ಭಾರತದಲ್ಲಿ ನೀವೇಕೆ ಹೂಡಿಕೆ ಮಾಡುತ್ತಿಲ್ಲ?: ಉದ್ಯಮಿಗಳಿಗೆ ನಿರ್ಮಲಾ ಪ್ರಶ್ನೆ
Team Udayavani, Sep 14, 2022, 6:30 AM IST
ನವದೆಹಲಿ: ಭಗವಾನ್ ಹನುಮಂತನಂತೆ ನಿಮಗೂ ನಿಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? ಹನುಮಂತನಿಗೆ ಮಾಡಿದಂತೆ ನಿಮಗೂ ಇನ್ನೊಬ್ಬರು ಸಾಮರ್ಥ್ಯವನ್ನು ನೆನಪು ಮಾಡಿಕೊಡಬೇಕೆ? ಹೀಗೆಂದು ಭಾರತೀಯ ಉದ್ಯಮವಲಯವನ್ನು ಪ್ರಶ್ನಿಸಿದ್ದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್.
ವಿದೇಶೀ ಉದ್ಯಮಿಗಳು ಭಾರತದಲ್ಲಿ ಬಂದು ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇತ್ತೀಚೆಗಿನ ಎಫ್ಪಿಐ, ಎಫ್ಡಿಐ ಹರಿವಿನ ಪ್ರಮಾಣದಲ್ಲೇ ಅದು ಗೊತ್ತಾಗುತ್ತಿದೆ. ಆದರೆ ಭಾರತೀಯ ಉದ್ಯಮಿಗಳು ಮಾತ್ರ ಇಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿಲ್ಲ. ಇದೇಕೆ ಹೀಗೆ? ನಿಮ್ಮನ್ನು ತಡೆಯುತ್ತಿರುವ ಶಕ್ತಿಯಾದರೂ ಯಾವುದು? ಸರ್ಕಾರ ನಿಮಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸಿದ್ಧವಿದೆ. ತೆರಿಗೆ ಕಡಿತ ಮಾಡುವುದು, ಇತರೆ ಅಗತ್ಯ ಪ್ರೋತ್ಸಾಹ ನೀಡುವುದನ್ನು ಮಾಡುತ್ತಲೇ ಇದ್ದೇವೆ. ಯಾವುದೇ ನೀತಿ ತನ್ನಷ್ಟಕ್ಕೆ ತಾನೇ ಸಶಕ್ತಗೊಳ್ಳಲು ಸಾಧ್ಯವಿಲ್ಲ. ದಯವಿಟ್ಟು ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ನಿರ್ಮಲಾ ವಿನಂತಿಸಿದ್ದಾರೆ.