ದುಬಾರಿ ಆಶ್ವಾಸನೆಗಳಿಗೆ ಕಡಿವಾಣ ಹಾಕಿ; ಪಕ್ಷಗಳ ಚುನಾವಣಾ ಆಶ್ವಾಸನೆಗಳಿಗೆ ಸುಪ್ರೀಂ’ ಅಸಮಾಧಾನ
ಕೇಂದ್ರ ಸರ್ಕಾರ, ನೀತಿ ಆಯೋಗ, ಆರ್‌ಬಿಐಗೆ ನ್ಯಾಯಪೀಠ ತಾಕೀತು
Team Udayavani, Aug 3, 2022, 9:00 PM IST
ನವದೆಹಲಿ: ಚುನಾವಣಾ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಬೊಕ್ಕಸಕ್ಕೆ ಹೊರೆಯಾಗುವಂಥ ಘೋಷಣೆಗಳನ್ನು ಮಾಡುವುದಕ್ಕೆ ತಡೆ ಹಾಕಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ, ನೀತಿ ಆಯೋಗ, ಕೇಂದ್ರ ಹಣಕಾಸು ಆಯೋಗ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಸೂಚಿಸಿದೆ.
ಈ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರಚಿಸುವಂತೆಯೂ ನಿರ್ದೇಶಿಸಿದೆ.ಕೇಂದ್ರ ಸರ್ಕಾರ, ಚುನಾವಣಾ ಆಯೋಗವು ಈ ಬಗ್ಗೆ ನಾವೇನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಕೂಡದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ. ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರುಳ್ಳ ನ್ಯಾಯಪೀಠ ಹೇಳಿದೆ.
“ಇಂಥ ದುಬಾರಿ ಆಶ್ವಾಸನೆಗಳನ್ನು ನೀಡುವುದನ್ನು ನಿಲ್ಲಿಸಲು ಯಾವುದೇ ರಾಜಕೀಯ ಪಕ್ಷಗಳು ಒಪ್ಪುವುದಿಲ್ಲ ಅಥವಾ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ಮಾಡಲು ಕೂಡ ಅವು ಮನಸ್ಸು ಮಾಡುವುದಿಲ್ಲ. ಹಾಗಾಗಿ, ಸರ್ಕಾರ ಹಾಗೂ ಸಂಬಂಧಪಟ್ಟ ಆರ್ಥಿಕ ಸಂಸ್ಥೆಗಳೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.