ಸ್ಪೈಸ್ ಜೆಟ್ ತಾಂತ್ರಿಕ ತೊಂದರೆ: ನಾಗಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
Team Udayavani, May 11, 2019, 10:52 AM IST
ನಾಗ್ಪುರ : ದಿಲ್ಲಿಗೆ ಹೋಗಲಿದ್ದ ಸ್ಪೈಸ್ ಜೆಟ್ ವಿಮಾನವೊಂದು ತಾಂತ್ರಿಕ ತೊಂದರೆಗಳ ಕಾರಣ ಇಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಕನಿಷ್ಠ 150 ಪ್ರಯಾಣಿಕರು ಕಳೆದ ಗುರುವಾರ ರಾತ್ರಿಯಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲೇ ಉಳಿದಿದ್ದಾರೆ.
ಸ್ಪೈಸ್ ಜೆಟ್ ವಿಮಾನವು ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿತ್ತು. ಹಾರಾಟದ ನಡುವೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂತು. ಪರಿಣಾಮವಾಗಿ ವಿಮಾನವನ್ನು ನಾಗಪುರ ವಿಮಾನ ನಿಲ್ದಾಣದಲ್ಲಿ ನಸುಕಿನ 1.30ರ ವೇಳೆಗೆ ತುರ್ತಾಗಿ ಇಳಿಸಬೇಕಾಯಿತು. ಹೀಗಾಗಿ ವಿಮಾನದಲ್ಲಿದ್ದ 150 ಪ್ರಯಾಣಿಕರು ಅನಿವಾರ್ಯವಾಗಿ ನಾಗಪುರ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಯಿತು ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.
ಬೆಂಗಳೂರು – ಪುಣೆ ಹಾರಾಟದ ಇನ್ನೊಂದು ಸ್ಪೈಸ್ ಜೆಟ್ ವಿಮಾನ ಆರು ತಾಸುಗಳಿಗೂ ಅಧಿಕ ಕಾಲ ತಡವಾದ ಬೆನ್ನಿಗೇ ಈ ಘಟನೆ ನಡೆದಿದೆ.
180 ಮಂದಿ ಪ್ರಯಾಣಿಕರಿದ್ದ ವಿಮಾನ ಮಧ್ಯಾಹ್ನ 2 ಗಂಟೆಗೆ ಇಲ್ಲಿಂ ಟೇಕಾಫ್ ಆಗುವುದಿತ್ತು. ಆದರೆ ವೇಳಾಪಟ್ಟಿ ಪ್ರಕಟನೆಯ ಫಲಕದಲ್ಲಿ ವಿಮಾನದ ಅಂದಾಜು ನಿರ್ಗಮನ ಸಮಯ ರಾತ್ರಿ 9.30 ಎಂದು ಕಾಣಿಸಲಾಯಿತು. ಪರಿಣಾಮವಾಗಿ ಪ್ರಯಾಣಿಕರು ನಿರ್ವಾಹವಿಲ್ಲದೆ ವಿಮಾನ ನಿಲ್ದಾಣದಲ್ಲಿ ತಾಸು ಗಟ್ಟಲೆ ಕಾಯುವಂತಾಯಿತು.