ಫ್ರಾನ್ಸ್‌ ಫೆಡ್‌ ಕಪ್‌ ಚಾಂಪಿಯನ್‌

ಆತಿಥೇಯ ಆಸ್ಟ್ರೇಲಿಯ ವಿರುದ್ಧ 3-2 ಅಂತರದ ಗೆಲುವು

Team Udayavani, Nov 11, 2019, 1:39 AM IST

ಮೆಲ್ಬರ್ನ್: ಆತಿಥೇಯ ಆಸ್ಟ್ರೇಲಿಯವನ್ನು 3-2 ಅಂತರದಿಂದ ಮಣಿಸಿದ ಫ್ರಾನ್ಸ್‌ ತಂಡ 2003ರ ಬಳಿಕ ಫೆಡ್‌ ಕಪ್‌ ಟೆನಿಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ 45 ವರ್ಷಗಳ ಬಳಿಕ ಪ್ರಶಸ್ತಿ ಎತ್ತುವ ಕಾಂಗರೂ ಕನಸು ಛಿದ್ರಗೊಂಡಿದೆ.

ನಿರ್ಣಾಯಕ 5ನೇ ಪಂದ್ಯದಲ್ಲಿ ಕ್ರಿಸ್ಟಿನಾ ಲಡೆನೋವಿಕ್‌-ಕ್ಯಾರೋಲಿನಾ ಗಾರ್ಸಿಯಾ ಸೇರಿಕೊಂಡು ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ-ಸಮಂತಾ ಸ್ಟೋಸರ್‌ ವಿರುದ್ಧ 6-4, 6-3 ನೇರ ಸೆಟ್‌ಗಳ ಜಯ ಸಾಧಿಸಿದರು. ಎರಡೂ ತಂಡಗಳು 2-2 ಸಮಬಲ ಸಾಧನೆಯೊಂದಿಗೆ ವನಿತಾ ಡಬಲ್ಸ್‌ ಪಂದ್ಯವನ್ನು ಆಡಲಿಳಿದಿದ್ದವು. ಇದಕ್ಕೂ ಮೊದಲು ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಸಿಂಗಲ್ಸ್‌ ಪಂದ್ಯದಲ್ಲಿ ಲಡೆನೋವಿಕ್‌ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದರು. ಇಲ್ಲಿ ಸೇಡು ತೀರಿಸಿಕೊಳ್ಳುವ ಅವರ ಪ್ರಯತ್ನ ಈಡೇರಲಿಲ್ಲ.

ಇದು ಫ್ರಾನ್ಸ್‌ಗೆ ಒಲಿದ 3ನೇ ಫೆಡ್‌ ಕಪ್‌ ಪ್ರಶಸ್ತಿ. 2003ರಲ್ಲಿ ಕೊನೆಯ ಸಲ ಅಮೆರಿಕವನ್ನು ಮಣಿಸಿ ಚಾಂಪಿಯನ್‌ ಆಗಿತ್ತು.

“ನಾನೀಗ ಈ ವಿಶ್ವದಲ್ಲೇ ಅತ್ಯಂತ ಖುಷಿಯಲ್ಲಿರುವ ವ್ಯಕ್ತಿ. ನನ್ನ ತಂಡ ಹಾಗೂ ವನಿತೆಯರ ಸಾಧನೆಯಿಂದ ನಿಜಕ್ಕೂ ಹೆಮ್ಮೆಯಾಗುತ್ತಿದೆ’ ಎಂದು ಫ್ರಾನ್ಸ್‌ ತಂಡದ ನಾಯಕ ಕೂಲಿಯನ್‌ ಬೆನೆಟೂ ಪ್ರತಿಕ್ರಿಯಿಸಿದ್ದಾರೆ.

ಇನ್ನು ನೂತನ ಮಾದರಿ
ಇದು ಪ್ರಸಕ್ತ ಮಾದರಿಯ ಕಟ್ಟಕಡೆಯ ಫೆಡ್‌ ಕಪ್‌ ಪಂದ್ಯಾವಳಿಯಾಗಿದೆ. ಮುಂದಿನ ವರ್ಷ ಬುಡಾಪೆಸ್ಟ್‌ ನಲ್ಲಿ 12 ತಂಡಗಳು, 6 ದಿನಗಳ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ