ಅಜಯ್‌ ಸಿಂಗ್‌ ಹೊಸ ದಾಖಲೆ

ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌

Team Udayavani, Jul 13, 2019, 5:38 AM IST

ಅಪಿಯಾ (ಸಮೋವ): ಭಾರತೀಯ ವೇಟ್‌ಲಿಫ್ಟರ್‌ ಅಜಯ್‌ ಸಿಂಗ್‌ ಅವರು ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ 22ರ ಹರೆಯದ ಅಜಯ್‌ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ ತನ್ನ ದೇಹತೂಕದ ಎರಡರಷ್ಟು ಭಾರ (190 ಕೆ.ಜಿ.) ಎತ್ತಿ ದಾಖಲೆ ಸ್ಥಾಪಿಸಿದರು. ಈ ಹಿಂದೆ ಏಶ್ಯನ್‌ ಯೂತ್‌ ಮತ್ತು ಜೂನಿಯರ್‌ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಜಯಿಸಿದ್ದ ಅಜಯ್‌ ಸ್ನ್ಯಾಚ್‌ನಲ್ಲಿ 148 ಕೆ.ಜಿ. ಭಾರ ಎತ್ತಿದ್ದರು. ಒಟ್ಟಾರೆ 338 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು.

ಇದು ಅಜಯ್‌ ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೂ ಆಗಿದೆ. ಕಳೆದ ಎಪ್ರಿಲ್‌ನಲ್ಲಿ ಚೀನದಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಅವರು 320 ಕೆ.ಜಿ. ಭಾರತ ಎತ್ತಿದ್ದರು.

ಇದು ಒಲಿಂಪಿಕ್‌ ಅರ್ಹತಾ ಕೂಟವಾದ ಕಾರಣ ಅಜಯ್‌ ಅತೀ ಮುಖ್ಯವಾದ ಅಂಕ ಪಡೆದರು. ಮುಂದಿನ ಆರು ಅರ್ಹತಾ ಕೂಟಗಳಲ್ಲಿ ಲಿಫ್ಟರ್‌ಗಳ ನಿರ್ವಹಣೆಯ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹ ಲಿಫ್ಟರ್‌ಗಳ ಆಯ್ಕೆ ಮಾಡಲಾಗುತ್ತದೆ.
ಇದೇ ಸ್ಪರ್ಧೆಯಲ್ಲಿ ಪಪುಲ್‌ ಚಂಗಮಯಿ 313 ಕೆ.ಜಿ. ಭಾರ ಎತ್ತಿ ಬೆಳ್ಳಿ ಪಡೆದರು. ಕಳೆದ ಫೆಬ್ರವರಿಯಲ್ಲಿ ನಡೆದ ಸೀನಿಯರ್‌ ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ನಲ್ಲಿ ಅವರು ಚಿನ್ನ ಜಯಿಸಿದ್ದರು.

ಅನುರಾಧಗೆ ಚಿನ್ನ
ಪುರುಷರ 87 ಕೆ.ಜಿ. ವಿಭಾಗದಲ್ಲಿ ಪಿ. ಅನುರಾಧ ಅವರು ಒಟ್ಟು 221 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರು. ಕಾಮನ್‌ವೆಲ್ತ್‌ ಚಿನ್ನ ವಿಜೇತ ಆರ್‌ವಿ ರಾಹುಲ್‌ ಅವರು 89 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ