ಬಿಸಿಸಿಐಯನ್ನು ಒಪ್ಪಿಸುವ ತಾಕತ್ತು ಐಸಿಸಿಗಿಲ್ಲ: ವಾಸಿಂ ಅಕ್ರಂ
Team Udayavani, Nov 11, 2017, 6:50 AM IST
ಕರಾಚಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ವಾಗ್ಧಾಳಿ ನಡೆಸಿದ್ದಾರೆ.
ಪಾಕಿಸ್ತಾನದ ಎದುರು ಕ್ರಿಕೆಟ್ ಆಡುವಂತೆ ಭಾರತವನ್ನು ಒಪ್ಪಿಸುವ ತಾಕತ್ತು ಐಸಿಸಿಗಿಲ್ಲ ಎಂದು ಬೌಲಿಂಗ್ ದಂತಕಥೆ ಕಟುವಾಗಿ ಹೇಳಿದ್ದಾರೆ.
ಐಸಿಸಿಗೆ ಬಿಸಿಸಿಐಯನ್ನು ಒಪ್ಪಿಸುವ ಶಕ್ತಿಯಿಲ್ಲ. ನಾನು ಯಾವಾಗಲೂ ಹೇಳುವಂತೆ ಜನರ ನಡುವಿನ ಸಂಪರ್ಕ ಅಗತ್ಯ. ಕ್ರೀಡೆ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿಯೇ ನೋಡಬೇಕು ಎಂದು ಅಕ್ರಂ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತದ ನಡುವಿನ ಪಂದ್ಯ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಆ್ಯಷಸ್ಗಿಂತ ಮಹತ್ವ ಮತ್ತು ತೀವ್ರತೆಯನ್ನು ಹೊಂದಿದೆ. ಆ್ಯಷಸನ್ನು ನೋಡುವುದು 20 ಲಕ್ಷ ಮಂದಿ ಮಾತ್ರ. ಭಾರತ-ಪಾಕ್ ಪಂದ್ಯವನ್ನು 100 ಕೋಟಿ ಮಂದಿ ನೋಡುತ್ತಾರೆ. ಈಗ ಜನರಿಗೆ ಅಂತಹ ರೋಚಕತೆ ತಪ್ಪಿ ಹೋಗಿದೆ ಎಂದು ಅಕ್ರಂ ಧ್ವನಿಯೆತ್ತಿದ್ದಾರೆ.