ಹುಟ್ಟಿದಾಗ ಎತ್ತಿಕೊಂಡಿದ್ದ ದಾದಿ ಭೇಟಿಯಾದ ರಾಹುಲ್‌

Team Udayavani, Jun 10, 2019, 6:00 AM IST

ಕಲ್ಲಿಕೋಟೆ: 49 ವರ್ಷಗಳ ಹಿಂದೆ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವೊಂದನ್ನು ಎರಡೂ ಕೈಯ್ಯಲ್ಲಿ ಎತ್ತಿಕೊಂಡು, “ನನ್ನ ಕೈಯ್ಯಲ್ಲಿರುವುದು ಇಂದಿರಾ ಗಾಂಧಿಯ ಮೊಮ್ಮಗ’ ಎಂದು ಸಂತೋಷಪಟ್ಟಿದ್ದ ಆಕೆಯ ಮುಂದೆ ಈಗ ಅದೇ ಮಗು ದೊಡ್ಡವನಾಗಿ ಬಂದು ನಿಂತಾಗ ಹೇಗಾಗಿರಬೇಡ?

ಹೌದು, ಇಂತಹ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದ್ದು ಕೇರಳದ 72 ವರ್ಷ ವಯಸ್ಸಿನ ನಿವೃತ್ತ ನರ್ಸ್‌ ರಾಜಮ್ಮ ವವಾತಿಲ್‌. ವಯನಾಡ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ರವಿವಾರ ಕಲ್ಲಿಕೋಟೆಯ ತಮ್ಮ ಅತಿಥಿಗೃಹದಲ್ಲಿ ರಾಜಮ್ಮ ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾಗಿ, ಕೆಲ ಕಾಲ ಅವರೊಂದಿಗೆ ಕಳೆದರು.

1970ರ ಜೂ. 19ರಂದು ದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ರಾಹುಲ್‌ ಹುಟ್ಟಿದಾಗ ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡವರಲ್ಲಿ ರಾಜಮ್ಮ ಕೂಡ ಒಬ್ಬರು. ಅವರು ಆಗ ಆ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು. ರವಿವಾರ ರಾಜಮ್ಮರನ್ನು ನೋಡುತ್ತಿದ್ದಂತೆ, ಅವರನ್ನು ರಾಹುಲ್‌ ಪ್ರೀತಿಯಿಂದ ಆಲಿಂಗಿಸಿಕೊಂಡರು. ರಾಹುಲ್‌ರನ್ನು ಕಣ್ತುಂಬಿಕೊಂಡ ರಾಜಮ್ಮ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾಹುಲ್‌ಗಾಗಿ ತಾವೇ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಹಲಸಿನಹಣ್ಣಿನ ಚಿಪ್ಸ್‌ ಮತ್ತು ಸಿಹಿತಿಂಡಿಯನ್ನೂ ನೀಡಿದರು.

70ರ ದಶಕದ ಕಥೆಯನ್ನು ರಾಜಮ್ಮ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಂತೆ, ನಗುಮುಖದಲ್ಲೇ ರಾಹುಲ್‌ ಎಲ್ಲವನ್ನೂ ಆಲಿಸಿ, ಕೊನೆಗೆ ಮತ್ತೂಮ್ಮೆ ಭೇಟಿಯಾಗುವ ಭರವಸೆ ನೀಡಿ ದಾದಿಯನ್ನು ಬೀಳ್ಕೊಟ್ಟರು.

ಈ ಹಿಂದೆ ರಾಹುಲ್‌ ಪೌರತ್ವ ವಿವಾದ ಉಂಟಾಗಿದ್ದಾಗ, ರಾಜಮ್ಮ ಅವರು ಕೂಡಲೇ ಪ್ರತಿಕ್ರಿಯಿಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ರಾಹುಲ್‌ ಭಾರತದಲ್ಲೇ ಹುಟ್ಟಿದ್ದು, ಅವರು ಹುಟ್ಟಿದಾಗ ತಾನೇ ಕೈಯ್ನಾರೆ ಅವರನ್ನು ಎತ್ತಿಕೊಂಡಿದ್ದೇನೆ. ಅವರು ಭಾರತೀಯ ಪ್ರಜೆ ಎನ್ನುವುದಕ್ಕೆ ನಾನೇ ಸಾಕ್ಷಿ ಎನ್ನುವ ಮೂಲಕ ಸುದ್ದಿಯಾಗಿದ್ದರು.

ಪ್ರಧಾನಿ ವಿರುದ್ಧ ಆರೋಪ: ತದನಂತರ, ತಿರುವಂಬಾಡಿ ಸಮೀಪದ ಎಂಗಪುಳದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್‌, “ಕೇಂದ್ರ ಸರಕಾರವು ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು. “ಕೇರಳವು ನನಗೆ ವಾರಾಣಸಿಯಷ್ಟೇ ಆಪ್ತ’ ಎಂದು ಶನಿವಾರ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ರಾಹುಲ್‌ ಈ ರೀತಿ ಪ್ರತಿಕ್ರಿಯಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ