳ ಒಳಗಾಗಿ ತಾನು ಸೂಚಿಸಿರುವ ಈ ಎಲ್ಲಾ ಪಾವತಿಗಳನ್ನೂ ಮಾಡುವಂತೆ ಡಿ.ಕೆ. ಜೈನ್‌ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್‌ ಒಂಬುಡ್ಸ್‌ ಮನ್‌ ನೇಮಕ ಮಾಡಿತ್ತು. ಮತ್ತು ಈ ಒಂಬುಡ್ಸ್‌ ಮನ್‌ ಅವರು ಪಾಂಡ್ಯ ಹಾಗೂ ರಾಹುಲ್‌ ಅವರಿಗೆ ತಮ್ಮ ಎದುರು ವಿಚಾರಣೆಗೆ ಹಾಜರಾಗುವಂತೆ ಎಪ್ರಿಲ್‌ ಮೊದಲ ವಾರದಲ್ಲಿ ನೋಟೀಸ್‌ ನೀಡಿದ್ದರು. ಇದಕ್ಕೂ ಮೊದಲು ಕಳೆದ ಜನವರಿಯಲ್ಲಿ ಕಾಫಿ ವಿತ್‌ ಕರಣ್‌ ಕಾರ್ಯಕ್ರಮ ಪ್ರಸಾರವಾದ ಬಳಿಕ ಆ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತಾಗಿ ಕೀಳಾಗಿ ಮಾತನಾಡಿದ್ದ ರಾಹುಲ್‌ ಹಾಗೂ ಪಾಂಡ್ಯ ಅವರು ಸಾರ್ವತ್ರಿಕ ಟೀಕೆಗೆ ಒಳಗಾಗಿದ್ದರು.

ಈ ಪ್ರಕರಣದ ಬಳಿಕ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್‌ ನಿಂದ ಈ ಇಬ್ಬರೂ ಕ್ರಿಕೆಟಿಗರೂ ಅಮಾನತು ಶಿಕ್ಷೆಗೊಳಗಾಗಿದ್ದರು. ಬಳಿಕ ಈ ಅಮಾನತನ್ನು ರದ್ದುಗೊಳಿಸಲಾಗಿತ್ತು ಆದರೆ ಇವರಿಬ್ಬರ ಮೇಲೆ ತನಿಖಾ ಪ್ರಕ್ರಿಯೆ ಜಾರಿಯಲ್ಲಿತ್ತು. ಈ ವಿಚಾರದ ಕುರಿತಾಗಿ ಪಾಂಡ್ಯ ಮತ್ತು ರಾಹುಲ್‌ ಅವರು ಬಹಿರಂಗವಾಗಿ ಕ್ಷಮೆಯನ್ನೂ ಯಾಚಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ