ಪುಲ್ವಾಮಾ: ಸೇನೆಯಿಂದ ಮೂವರು ಲಷ್ಕರ್ ಉಗ್ರರ ಹತ್ಯೆ;6 ಮಂದಿ ಪರಾರಿ
Team Udayavani, Jun 22, 2017, 9:18 AM IST
ಶ್ರೀನಗರ : ಪುಲ್ವಾಮಾ ಜಿಲ್ಲೆಯ ಕಾಕಪೋರಾ ಎಂಬಲ್ಲಿ ಸೇನಾ ಪಡೆ ಬುಧವಾರ ಸಂಜೆಯಿಂದ ಭಾರೀ ಕಾರ್ಯಾಚರಣೆ ನಡೆಸಿ ಮೂವರು ಲಷ್ಕರ್ ಎ ತೋಯ್ಬಾ ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಅಡಗಿದ್ದ 6 ಮಂದಿ ಉಗ್ರರು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆಗಿಳಿದ ಸೇನಾ ಪಡೆಗಳಿಗೆ ಸ್ಥಳೀಯ ಕೆಲ ಯುವಕರು ಕಲ್ಲು ತೂರಾಟ ನಡೆಸಿ ಅಡ್ಡಿ ಪಡಿಸಿದ್ದು, ಇದೇ ವೇಳೆ 6 ಮಂದಿ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.
ಹತ್ಯೆಗೀಡಾಗದ ಉಗ್ರರ ಬಳಿಯಿದ್ದ 3 ಎಕೆ 47 ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರ ವಿರುದ್ಧ ಸಿಆರ್ಪಿಎಫ್,ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಪರಾರಿಯಾದ ಉಗ್ರರಿಗಾಗಿ ಭಾರೀ ಶೋಧ ನಡೆಸಲಾಗುತ್ತಿದೆ.