ನಕಲಿ ಜಾತಿ ಸರ್ಟಿಫಿಕೆಟ್ ಕೊಟ್ರೆ ನೌಕರಿ ಕಟ್
Team Udayavani, Jul 7, 2017, 3:45 AM IST
ಹೊಸದಿಲ್ಲಿ: ನಕಲಿ ಜಾತಿ ಪ್ರಮಾಣಪತ್ರ ನೀಡಿ ಮೀಸಲು ಸೌಲಭ್ಯದ ಅಡಿಯಲ್ಲಿ ಪಡೆದ ಉದ್ಯೋಗ ಮತ್ತು ಪ್ರವೇಶಾತಿಗೆ ಮಾನ್ಯತೆಯಿಲ್ಲ. ಹೀಗೆ ವಂಚಿಸಿ ಉದ್ಯೋಗ ಪಡೆದವರು ಕಾನೂನಿನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಒಂದೊಮ್ಮೆ ವ್ಯಕ್ತಿಯೊಬ್ಬ ಹಲವು ವರ್ಷಗಳ ಕಾಲ ಸರ್ಕಾರಿ ಉದ್ಯೋಗಿಯಾಗಿದ್ದು, ನಂತರ ಆತ ನಕಲಿ ಜಾತಿ ಪ್ರಮಾಣಪತ್ರ ನೀಡಿ ಉದ್ಯೋಗ ಪಡೆದಿರುವುದು ಸಾಬೀತಾದರೂ, ಆತ ಸರಕಾರಿ ಉದ್ಯೋಗದಲ್ಲಿ ಮುಂದುವರಿಯಬಹುದು ಎಂಬ ಮುಂಬಯಿ ಹೈಕೋರ್ಟ್‌ನ ವಾದವನ್ನು ಸುಪ್ರೀಂನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ನ್ಯಾ| ಡಿ.ವೈ.ಚಂದ್ರಚೂಡ್ ಅವರಿದ್ದ ದ್ವಿ ಸದಸ್ಯ ಪೀಠ ಸಂಪೂರ್ಣವಾಗಿ ಅಲ್ಲಗಳೆದಿದೆ.
ಮುಂಬಯಿ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, “ಯಾವುದೇ ವ್ಯಕ್ತಿ ಎಷ್ಟೇ ವರ್ಷ ಸೇವೆ ಸಲ್ಲಿಸಿರಲಿ. ಆತ ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರಕಾರಿ ಉದ್ಯೋಗ ಪಡೆದಿರುವುದು ಸಾಬೀತಾದ ಕ್ಷಣವೇ ಆತ/ಆಕೆ ಹುದ್ದೆಯಿಂದ ಕೆಳಗಿಳಿಯತಕ್ಕದ್ದು. ಇಂಥವರಿಗೆ ಕಾನೂನಿನಡಿ ತಕ್ಕ ಶಿಕ್ಷೆಯಾಗ ಬೇಕು,’ ಎಂದು ಅಭಿಪ್ರಾಯಪಟ್ಟಿದೆ.