ವನಿತಾ ಹಾಕಿ ಸರಣಿ: ಭಾರತ ಗೆಲುವಿನ ಆರಂಭ
Team Udayavani, Mar 6, 2018, 6:00 AM IST
ಸಿಯೋಲ್: ಏಶ್ಯನ್ ಚಾಂಪಿಯನ್ ಭಾರತೀಯ ಮಹಿಳಾ ಹಾಕಿ ತಂಡ ದಕ್ಷಿಣ ಕೊರಿಯಾ ವಿರುದ್ಧ 1-0 ಗೋಲುಗಳಿಂದ ಗೆದ್ದು ಕೂಟದಲ್ಲಿ ಶುಭಾರಂಭ ಮಾಡಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತದ ಪರ 5ನೇ ನಿಮಿಷದಲ್ಲೇ ಲಾಲ್‌ರೆಮಿÕಯಾಮಿ ಆಕರ್ಷಕ ಗೋಲೊಂದನ್ನು ಸಿಡಿಸಿ ಭಾರತದ ಗೆಲುವಿನ ರೂವಾರಿಯಾದರು. ಕೊನೆಯ ವರೆಗೂ ಭಾರತ ಈ ಮುನ್ನಡೆ ಯನ್ನು ಉಳಿಸಿಕೊಂಡು ಆತಿಥೇಯರ ಮೇಲೆ ಸವಾರಿ ಮಾಡಿತು. ಎರಡನೇ ಅವಧಿಯಲ್ಲಿ ದಕ್ಷಿಣ ಕೊರಿಯಾ ಹೋರಾಟ ಮಾಡಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಭಾರತಕ್ಕೆ 18ನೇ ಹಾಗೂ 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವೊಂದು ಲಭಿಸಿತಾದರೂ ಇದಕ್ಕೆ ಆತಿಥೇಯ ತಂಡದ ಗೋಲಿ ಮಿಜಿನ್ ಹಾನ್ ಅಮೋಘ ರೀತಿಯಲ್ಲಿ ತಡೆಯೊಡ್ಡಿದರು. ಹಾಗೆಯೇ 23ನೇ ನಿಮಿಷದಲ್ಲಿ ಕೊರಿಯಾಕ್ಕೆ ಲಭಿಸಿದ ಪೆನಾಲ್ಟಿ ಅವಕಾಶಕ್ಕೆ ಸ್ವಾತಿ ಅಡ್ಡಿಯಾಗಿ ಪರಿಣಮಿಸಿದರು.
ಇದು ಸ್ವಾತಿ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾದರೆ, ನಾಯಕಿ ರಾಣಿ ರಾಮ್‌ಪಾಲ್ ಅವರ 200ನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.