ನರೇಂದ್ರ ಮೋದಿ, ಯಾರೂ ನೋಡದ ಹಾದಿ…

Team Udayavani, May 30, 2019, 11:12 AM IST

ನಮ್ಮ- ನಿಮ್ಮ ಅಂದಾಜಿಗೂ ನಿಲುಕದ ಪ್ರಚಂಡ ಶಕ್ತಿ ನರೇಂದ್ರ ಮೋದಿ. ದೇಶಕ್ಕಿಂತ ಧ್ಯಾನ ಬೇರೆಯಿಲ್ಲ ಎನ್ನುವ ಈ ಸಂತ, ಇಂದು ರಾಜಕೀಯರಂಗದ ಮೇರುದೊರೆ. ನಿತ್ಯ 20 ತಾಸು ದೇಶಕ್ಕಾಗಿ ದುಡಿದರೂ ದಣಿಯದ ಧಣಿ, ದನಿ. ತಮ್ಮ ಬಗ್ಗೆ ಅಷ್ಟೇನೂ ಹೇಳಿಕೊಳ್ಳದೆ ಇದ್ದರೂ ಮೋದಿ ಅವರ ಬದುಕನ್ನು ಹತ್ತಿರದಿಂದ ನೋಡುವ ಪ್ರಯತ್ನಗಳನ್ನು ಮಾಹಿತಿ ಲೋಕ ಈಗಾಗಲೇ ಮಾಡಿ ಆಗಿದೆ. ಮೋದಿ ಬದುಕಿನ ಆ19 ವಿಸ್ಮಯಗಳು, ಮೋದಿ ಮುಂದಿನ 24 ವಿಜನ್ನುಗಳು ಈ ಮೋದಿಯುಗ-2ರ (2019-24) ಹೊಸ್ತಿಲಲ್ಲಿ ಕೂಡಿಕೊಂಡಾಗ, ಕಂಡದ್ದಿಷ್ಟು…

ಹಣ ಇದ್ದಿದ್ರೆ, ಸೈನ್ಯ ಸೇರಿದ್ರು…
ಬಾಲಕ ಮೋದಿಯ ಕೈಯಲ್ಲಿ ಅಂದು ಹಣವಿರುತ್ತಿದ್ದರೆ, ಅವರು ಸೈನಿಕರಾಗಿರ್ತಿದ್ದರು. ಮೋದಿ, ಬಾಲ್ಯದಲ್ಲಿ ಭಾರತೀಯ ಸೇನೆ ಸೇರುವ ಕನಸನ್ನಿಟ್ಟುಕೊಂಡು, ಜಾಮ್‌ನಗರ ಸನಿಹದ ಸೈನಿಕ್‌ ಶಾಲೆಗೆ ಸೇರಬಯಸಿದ್ದರು. ಆದರೆ, ಶಾಲಾ ಶುಲ್ಕ ಭರಿಸುವಷ್ಟು ಶ್ರೀಮಂತಿಕೆ ಅವರ ಮನೆಯಲ್ಲಿ ಇದ್ದಿರಲಿಲ್ಲ.

ಹಿಮಾಲಯದ ದಿವ್ಯಶಕ್ತಿ

17ನೇ ವಯಸ್ಸಿಗೇ, ಮದುವೆ ಪ್ರಸ್ತಾವ ಬಂದಾಗ, ಮನೆಬಿಟ್ಟು, ದೇಶ ಸುತ್ತಲು ಹೊರಟರು. ಭಾರತದ ವೈವಿಧ್ಯ ಸಂಸ್ಕೃತಿಯ ಜನರೊಂದಿಗೆ ಬೆರೆತ ಅಪರೂಪದ ಅನುಭವ ಸಂಪಾದಿಸಿದರು. ಹಿಮಾಲಯದಲ್ಲಿ 2 ವರ್ಷ ಸಾಧು- ಸಂತರೊಂದಿಗೆ ಕಳೆದ ದಿವ್ಯಶಕ್ತಿ, ಇವತ್ತಿಗೂ ಅವರನ್ನು ಕಾಪಾಡುತ್ತಿದೆ.

ಏಕಾಂತಪ್ರಿಯ
ಮೋದಿ ಏಕಾಂತಪ್ರಿಯ. 1995ರ ಸುಮಾರಿನಲ್ಲಿ ಅವರು ಗಿರ್‌ ಅರಣ್ಯಧಾಮದಲ್ಲೇ ಕಳೆದಿದ್ದರು. ಇಂದಿಗೂ ಅವರ ಅಧಿಕೃತ ನಿವಾಸದ ಒಳಗೆ ಕುಟುಂಬದ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ಅವರ ತಾಯಿಯೂ ಇದುವರೆಗೆ ಬಂದಿಲ್ಲ.

ಸೈನಿಕರ ಕೈಗೆ ಚಹಾ ಬಟ್ಟಲಿಟ್ಟರು…
ಮೋದಿ, ಬಾಲ್ಯದಲ್ಲಿ ಗುಜರಾತಿನ ವಡ್ನಾಗರ್‌ ರೈಲ್ವೇ ಸ್ಟೇಷನ್‌ನಲ್ಲಿ ಚಹಾ ಮಾರುತ್ತಿದ್ದರು. 1965ರಲ್ಲಿ ಭಾರತ- ಪಾಕ್‌ ಯುದ್ಧದ ವೇಳೆ, ರೈಲ್ವೇ ಸ್ಟೇಷನ್‌ನಲ್ಲಿ ಇಳಿದಂಥ ಸೈನಿಕರಿಗೆ ಬೆಚ್ಚಗಿನ ಚಹಾ ಕೊಟ್ಟಿದ್ದರು.

ಮನೆ ಬಾಗಿಲಿಗೆ ಅಮೆರಿಕ ವೀಸಾ
ಗುಜರಾತ್‌ನ ನರಮೇಧ ಪ್ರಕರಣ ಸಂಬಂಧ ಅಮೆರಿಕ, ಮೋದಿಗೆ ವೀಸಾ ನಿರಾಕರಿಸಿತ್ತು. ಯಾವಾಗ ಬಿಜೆಪಿ ಭರ್ಜರಿ ಬಹುಮತ ಗಳಿಸಿ, ಮೋದಿ ಪ್ರಧಾನಿ ಅಂತ ಘೋಷಿಸಿತೋ ಅಮೆರಿಕ ತನ್ನ ನಿರ್ಬಂಧ ಹಿಂದೆಗೆದುಕೊಂಡಿತು.

ಸಾವಿರ ರೂ.ರಹಸ್ಯ
ಮೋದಿ ಅವರಿಗೆ ಈಗಲೂ ಅವರ ತಾಯಿ  ಪ್ರೀತಿಯಿಂದ ಹಣ ನೀಡುತ್ತಾರಂತೆ. “ನಾನು ಅವರನ್ನು ಪ್ರತಿ ಸಲ ಭೇಟಿಯಾದಾಗಲೂ 1 ಸಾವಿರ ರೂ. ಕೊಡುತ್ತಾರೆ’ ಎಂದು ತೀರಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಗುಜರಾತ್‌ನ ಸಿಎಂ ಆದ ಮೊದಲ ದಿನ ಅವರ ತಾಯಿ, “ಮಗಾ… ಲಂಚ ತಗೋಬಾದ್ದು’ ಎಂದು ಕಿವಿಮಾತು ಹೇಳಿದ್ದರು.

ಮೊದಲಿಗೆ ಅಮ್ಮನ ಆಶೀರ್ವಾದ
ಪ್ರತಿ ಒಳ್ಳೇ ಕೆಲಸದ ಮೊದಲು, ಮೋದಿ ತಮ್ಮ ತಾಯಿಯನ್ನು ಭೇಟಿ ಆಗ್ತಾರೆ. ಮೊದಲ ಬಾರಿಗೆ ಪ್ರಧಾನಿ ಆಗುವ ಮುನ್ನ, ವಾರಾಣಸಿಗೆ ಸ್ಪರ್ಧೆಗಿಳಿಯುವ ಮೊದಲು, ಈಗ ಅವರು ಪ್ರಮಾಣ ವಚನಕ್ಕೂ ಮೊದಲು ತಾಯಿಯನ್ನು ಭೇಟಿಯಾಗಿದ್ದು ಸ್ಮರಿಸಬಹುದು.

8ಕ್ಕೇ ಆರೆಸ್ಸೆಸ್‌ ನಂಟು
ಮೋದಿ “ನಮಸ್ತೇ ಸದಾ ವತ್ಸಲೇ..’ ಎಂದು ಆರೆಸ್ಸೆಸ್‌ನ ಪ್ರಾರ್ಥನೆ ಹೇಳುವಾಗ, ಅವರಿಗೆ ಕೇವಲ 8 ವರ್ಷ. ಲಕ್ಷ್ಮಣ್‌ರಾವ್‌ ಇನಾಮ್‌ದಾರ್‌ ಎನ್ನುವವರು, ಮೋದಿಯನ್ನು “ಬಾಲ ಸ್ವಯಂ ಸೇವಕ್‌’ ಎಂದು ಮೊದಲ ದಿನ ಶಾಖೆಯ ಮಂದಿಗೆ ಪರಿಚಯಿಸಿದ್ದರು.

ಭಾಷಣವೇಕೆ ಸೂಪರ್‌ ಹಿಟ್‌?
ಗುಜರಾತಿ ಮತ್ತು ಹಿಂದಿಯನ್ನು ಚೆನ್ನಾಗಿ ಬಲ್ಲ ಮೋದಿ ಅವರು ಇಂಗ್ಲಿಷ್‌ನಲ್ಲಿ ಸ್ವಲ್ಪ ಹಿಂದೆ. ಆದರೂ, ಅವರು ಅದನ್ನು ಸಾರ್ವಜನಿಕ ಭಾಷಣಗಳ ವೇಳೆ ತೋರಿಸಿಕೊಳ್ಳೋದಿಲ್ಲ. ಅಮೆರಿಕದ ವಿವಿಯಿಂದ ಕಲಿತ “ಸಾರ್ವಜನಿಕ ಸಂಬಂಧ’ ಕುರಿತ ಕೋರ್ಸ್‌ನಿಂದ ಭಾಷಣ ಕಲೆ ಗಟ್ಟಿಮಾಡಿಕೊಂಡರು.

ಅರ್ಧ ತೋಳಿನ ಕುರ್ತವೇ ಏಕೆ?
ಮೋದಿ ಏಕೆ ಮೊದಲಿಂದಲೂ ಅರ್ಧ ತೋಳಿನ ಕುರ್ತ ಹಾಕ್ತಾರೆ ಅಂದ್ರೆ, ಅದಕ್ಕೆ 2 ಕಾರಣ. ಒಗೆಯಲು ಸುಲಭ ಆಗ್ಬೇಕು, ಬ್ಯಾಗ್‌ನೊಳಗೆ ಸರಳವಾಗಿ ಹಿಡೀಬೇಕು ಅನ್ನೋದು. ಅರ್ಧ ತೋಳಿನ ಕುರ್ತದ ಈ ಸಿಗ್ನೇಚರ್‌ ಹಿಂದೆ, ಅಹ್ಮದಾಬಾದ್‌ನ ವಸ್ತ್ರವಿನ್ಯಾಸಕರಾದ ಬಿಪಿನ್‌ ಮತ್ತು ಜಿತೇಂದ್ರರ ಕೈಚಳಕವಿದೆ.

ನರೇಂದ್ರನಿಗೆ ನರೇಂದ್ರನೇ ಮಾದರಿ
ಮೋದಿ ಅವರಿಗೆ ವಿವೇಕಾನಂದ ಅವರೇ ಮಾದರಿ. ವಿವೇಕಾನಂದರ ಅಷ್ಟೂ ಕೃತಿಗಳನ್ನು ಓದಿರುವ ಮೋದಿ, ಯೌವನದ ದಿನಗಳಲ್ಲಿ ಕನ್ಯಾಕುಮಾರಿಗೆ ನಿರಂತರ ಪ್ರವಾಸ ಕೈಗೊಳ್ಳುತ್ತಿದ್ದರು.

ಅಚ್ಚರಿಯ ದಿನಚರಿ

ಬೆಳಗ್ಗೆ 5.30ಕ್ಕೆ ಯೋಗದಿಂದಲೇ ದಿನದ ಆರಂಭ. ಮೋದಿ ನಿದ್ರಿಸುವುದೇ ಕೇವಲ ಮೂರೂವರೆ, ನಾಲ್ಕು ತಾಸು! ಅವರೇ ಹೇಳಿದಂತೆ ನಿತ್ಯವೂ 20 ತಾಸು ದೇಶಕ್ಕಾಗಿ ಕೊಡ್ತಾರೆ. ಮಲಗಿದ 30 ಸೆಕೆಂಡುಗಳಲ್ಲಿ ಭರ್ಜರಿ ನಿದ್ದೆಗೆ ಜಾರುತ್ತಾರಂತೆ.

ಫೋಟೋ ಟೆಕ್ನಿಕ್‌ ಬಲ್ಲ ಜಾಣ
ಮೋದಿ ಅವರ ಫೋಟೋ ಪೋಸುಗಳು ಬಲು ಚರ್ಚಿತ. ಆದರೆ, ನಿಮ್ಗೆ ಗೊತ್ತೇ? ಸ್ವತಃ ಮೋದಿ ಅವರೇ ಒಬ್ಬ ಅದ್ಭುತ ಕೆಮರಾಮನ್‌. ಫೋಟೋಗ್ರಫಿಯಲ್ಲಿ ಲೇಟೆಸ್ಟ್‌ ಟೆಕ್ನಿಕ್‌ಗಳನ್ನು ಬಲ್ಲ ಜಾಣ. ಗುಜರಾತ್‌ನ ಸಿಎಂ ಆಗುವ ಮೊದಲು, ಯಾರಾದ್ರೂ, ಅಲ್ಲೊಂದು ಬೆಟ್ಟ- ಕಾಡು ಇದೆ ಅಂತೆಳಿದ್ರೆ, ಕೆಮರಾ ತಗೊಂಡು ಹೋಗುತ್ತಿದ್ದ ಉತ್ಸಾಹಿ. ಕೈಲಾಸ ಮಾನಸಯಾತ್ರೆ ವೇಳೆ ಅವರು ತೆಗೆದ ಚಿತ್ರಗಳಿಗೆ, ನುರಿತ ಫೋಟೋಗ್ರಾಫ‌ರ್‌ಗಳೇ ಸ್ಟನ್‌ ಆಗಿದ್ದಾರೆ. ಹಲವು ಚಿತ್ರಗಳು ಪ್ರದರ್ಶನ ಕಂಡಿವೆ.

ಹುಷಾರು, ನಿಮ್ಮನ್ನೂ ಮೀರಿಸ್ತಾರೆ…
ಇನ್ನೊಬ್ಬರ ಟ್ಯಾಲೆಂಟ್‌ಗೆ ಬೇಗನೆ ಸವಾಲೊಡ್ಡುವ ಶಕ್ತಿಯೂ ಮೋದಿ ಅವರಿಗಿದೆ. ಅವರು ಜಪಾನ್‌ ಪ್ರವಾಸದಲ್ಲಿದ್ದಾಗ, ಟೊಕಿಯೋದಲ್ಲಿ ಟಿಸಿಎಸ್‌, ಡ್ರಮ್ಮರ್‌ಗಳಿಗೆ ಸ್ಪರ್ಧೆ ಆಯೋಜಿಸಿತ್ತು. ಪ್ರಖ್ಯಾತ ಡ್ರಮ್‌ ವಾದಕರ ಪ್ರದರ್ಶನವನ್ನು 30 ನಿಮಿಷ ತಾಳ್ಮೆಯಿಂದ ನೋಡಿದ ಮೋದಿ, ಕೊನೆಗೇ ತಾವೇ ಡ್ರಮ್‌ ಬಾರಿಸಿ, ಅಚ್ಚರಿ ಸೃಷ್ಟಿಸಿದ್ದರು.

ರಾಜೇಶ್‌ ಖನ್ನಾ ಸ್ಟೈಲು
ಬಾಲಿವುಡ್‌ನ‌ ರಾಜೇಶ್‌ ಖನ್ನಾ ಇವರ ಸ್ಟೈಲ್‌ಗ‌ುರು. ಕುರ್ತಾದ ಬಟನ್‌ಗಳನ್ನು ಕುತ್ತಿಗೆ ವರೆಗೂ ಹಾಕಿಕೊಂಡ್ರೇನೇ ಚೆಂದ ಅಂತಾರೆ ಮೋದಿ. ನೆಹರೂ ಜಾಕೆಟ್‌ಗಿಂತ ಮೋದಿ ಜಾಕೆಟ್‌ 2 ಇಂಚು ಉದ್ದ ಇರುತ್ತೆ. ಕೈಗೆ ಕಟ್ಟುವ ವಾಚು, “ಮೊವಾಡೋ’. ಬಳಸುವ ಪೆನ್ನು, ಫೌಂಟೆನ್‌ ಮತ್ತು ಮಾಂಟ್‌ಬ್ಲ್ಯಾಂಕ್‌. ಅದು ಯಾವತ್ತೂ ಮೇಲಿನ ಜೇಬಿನಲ್ಲಿ ಇರಲೇಬೇಕು. ಇವರಿಗೆ ಟೆಕ್ಸಾನ್‌ ಹ್ಯಾಟ್‌ ಅಂದ್ರೆ ಇಷ್ಟ.

ರಜೆ ಇಲ್ಲ, ಕೆಲಸವೇ ಎಲ್ಲ…
ಮೋದಿ ಪ್ರಧಾನಮಂತ್ರಿಯಾಗಿ ಇಲ್ಲಿಯ ತನಕ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಇದು ವಿಶ್ವ ದಾಖಲೆ ಕೂಡ. ಅಷ್ಟೇ ಏಕೆ? ಗುಜರಾತ್‌ ಮುಖ್ಯಮಂತ್ರಿಯಾಗಿ 13 ವರ್ಷಗಳ ಆಳ್ವಿಕೆಯಲ್ಲೂ ವಿರಾಮ ಪಡೆದವರಲ್ಲ. ಅಷ್ಟು ವರ್ಕೋಹಾಲಿಕ್‌.

ಸೋಶಿಯಲ್‌ ಮೀಡಿಯಾ ಪ್ರಧಾನಿ
ಸೋಶಿಯಲ್‌ ಮೀಡಿಯಾದ ಅಷ್ಟೂ ವಿಭಾಗಗಳಲ್ಲಿ ಆ್ಯಕ್ಟಿವ್‌ ಆಗಿರುವ ಭಾರತದ ಮೊದಲ ಪ್ರಧಾನಿ ಮೋದಿ. ಇನ್‌ಸ್ಟಗ್ರಾಮ್‌, ಫೇಸ್‌ಬುಕ್‌, ಟ್ವಿಟ್ಟರ್‌, ಲಂಕ್ಡ್ಇನ್‌, ಸೌಂಡ್‌ ಕೌಡ್‌, ವೀಬೋ, ಗೂಗಲ್‌ ಪ್ಲಸ್‌… ಅಂತರ್ಜಾಲದಲ್ಲೂ ಮೋದಿ ಇಲ್ಲದ ಜಾಗವಿಲ್ಲ.

ಲತಾ ಮಂಗೇಶ್ಕರ್‌  ಅಂದ್ರೆ ಆಯ್ತು…
ಮೋದಿ ಸಂಗೀತಪ್ರಿಯರೂ ಹೌದು. ಅದರಲ್ಲೂ ಲತಾ ಮಂಗೇಶ್ಕರ್‌ ಅವರ ಅಪ್ಪಟ ಅಭಿಮಾನಿ. ಅವರ “ಹೋ ಪವನ್‌ ವೇಗ್‌ ಸೇ…’ ಹಾಡನ್ನು ಸದಾ ಗುನುಗುತ್ತಿರುತ್ತಾರೆ. ದೇವ್‌ ಆನಂದ್‌ ನಟಿಸಿದ “ಗೈಡ್‌’ ಹಿಂದಿ ಸಿನಿಮಾ ಇವರ ಫೇವರಿಟ್‌.

ಮೋದಿಯ ಸಿಗ್ನೇಚರ್‌ ಹೇಳುವುದೇನು?
ಋಜುವಿನ ಮೂಲಕ ವ್ಯಕ್ತಿತ್ವ ಹೇಳುವ “ಗಾಫಾಲಜಿ’ ಪ್ರಕಾರ ಮೋದಿ ಕಾಣುವುದು ಹೀಗೆ…
* ಸುಲಭವಾಗಿ ಓದಲಾಗದಂಥ ಸಿಗ್ನೇಚರ್‌. ದೂರದೃಷ್ಟಿಯ ವ್ಯಕ್ತಿತ್ವ.
* ಮೋದಿಯ ಮನಸ್ಸನ್ನು ಯಾರಿಗೂ ಓದಲಾಗದು.
* ಖಾಸಗಿ ವಿಚಾರಗಳನ್ನು ಬಹಿರಂಗಪಡಿಸುವುದಿಲ್ಲ.
* ಮೊದಲ ಅಕ್ಷರ ರೌಂಡ್‌ನ‌ಲ್ಲಿ ಬರುತ್ತೆ. ಅದರರ್ಥ ಮೋದಿ ವ್ಯಕ್ತಿತ್ವ ಯಾರಿಗೂ ನಿಲುಕದ್ದು. ಬಲು ಚಾಣಾಕ್ಷ.
* ಸಿಗ್ನೇಚರ್‌ನ ಕೊನೆಯಲ್ಲಿ ಬರುವ 2 ಚುಕ್ಕಿ, “ಯಾರ ಹಸ್ತಕ್ಷೇಪ ಬಯಸೋದಿಲ್ಲ’ ಎನ್ನುವ ಸಂದೇಶ ಕೊಡುತ್ತೆ.
* ಜನಹಿತವನ್ನು ಜಪಿಸುವ ಮನುಷ್ಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ