ಮುಳುಗುತ್ತಿರುವ ಆರ್‌ಸಿಬಿಗೆ ಕೆಕೆಆರ್‌ ಸವಾಲು

ಕೊಹ್ಲಿ ಪಡೆಯಿಂದ ಪವಾಡ ಅಸಾಧ್ಯ ; ರಸೆಲ್‌ಗೆ ಗಾಯ, ಕೆಕೆಆರ್‌ಗೆ ಚಿಂತೆ

Team Udayavani, Apr 19, 2019, 10:06 AM IST

ಕೋಲ್ಕತಾ: ಪ್ಲೇ ಆಫ್ ನಿಂದ ಬಹುತೇಕ ದೂರವಾಗಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ.

“ಈಡನ್‌ ಗಾರ್ಡನ್ಸ್‌’ನಲ್ಲಿ ನಡೆ ಯಲಿರುವ ಈ ಮರು ಹಣಾಹಣಿ ಯಲ್ಲಿ ಆರ್‌ಸಿಬಿ ಗೆದ್ದು ಮುಂದಿನ ಹಂತಕ್ಕೇರಲು ಏನಾದರೂ ಪವಾಡ ನಡೆದೀತೇ ಎನ್ನುವ ನಿರೀಕ್ಷೆಯಲ್ಲಿದ್ದರೆ, ಇತ್ತ ಕೆಕೆಆರ್‌ ತನ್ನ ಪ್ಲೇ ಆಫ್ ಹಂತವನ್ನು ಜೀವಂತವಾ ಗಿರಿಸಿಕೊಳ್ಳಲು ಶತಾಯ ಗತಾಯ ಹೋರಾಟ ಮಾಡುವ ಸಾಧ್ಯತೆ ಇದೆ.

ಧ್ವಂಸಗೈದಿದ್ದ ರಸೆಲ್‌!
ಬೆಂಗಳೂರಿನಲ್ಲಿ ನಡೆದ ಇತ್ತಂಡಗಳ ನಡುವಿನ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ 3 ವಿಕೆಟಿಗೆ 205 ರನ್‌ ಪೇರಿಸಿಯೂ ಸೋತಿತ್ತು. ಬಿಗ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಬೆಂಗಳೂರಿನ ಬೌಲಿಂಗನ್ನು ಚಿಂದಿ ಮಾಡಿ ಕೆಕೆಆರ್‌ಗೆ 5 ವಿಕೆಟ್‌ಗಳ ಅಮೋಘ ಗೆಲುವು ತಂದಿತ್ತಿದ್ದರು. ರಸೆಲ್‌ ಗಳಿಕೆ ಬರೀ 13 ಎಸೆತಗಳಿಂದ ಅಜೇಯ 48 ರನ್‌ (7 ಸಿಕ್ಸರ್‌, 1 ಬೌಂಡರಿ). ಈ ಆಘಾತದಿಂದ ಆರ್‌ಸಿಬಿ ಚೇತರಿಸಿಕೊಂಡಿರುವುದು ಬಹುಶಃ ಅನುಮಾನ.

ಆದರೆ ಈ ಬಾರಿ ಆ್ಯಂಡ್ರೆ ರಸೆಲ್‌ ಗಾಯಾ ಳಾಗಿದ್ದು, ಆರ್‌ಸಿಬಿ ವಿರುದ್ಧ ಆಡುವುದು ಬಹುತೇಕ ಅನುಮಾನ. ಇದರ ಲಾಭವೆತ್ತಲು ಕೊಹ್ಲಿ ಪಡೆ ಪ್ರಯತ್ನಿಸಬೇಕಿದೆ.

4ನೇ ಸ್ಥಾನದಲ್ಲಿ ಕೆಕೆಆರ್‌
ಸದ್ಯ ಕೆಕೆಆರ್‌ 9 ಪಂದ್ಯಗಳಲ್ಲಿ ಐದನ್ನು ಗೆದ್ದು 4ನೇ ಸ್ಥಾನದಲ್ಲಿದೆ. ಉಳಿದ ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಲೇಬೇಕು.

ವಿಶ್ವಕಪ್‌ಗೆ ಆಯ್ಕೆಯಾಗಿರುವ ಹುರುಪಿನಲ್ಲಿರುವ ದಿನೇಶ್‌ ಕಾರ್ತಿಕ್‌ ಈ ಪಂದ್ಯದ ಮೂಲಕವಾದರೂ ಬ್ಯಾಟಿಂಗ್‌ ಫಾರ್ಮ್ ಕಂಡುಕೊಳ್ಳುವರೇ ಎಂಬುದೊಂದು ನಿರೀಕ್ಷೆ. ರಾಬಿನ್‌ ಉತ್ತಪ್ಪ, ಕ್ರಿಸ್‌ ಲಿನ್‌ ತಂಡದ ಪ್ರಮುಖ ಬ್ಯಾಟ್ಸ್‌ಮ ನ್‌ಗಳು. ಬೌಲಿಂಗ್‌ನಲ್ಲಿ ತ್ರಿವಳಿ ಸ್ಪಿನ್ನರ್‌ಗಳು ಘಾತಕವಾಗಿ ಪರಿಣಮಿಸುವ ಸಾಧ್ಯತೆ ಯು ಹೆಚ್ಚಿದೆ.

ಗಾಯಾಳು ರಸೆಲ್‌ ಅನುಮಾನ
ಬೆಂಗಳೂರಿನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿ ಮೇಲೆ ಘಾತಕವಾಗಿ ಎರಗಿ ಕೆಕೆಆರ್‌ಗೆ ಸ್ಫೋಟಕ ಜಯವೊಂದನ್ನು ತಂದಿತ್ತ ಬಿಗ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಈಗ ಗಾಯಾಳಾಗಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಅವರು ನೋವಿನಲ್ಲೇ ಆಡಿದ್ದರು. ಹೀಗಾಗಿ ಶುಕ್ರವಾರದ ಆರ್‌ಸಿಬಿ ಎದುರಿನ ಮರು ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೆಕೆಆರ್‌ ಕಪ್ತಾನ ದಿನೇಶ್‌ ಕಾರ್ತಿಕ್‌, “ನಿನ್ನೆ ಎಕ್ಸ್‌ -ರೇ ಮಾಡಲಾಗಿದ್ದು, ಅವರ ಮೇಲೆ ನಾವು ನಿಗಾ ಇರಿಸಿದ್ದೇವೆ. ನಮ್ಮ ಯೋಜನೆ ಪ್ರಕಾರ ರಸೆಲ್‌ ಶುಕ್ರವಾರದ ಪಂದ್ಯದ ಯೋಜನೆಯಲ್ಲಿ ಇದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕು…’ ಎಂದಿದ್ದಾರೆ.

ಬೌಲಿಂಗ್‌ನದ್ದೇ ತಲೆನೋವು
ಬೆಂಗಳೂರು ತಂಡ ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್ ಅವರಂತಹ ದಿಗ್ಗಜ ಆಟಗಾರರ ಸಮಯೋಚಿತ ಬ್ಯಾಟಿಂಗ್‌ ಹೊರತಾಗಿಯೂ ಸೋಲು ಅನುಭವಿಸುತ್ತಿದೆ. ಇದಕ್ಕೆ ಕಾರಣ, ಬೆಂಗಳೂರು ತಂಡದ ಕಳಪೆ ಬೌಲಿಂಗ್‌. ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಹೊರತುಪಡಿಸಿ, ತಂಡದ ವೇಗ ಹಾಗೂ ಸ್ಪಿನ್‌ ವಿಭಾಗದ ಸಂಪೂರ್ಣವಾಗಿ ಹಳಿ ತಪ್ಪಿದೆ. ಎದುರಾಳಿ ತಂಡಕ್ಕೆ ಭಾರೀ ರನ್‌ ಬಿಟ್ಟುಕೊಡುತ್ತಿರುವುದು ನಾಯಕ ವಿರಾಟ್‌ ಕೊಹ್ಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವೇಗದ ಬೌಲಿಂಗ್‌ ವಿಭಾಗದ ಮಾನ ಕಾಪಾಡುವಲ್ಲಿ ನವದೀಪ್‌ ಸೈನಿ ತಕ್ಕಮಟ್ಟಿಗೆ ಯಶಸ್ಸು ಕಂಡರೂ ಇದರಿಂದ ದೊಡ್ಡ ಮಟ್ಟದ ಲಾಭವೇನೂ ಆಗಿಲ್ಲ. ಮೊಹಮ್ಮದ್‌ ಸಿರಾಜ್‌ ನೀರಿನಂತೆ ರನ್‌ ಬಿಟ್ಟುಕೊಡುತ್ತಿದ್ದಾರೆ. ಅನುಭವಿ ಉಮೇಶ್‌ ಯಾದವ್‌ ಕೂಡ ಭಾರೀ ದುಬಾರಿಯಾಗಿದ್ದಾರೆ. ಆಲ್‌ರೌಂಡರ್‌ ಮೊಯಿನ್‌ ಅಲಿ ಪರಾÌಗಿಲ್ಲ ಎನ್ನಬಹುದು. ಗಾಯ ಗೊಂಡಿರುವ ವೇಗದ ಬೌಲರ್‌ ನಥನ್‌ ಕೋಲ್ಟರ್‌ ನೈಲ್‌ ಬದಲು ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾದ ಅನುಭವಿ ಬೌಲರ್‌ ಡೇಲ್‌ ಸ್ಟೇನ್‌ ಕೆಕೆಆರ್‌ ವಿರುದ್ಧ ಆಡುವ ನಿರೀಕ್ಷೆ ಇದೆ. ಎಂಟರಲ್ಲಿ 7 ಪಂದ್ಯಗಳನ್ನು ಸೋತಿ ರುವ ಆರ್‌ಸಿಬಿ ಅಂಕಪ ಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ