ಮುಂದಿನ ಪಂದ್ಯ ನಾನೇ ಗೆಲ್ಲಿಸುವೆ: ಪಂತ್‌

Team Udayavani, May 10, 2019, 6:10 AM IST

ವಿಶಾಖಪಟ್ಟಣ: ಕೊನೆಗೂ ಡೆಲ್ಲಿ ಐಪಿಎಲ್ ನಾಕೌಟ್‌ನಲ್ಲಿ ಗೆಲುವಿನ ಖಾತೆ ತೆರೆದಿದೆ. ಬುಧವಾರ ರಾತ್ರಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ದ್ವಿತೀಯ ಕ್ವಾಲಿಫೈಯರ್‌ ಹಣಾಹಣಿಗೆ ಸಜ್ಜಾಗಿದೆ. ಇಬ್ಬರು ಎಡಗೈ ಆಟಗಾರರಾದ ಪೃಥ್ವಿ ಶಾ ಮತ್ತು ರಿಷಭ್‌ ಪಂತ್‌ ಡೆಲ್ಲಿ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.

ಧನಾತ್ಮಕ ಮನಸ್ಥಿತಿ ಅಗತ್ಯ

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ರಿಷಭ್‌ ಪಂತ್‌, ‘ಇಂಥ ಕಠಿನ ಟ್ರ್ಯಾಕ್‌ನಲ್ಲಿ ಒಮ್ಮೆ ಸೆಟ್ ಆದಿರೆಂದರೆ ನೀವು ಪಂದ್ಯಕ್ಕೆ ಗೆಲುವಿನ ಮುಕ್ತಾಯ ಹಾಡಬೇಕಾಗುತ್ತದೆ. ನಾನೂ ಇದೇ ಹಾದಿಯಲ್ಲಿದ್ದೆ. ಆದರೆ ಕೊನೆಯ ಹಂತದಲ್ಲಿ ಎಡವಿದೆ. ಆದರೆ ಮುಂದಿನ ಸಲ ನಾನೇ ಕೊನೆಯ ತನಕ ನಿಂತು ತಂಡವನ್ನು ಗೆಲ್ಲಿಸುವೆ. ಇದಕ್ಕೆ ಧನಾತ್ಮಕ ಮನಸ್ಥಿತಿ ಅಗತ್ಯ. ಆದರೆ ನಮ್ಮ ಮನಸ್ಥಿತಿ ನಕಾರಾತ್ಮಕವಾಗಿದ್ದರೆ ಏನೂ ಉಪಯೋಗವಿಲ್ಲ’ ಎಂದರು.

162 ರನ್‌ ಚೇಸಿಂಗ್‌ ವೇಳೆ ಡೆಲ್ಲಿಗೆ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದ್ದರು. ಬಳಿಕ ರಿಷಭ್‌ ಪಂತ್‌ ಬಿರುಸಿನ ಆಟದ ಮೂಲಕ ನೆರವಿಗೆ ನಿಂತರು. ಕೊನೆಯ ಹಂತದಲ್ಲಿ ರನ್‌ರೇಟ್ ಹೆಚ್ಚುತ್ತಿದ್ದಾಗ ಬಾಸಿಲ್ ಥಂಪಿ ಅವರ 18ನೇ ಓವರ್‌ನಲ್ಲಿ 22 ರನ್‌ ಬಾರಿಸುವ ಮೂಲಕ ಡೆಲ್ಲಿಯನ್ನು ಮೇಲೆತ್ತಿದರು. ಗೆಲುವಿಗೆ ಇನ್ನೇನು 5 ರನ್‌ ಬೇಕಿದ್ದಾಗ ಪಂತ್‌ ವಿಕೆಟ್ ಉರುಳಿತು. ಕೊನೆಯಲ್ಲಿ ಕೀಮೊ ಪೌಲ್ ಆಕರ್ಷಕ ಬೌಂಡರಿ ಮೂಲಕ ಡೆಲ್ಲಿ ಗೆಲುವು ಸಾರಿದರು.

ರಿಷಭ್‌ ಪಂತ್‌ ಕೇವಲ 21 ಎಸೆತಗಳಿಂದ 49 ರನ್‌ ಸಿಡಿಸಿದರು. 5 ಸಿಕ್ಸರ್‌, 2 ಬೌಂಡರಿ ಈ ಪಂದ್ಯಶ್ರೇಷ್ಠ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು.

ಆಕ್ರಮಣ ಬ್ಯಾಟಿಂಗ್‌ ಅನಿವಾರ್ಯ

‘ಟಿ20 ಕ್ರಿಕೆಟ್‌ನಲ್ಲಿ 20 ಎಸೆತಗಳಿಂದ 40 ರನ್‌ ಅಗತ್ಯವಿದೆ ಎನ್ನುವಾಗ ನೀವು ಬೌಲರ್‌ಗಳ ಮೇಲೆ ಆಕ್ರಮಣ ಮಾಡಲೇಬೇಕಾಗುತ್ತದೆ. ಬೌಲರ್‌ ಯಾರು ಎಂಬ ಬಗ್ಗೆ ನಾನು ಚಿಂತಿಸುವುದಿಲ್ಲ. ಅಂಥ ಹೊಡೆತಗಳು ನಮಗೆ ಆಯಾಚಿತವಾಗಿ ಅಭ್ಯಾಸವಾಗಿರುತ್ತವೆ. ಇದು ಕಠಿನ ಅಭ್ಯಾಸದ ಫ‌ಲ. ಇಂದು ನಾನು ಭಾರೀ ಬಿರುಸಿನ ಹೊಡೆತಕ್ಕೇನೂ ಮುಂದಾಗಲಿಲ್ಲ. ಚೆಂಡನ್ನು ಎಚ್ಚರಿಕೆಯಿಂದ ಗಮನಿಸಿ ಉತ್ತಮ ಟೈಮಿಂಗ್ಸ್‌ ಮೂಲಕ ಬಡಿದಟ್ಟಿದೆ’ ಎಂದು ಪಂತ್‌ ತಮ್ಮ ಆಟದ ರೀತಿಯನ್ನು ಬಣ್ಣಿಸಿದರು.

ತಂಡವಿರಿಸಿದ ವಿಶ್ವಾಸಕ್ಕೆ ಋಣಿ: ಶಾ

ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದ ಪೃಥ್ವಿ ಶಾ, ತಂಡ ತನ್ನ ಮೇಲಿರಿಸಿದ ವಿಶ್ವಾಸಕ್ಕೆ ಋಣಿ ಎಂಬುದಾಗಿ ಹೇಳಿದ್ದಾರೆ. ‘ನನ್ನ ಇಂದಿನ ಸಾಧನೆಯನ್ನು ಇಡೀ ತಂಡಕ್ಕೆ ಅರ್ಪಿಸುವೆ. ಕಳೆದ ಕೆಲವು ಪಂದ್ಯಗಳಲ್ಲಿ ನಾನು ತೀವ್ರ ರನ್‌ ಬರಗಾಲದಲ್ಲಿದ್ದೆ. ಆದರೂ ತಂಡ ನನ್ನ ಮೇಲೆ ನಂಬಿಕೆ ಇರಿಸಿತು. ಇದನ್ನು ಉಳಿಸಿಕೊಳ್ಳುವಂಥ ಪ್ರದರ್ಶನವೊಂದನ್ನು ನೀಡಬೇಕಿತ್ತು. ಇಂದು ಇದು ಸಾಧ್ಯವಾಗಿದೆ. ಎಲ್ಲ ಸಹಾಯಕ ಸಿಬಂದಿಗೆ, ಆಟಗಾರರಿಗೆ ಮತ್ತು ತರಬೇತುದಾರರಿಗೆ ಕೃತಜ್ಞತೆಗಳು. ನಾನು ನರ್ವಸ್‌ ಆಗಿದ್ದರೂ ಕೋಚಿಂಗ್‌ ಸಿಬಂದಿ ಹುರಿದುಂಬಿಸಿದರು’ ಎಂದು ಪೃಥ್ವಿ ಶಾ ಹೇಳಿದರು. ಪೃಥ್ವಿ ಶಾ ಗಳಿಕೆ 38 ಎಸೆತಗಳಿಂದ 56 ರನ್‌. ಇದರಲ್ಲಿ 6 ಬೌಂಡರಿ, 2 ಸಿಕ್ಸರ್‌ ಸೇರಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ