ಭಾರತದ ಜಿಡಿಪಿ ದರ ಯಥಾಸ್ಥಿತಿ
Team Udayavani, Mar 1, 2017, 3:50 AM IST
ಹೊಸದಿಲ್ಲಿ: ನೋಟು ಅಪಮೌಲ್ಯದ ಬಳಿಕ ದೇಶದ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂಬ ಬಹುತೇಕರ ಲೆಕ್ಕಾಚಾರ ಉಲ್ಟಾ ಆಗಿದೆ.
2016ರ ಕೊನೆಯ ಮೂರು ತಿಂಗಳಲ್ಲಿ ಅಂದರೆ, ಅಪಮೌಲ್ಯದ ವೇಳೆ ಜಿಡಿಪಿಯಲ್ಲಿ ಅಷ್ಟೇನೂ ಕುಸಿತ ಕಂಡುಬಂದಿಲ್ಲ. ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ. 7ರಷ್ಟು ದಾಖಲಾಗಿರುವ ಬಗ್ಗೆ ಕೇಂದ್ರ ಅಂಕಿಅಂಶ ಕಾರ್ಯಾಲಯ ಮಾಹಿತಿ ಹೊರಹಾಕಿದೆ. ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ ಎಂಬ ಹೆಗ್ಗಳಿಕೆಯನ್ನು ಹಾಗೆಯೇ ಉಳಿಸಿಕೊಂಡಿದೆ.
ಲೆಕ್ಕಾಚಾರ ಉಲ್ಟಾ: ನೋಟು ನಿಷೇಧದಿಂದ ಮಾರುಕಟ್ಟೆ ತಲ್ಲಣಗೊಂಡಾಗ ಆರ್ಬಿಐನ ಸರ್ವೆ ಪ್ರಕಾರ ಜಿಡಿಪಿ ಶೇ. 6.9 ದಾಖಲಾಗಬೇಕಿತ್ತು. ಅಲ್ಲದೆ ವಾರ್ಷಿಕ ಜಿಡಿಪಿ ಶೇ. 6.5ಕ್ಕೆ ಕುಸಿತ ಕಾಣಬೇಕಿತ್ತು. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸರ್ವೆಯು ಜಿಡಿಪಿ ಶೇ. 6.6 ತಗ್ಗುತ್ತದೆ ಎಂದು ಅಂದಾಜಿಸಿತ್ತು. ಆದರೆ, ಕೇಂದ್ರದ ಈ ವರದಿ ಆರ್ಥಿಕ ಪಂಡಿತರ ಲೆಕ್ಕಾಚಾರವನ್ನೂ ಹುಸಿಯಾಗಿಸಿದೆ.
ಏರಿಕೆ ಎಲ್ಲಿ?: ಕೃಷಿ, ಅರಣ್ಯ, ಮೀನುಗಾರಿಕೆ ಯಲ್ಲಿನ ಶೇ. 4.4ರಷ್ಟು ಪ್ರಗತಿ ಇಡೀ ಜಿಡಿಪಿ ಯನ್ನು ಸಮದೂಗಿಸಿದೆ ಎಂದು ಕಾರ್ಯಾಲಯದ ವರದಿ ಹೇಳಿದೆ.