ಕಾಶ್ಮೀರದಲ್ಲಿ ಕರ್ಫ್ಯೂ ಇಲ್ಲ, ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ; ರಾಜ್ಯಸಭೆಗೆ ಶಾ ವರದಿ
Team Udayavani, Nov 20, 2019, 2:56 PM IST
ನವದೆಹಲಿ: ಕಾಶ್ಮೀರದಲ್ಲಿ ಕರ್ಫ್ಯೂವನ್ನು ತೆಗೆದುಹಾಕಲಾಗಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಕಾಶ್ಮೀರದ ಸ್ಥಿತಿಗತಿ ಕುರಿತ ವರದಿಯನ್ನು ಶಾ ಮೇಲ್ಮನೆಯಲ್ಲಿ ಪ್ರಸ್ತುತಪಡಿಸಿದ್ದರು. ಕಣಿವೆ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿರುವುದನ್ನು ಶಾ ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡರು. ಈ ನಿರ್ಧಾರದ ಬಗ್ಗೆ ಸ್ಥಳೀಯ ಆಡಳಿತ ಪುನರ್ ವಿಮರ್ಶಿಸಲಿದೆ ಎಂದರು.
ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸುವ ಬಗ್ಗೆ ಆದಷ್ಟು ಶೀಘ್ರವಾಗಿ ಸ್ಥಳೀಯ ಆಡಳಿತಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಾ ತಿಳಿಸಿದರು. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ಬಗ್ಗೆ ಜಮ್ಮು-ಕಾಶ್ಮೀರದ ಅಧಿಕಾರಿಗಳೇ ನಿರ್ಧಾರ ಕೈಗೊಂಡಿದ್ದರು.
ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನದ ಚಟುವಟಿಕೆ ಸಕ್ರಿಯವಾಗಿದೆ. ಭದ್ರತೆಯ ದೃಷ್ಟಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಒಂದು ವೇಳೆ ಇಂಟರ್ನೆಟ್ ಸೇವೆ ಆರಂಭಿಸಬಹುದು ಎಂದು ಸ್ಥಳೀಯ ಆಡಳಿತಕ್ಕೆ ಮನವರಿಕೆಯಾದರೆ, ಆ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾ ವಿವರಣೆ ನೀಡಿರುವುದಾಗಿ ವರದಿ ತಿಳಿಸಿದೆ.