ದೇಶದ ಆಗಸ ಕಾಯುವ ವೀರರು

Team Udayavani, Oct 7, 2019, 6:07 AM IST

ಭಾರತೀಯ ವಾಯುಸೇನೆಗೆ ಈಗ 87ರ ಸಂಭ್ರಮ. 1932ರ ಅಕ್ಟೋಬರ್‌ 8ರಂದು ಸ್ಥಾಪನೆಯಾದ ವಾಯುಸೇನೆ ಜಗತ್ತಿನಲ್ಲೇ ಅತಿ ಪ್ರಬಲ ಪಡೆ ಯಾಗಿ ರೂಪುಗೊಂಡಿದೆ. ದೇಶವನ್ನು ಶತ್ರುರಾಷ್ಟ್ರಗಳು ಕಾಡಿ ದಾಗ ಸಮರ್ಥವಾಗಿ ಅವುಗಳನ್ನು ಎದುರಿಸಿದ ಹಿರಿಮೆ ವಾಯುಸೇನೆಯದ್ದು.

ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌!
ವಾಯುಪಡೆಯನ್ನು ಸ್ಥಾಪಿಸಿದ್ದು ಬ್ರಿಟಿಷರು. 1932, ಅ.8ರಂದು ಸ್ಥಾಪನೆಯಾಗಿದ್ದು, 1933 ಎ.1ರಂದು ಮೊದಲ ಯುದ್ಧ ವಿಮಾನ ಸೇರ್ಪಡೆಯಾಗಿತ್ತು. ಆಗ 6 ಮಂದಿ ಬ್ರಿಟಿಷ್‌ ವಾಯು ಪಡೆಯಿಂದ ತರಬೇತಾದ ಅಧಿಕಾರಿಗಳು ಮತ್ತು 19 ವಾಯುಪಡೆ ಸೈನಿಕರಿದ್ದರು. ಜತೆಗೆ 4 ವಿಮಾನಗಳಿದ್ದವು. ಆಗ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯದ ಬಳಿಕ ಇಂಡಿಯನ್‌ ಏರ್‌ಫೋರ್ಸ್‌ ಎಂದು ಮರು ನಾಮಕರಣವಾಯಿತು.

4ನೇ ಅತೀ ದೊಡ್ಡ ಶಕ್ತಿ
ಅಮೆರಿಕ, ಚೀನ ಮತ್ತು ರಷ್ಯಾದ ಅನಂತರದ ಸ್ಥಾನದಲ್ಲಿ ಭಾರತ ಇದೆ. ಮಾತ್ರವಲ್ಲದೇ ಜಗತ್ತಿನ ಶಕ್ತಿ ಶಾಲಿ ವಾಯು ಸೇನೆಗಳಲ್ಲಿ ನಮ್ಮದೂ ಒಂದಾಗಿದೆ.

ಧ್ಯೇಯವಾಕ್ಯದ ಮೂಲ ಭಗವದ್ಗೀತೆ
ಭಗವದ್ಗೀತೆಯ 11ನೇ ಅಧ್ಯಾಯದಲ್ಲಿ ಬರುವ ಶ್ಲೋಕದ ಸಾಲನ್ನು ವಾಯುಪಡೆ ಧ್ಯೇಯ ವಾಕ್ಯವನ್ನಾಗಿಸಿದೆ. “ನಭ ಸ್ಪರ್ಶಂ ದೀಪ್ತಂ’ ಎಂಬ ವಾಕ್ಯ ಇದಾಗಿದೆ. ಕುರುಕ್ಷೇತ್ರದಲ್ಲಿ ಕೌರವರ ಬೃಹತ್‌ ಸೈನ್ಯದ ಎದುರು ಹೋರಾಡುವ ಧೈರ್ಯವನ್ನು ಅರ್ಜುನ ಕಳೆದು ಕೊಂಡಾಗ ಸಾರಥಿಯಾಗಿದ್ದ ಕೃಷ್ಣ ಹೇಳುವ ಮಾತು ಇದಾಗಿದೆ.

ಗರುಡ್‌ ಕಮಾಂಡೋ
ಗರುಡ್‌ ಕಮಾಂಡೋ ವಾಯು ಪಡೆಯ ವಿಶೇಷ ಕಮಾಂಡೋ ಪಡೆ. 2004ರಲ್ಲಿ ಆರಂಭವಾದ ಇದು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಣೆ ನಡೆಸುತ್ತವೆ. ಕಮಾಂಡೋ ಪಡೆಗಳಲ್ಲೇ ಅತಿ ಸುದೀರ್ಘ‌ ತರಬೇತಿಯನ್ನು ಗರುಡ್‌ನ‌ಲ್ಲಿ ನೀಡಲಾಗುತ್ತದೆ. ಹಲವಾರು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ ಹಿರಿಮೆ ಇದಕ್ಕಿದೆ.

ಮೊದಲ ಮುಖ್ಯಸ್ಥರ ಆಯ್ಕೆ ಹೇಗಾಯ್ತು?
ಎ.ಸಿ. ಸರ್ಕಾರ್‌, ಸುಬ್ರತೊ ಮುಖರ್ಜಿ, ಭೂಪೇಂದ್ರ ಸಿಂಗ್‌, ಎ.ಬಿ. ಅವನ್‌ ಮತ್ತು ಅಮರ್ಜೀತ್‌ ಸಿಂಗ್‌ ಎಂಬವರು ವಾಯುಪಡೆಯ ಮೊದಲ ಐದು ಪೈಲಟ್‌ಗಳಾಗಿದ್ದರು. 1933ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್‌ ಮತ್ತು ಅಮರ್ಜೀತ್‌ ಸಿಂಗ್‌ ವಿಮಾನ ಅಪಘಾತಗಳಲ್ಲಿ ಮೃತಪಟ್ಟರು. ಸರ್ಕಾರ್‌ ಒಂದೇ ವರ್ಷದಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಎ.ಬಿ. ಅವನ್‌ ಭಾರತ-ಪಾಕ್‌ ವಿಭಜನೆ ಸಂದರ್ಭ ಪಾಕ್‌ಗೆ ತೆರಳಿದರು. ಮತ್ತೆ ಉಳಿದಿದ್ದು ಸುಬ್ರತೋ ಮುಖರ್ಜಿ ಮಾತ್ರ. ಅನಂತರ ಅವರನ್ನೇ ವಾಯುಪಡೆಯ ಮೊದಲ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಯಿತು.

ಹಿಂದಾನ್‌ ಹಿರಿಮೆ
ವಾಯುಪಡೆಯ ಹಿಂದಾನ್‌ ವಾಯು ನಿಲ್ದಾಣ ಏಷ್ಯಾದಲ್ಲೇ ಅತೀ ದೊಡ್ಡ ವಾಯು ನೆಲೆ. ಗಾಜಿಯಾಬಾದ್‌ನಲ್ಲಿರುವ ಇದು ವೆಸ್ಟರ್ನ್ ಏರ್‌ ಕಮಾಂಡ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 9 ಸಾವಿರ ಅಡಿಯ ಅತಿ ದೊಡ್ಡ ರನ್‌ವೇ ಹೊಂದಿದೆ. 55 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ವಿಶ್ವದ 8ನೇ ಅತೀ ದೊಡ್ಡ ವಾಯುನೆಲೆಯೂ ಹೌದು.

2ನೇ ಜಾಗತಿಕ ಯುದ್ಧದಲ್ಲಿ
1938ರಲ್ಲಿ ಆರಂಭಗೊಂಡ ದ್ವಿತೀಯ ಮಹಾಯುದ್ಧದಲ್ಲಿ ದೇಶವನ್ನು ಆಳುತ್ತಿದ್ದ ಬ್ರಿಟಿಷರ ಪರವಾಗಿ ಸೇನೆ ಯುದ್ಧದಲ್ಲಿ ಭಾಗವಹಿಸಿತ್ತು. ಸುಮಾರು 2 ಲಕ್ಷ ಸೈನಿಕರು ಭಾಗಿಯಾಗಿದ್ದು ಮಾತ್ರವಲ್ಲದೆ ವಾಯುಸೇನೆಯೂ ತೆರಳಿತ್ತು ಎಂಬುದು ವಿಶೇಷ.

ಈಗಿನ ಪ್ರಮುಖ ಹುದ್ದೆಗಳು ಮತ್ತು ಅಲಂಕೃತರು
- ಚೀಫ್ ಆಫ್ ದ ಏರ್‌ ಸ್ಟಾಫ್ ಏರ್‌ ಚೀಫ್ ಮಾರ್ಷಲ್‌
ರಾಕೇಶ್‌ ಕುಮಾರ್‌ ಸಿಂಗ್‌ ಬದೌರಿಯಾ
–  ವೈಸ್‌ ಚೀಫ್ ಆಫ್ ದ ಏರ್‌ ಸ್ಟಾಫ್ ಏರ್‌ ಮಾರ್ಷಲ್‌
ಹರ್ಜಿತ್‌ ಸಿಂಗ್‌ ಅರೋರ
- ಡೆಪ್ಯುಟಿ ಚೀಫ್ ಆಫ್ ದ ಏರ್‌ ಸ್ಟಾಫ್ ಏರ್‌ ಮಾರ್ಷಲ್‌
ವಿ.ಆರ್‌. ಚೌಧರಿ

ವಾಯುಪಡೆ ದಿನಾಚರಣೆ

ವಾಯುಪಡೆ ದಿನಾಚರಣೆ ಅಂಗವಾಗಿ ಹಿಂದಾನ್‌ ವಾಯುನೆಲೆಯಲ್ಲಿ ಈ ಬಾರಿ ವಾಯುಪಡೆ ಸಾಮರ್ಥ್ಯ ಪ್ರದರ್ಶನ ನಡೆಯಲಿದೆ. ದಿನಾಚರಣೆ ಅಂಗವಾಗಿ ವಿವಿಧೆಡೆ ಸಾಮರ್ಥ್ಯ ಪ್ರದರ್ಶನಗಳು, ಮಾಹಿತಿ ಕಾರ್ಯಾಗಾರಗಳನ್ನು ಅದು ನಡೆಸುತ್ತಿದೆ. ಮೊನ್ನೆಯಷ್ಟೇ ಕೊಯಮತ್ತೂರಿನಲ್ಲಿ ಯುದ್ಧ ವಿಮಾನ ಹಾರಾಟ ಪ್ರದರ್ಶನ ನಡೆದಿತ್ತು. ಈ ಬಾರಿ ಹಿಂದಾನ್‌ನಲ್ಲಿ ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡ ಚಿನೂಕ್‌, ಅಪಾಚೆ ಹೆಲಿಕಾಪ್ಟರ್‌ ಪ್ರದರ್ಶನ ಸಾಧ್ಯತೆ ಇದೆ.

ಪ್ರಮುಖ ಸಮರಗಳಲ್ಲಿ ಪಾತ್ರ
1947-48 ಕಾಶ್ಮೀರ ಯುದ್ಧ
1947, ಅ.20ರಲ್ಲಿ ಪಾಕಿಸ್ಥಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜ ಹರಿಸಿಂಗ್‌ ಭಾರತದ ಸಹಾಯ ಕೋರಿದ್ದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಷರತ್ತಿನ ಸಹಾಯ ನೀಡಿದ ಭಾರತ, ವಾಯುಸೇನೆಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸೆಂಬರ್‌ 31, 1948ರಲ್ಲಿ ಈ ಯುದ್ಧ ಕೊನೆಗೊಂಡಿತು. ಈ ಸಮಯದಲ್ಲಿ ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳದಿದ್ದರೂ, ಪರೋಕ್ಷವಾಗಿ ಭಾರತ ಸೇನೆಗೆ ನೆರವಾಗಿತ್ತು.

1961 ಕಾಂಗೋ
1960, ಜೂ.30ರಂದು ಬೆಲ್ಜಿಯಮ್‌ಗೆ ಕಾಂಗೋ ದೇಶದ ಮೇಲಿದ್ದ ಆಡಳಿತ ಅಧಿಕಾರ ನಾನಾ ಕಾರಣಗಳಿಗೆ ಹಠಾತ್ತಾಗಿ ಕೊನೆಗೊಂಡಿತ್ತು. ಆಗ ಅಲ್ಲಿ ಶಾಂತಿ ನಿರ್ವಹಣ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್‌ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದ್ದರು.

1971 ಬಾಂಗ್ಲಾ ಯುದ್ಧ
ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಭಾರತೀಯ ವಾಯುಪಡೆ ಪ್ರಮುಖ ಪಾತ್ರವಹಿಸಿದೆ. ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನವನ್ನು ಮೊದಲ ಬಾರಿ ಬಳಸಲಾಗಿತ್ತು.

1999 ಕಾರ್ಗಿಲ್‌ ಯುದ್ಧ
1999ರಲ್ಲಿ ಭಾರತದ ಸೇನೆಯು ಕಾರ್ಗಿಲ್‌ನಲ್ಲಿ ಪಾಕ್‌ಅನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಯುದ್ಧಭೂಮಿಯಲ್ಲಿ ವಾಯುಪಡೆಯ ಬಲವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸು ಕಂಡಿದ್ದಕ್ಕೆ ಕಾರ್ಗಿಲ್‌ ಯುದ್ಧ ಒಂದು ಸ್ಟಷ್ಟ ನಿದರ್ಶನ. “ಮಿರಾಜ್‌ 2000′ ಸರಣಿಯ ಯುದ್ಧ ವಿಮಾನಗಳು ಕಾರ್ಗಿಲ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು.

ಬಾಲಾಕೋಟ್‌ ದಾಳಿ
2019ರ ಫೆಬ್ರವರಿ 26ರಂದು ವಾಯು ಪಡೆಯ ಹನ್ನೆರಡು ಮಿರಾಜ್‌ 2000 ಜೆಟ್‌ಗಳು, ಎಲ್‌ಒಸಿ ದಾಟಿ ಬಾಲಾಕೋಟ್‌ನಲ್ಲಿದ್ದ ಜೈಶ್‌-ಇ- ಮೊಹಮ್ಮದ್‌ ತರಬೇತಿ ಶಿಬಿರದ ಮೇಲೆ ನಡೆಸಿ ಉಗ್ರಗಾಮಿಗಳನ್ನು ಮಟ್ಟಹಾಕುವಲ್ಲಿ ವಾಯು ಪಡೆ ಉತ್ತಮ ಕಾರ್ಯನಿರ್ವಹಿಸಿದೆ.

ಇವರೇ ನಮ್ಮ ಹೀರೋಗಳು :
ಎಫ್-16 ಹೊಡೆದ ಗಟ್ಟಿಗ
ಬಾಲಾಕೋಟ್‌ ದಾಳಿ ಬಳಿಕ ಪಾಕ್‌ ಎಫ್ 16 ಕಾಶ್ಮೀರದೊಳಕ್ಕೆ ನುಗ್ಗಿದ್ದು ಅದನ್ನು ಹಿಮ್ಮೆಟ್ಟಿಸಲು ಅಭಿನಂದನ್‌ ಜಗತ್ತಿನ ಅತೀ ಹಳೆಯ ತಂತ್ರಜ್ಞಾನದ ಮಿಗ್‌ 21 ಜತೆಗೆ ಹೋಗಿದ್ದರು. ಒಂದು ವಿಮಾನ ಹೊಡೆದುರುಳಿಸುವ ವೇಳೆ ಮಿಗ್‌ ಮೇಲೆ ದಾಳಿಯಾಗಿದ್ದು ಪಾಕ್‌ ಗಡಿಯೊ ಳಗೆ ಪತನವಾಗಿತ್ತು. ಈ ವೇಳೆ ಅಭಿನಂದನ್‌ ಸೆರೆ ಸಿಕ್ಕಿದ್ದು, ಬಳಿಕ ಬಿಡುಗಡೆಗೊಂಡಿದ್ದರು. ಅಭಿನಂದನ್‌ ಅವರ 51ನೇ ಸ್ಕ್ವಾಡ್ರನ್‌ಗೆ ಘಟಕ ಪ್ರಶಸ್ತಿ ನೀಡಲಾಗುತ್ತಿದೆ.

ಕಾರ್ಗಿಲ್‌ ಹೋರಾಟಗಾರ
1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾಗವಹಿಸಿದ್ದ ಗ್ರೂಪ್‌ ಕ್ಯಾಪ್ಟನ್‌ ಕಂಬಾಪಾಟಿ ನಚಿಕೇತ್‌ ರಾವ್‌ ನಿರ್ವಹಿಸುತ್ತಿದ್ದ ವಿಮಾನ ತಾಂತ್ರಿಕ ವೈಫ‌ಲ್ಯದಿಂದ ಪತನಗೊಂಡು ಪಾಕ್‌ ಸೈನಿಕರ ಪಾಲಾಗಿದ್ದರು. ಪಾಕ್‌ನಲ್ಲಿ 8ದಿನಗಳ ಸೆರೆವಾಸವನ್ನು ಅವರು ಅನುಭವಿಸಿದ್ದರು. ಬಳಿಕ ಅಂತಾರಾಷ್ಟ್ರೀಯ ಕಾನೂನಿಗೆ ತಲೆ ಬಾಗಿದ ಪಾಕ್‌ ಅವರನ್ನು ವಾರದ ಬಳಿಕ ಅಂತಾರಾಷ್ಟ್ರೀಯ ರೆಡ್‌ ಕ್ರಾಸ್‌ ಕಮಿಟಿ ಮೂಲಕ ಅಟ್ಟಾರಿ ಗಡಿಯಲ್ಲಿ ಭಾರತಕ್ಕೆ ಕಳುಹಿಸಿಕೊಟ್ಟಿತ್ತು.

ಏರ್‌ ಚೀಫ್ ಮಾರ್ಷಲ್‌
ಏರ್‌ ಚೀಫ್ ಮಾರ್ಷಲ್‌ ಆಗಿದ್ದ ಏಕೈಕ ಅಧಿಕಾರಿ. 1965ರ ಪಾಕ್‌ ವಿರುದ್ಧದ ಯುದ್ಧದ ಸಂದರ್ಭ ಇವರು ಚೀಫ್ ಆಫ್ ಏರ್‌ ಸ್ಟಾಫ್ ಆಗಿದ್ದರು. 1996ರಲ್ಲಿ ಇವರನ್ನು ಏರ್‌ ಚೀಫ್ ಮಾರ್ಷಲ್‌ ಹುದ್ದೆಗೆ ನೇಮಿಸಲಾಯಿತು.ಐಎಎಫ್ ಆಫಿಸರ್‌ ಹುದ್ದೆಯಿಂದ ಏರ್‌ ಚೀಫ್ ಮಾರ್ಷಲ್‌ ಹುದ್ದೆಗೆ ಭರ್ತಿಗೊಂಡ ಮೊದಲ ಅಧಿಕಾರಿಯಾಗಿ ಅರ್ಜುನ್‌ ಸಿಂಗ್‌. 5 ಸ್ಟಾರ್‌ಗಳನ್ನು ಇವರು ಹೊಂದಿ ದ್ದರು. ಇದು ಫೀಲ್ಡ್‌ ಮಾರ್ಷಲ್‌ ಹುದ್ದೆಗೆ ಸಮ.

ಪರಮವೀರ ಚಕ್ರದ ಹೆಗ್ಗಳಿಕೆ
ಪರಮ ವೀರ ಚಕ್ರ ದೇಶದ ಅತೀ ದೊಡ್ಡ ಪುರಸ್ಕಾರ. ಈ ಪುರಸ್ಕಾರಕ್ಕೆ ಭಾಜನರಾದ ಏಕೈಕ ವಾಯುಸೇನೆ ಸಿಬಂದಿ ನಿರ್ಮಲ್‌ ಜಿತ್‌ ಸಿಂಗ್‌ ಸೆಖಾನ್‌. 1971ರ ಇಂಡೋ-ಪಾಕ್‌ ಯುದ್ಧದಲ್ಲಿ ಪಾಕ್‌ ತಂತ್ರಗಳನ್ನು ದಿಟ್ಟವಾಗಿ ಎದುರಿಸಿ ಪಾಕ್‌ಗೆ ಸಿಂಹಸ್ವಪ್ನವಾಗಿದ್ದರು. ಅವರ ದಿಟ್ಟ ಸಾಹಸದ ಹೊರತಾಗಿಯೂ ಯುದ್ಧದಲ್ಲಿ ಬಲಿಯಾಗಿದ್ದರು. ಪಂಜಾಬ್‌ನಲ್ಲಿ ಇಂದು ನಿರ್ಮಲ್‌ ಅವರ ಸ್ಮಾರಕದ ಜತೆಗೆ ಅವರು ಬಳಸಿದ್ದ ವಿಮಾನವನ್ನೂ ಇಡಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ